ಗಣಿಯಲ್ಲಿ ಸಿಲುಕಿರುವ 9 ಕಾರ್ಮಿಕರಲ್ಲಿ ಓರ್ವನ ಮೃತದೇಹ ಪತ್ತೆ

ಗುವಾಹಟಿ:

     ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯಲ್ಲಿ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ ಒಂಬತ್ತು ಕಾರ್ಮಿಕರ ಪೈಕಿ ಓರ್ವನ ಮೃತದೇಹವನ್ನು ರಕ್ಷಣಾ ಕಾರ್ಯಾಚರಣೆಯ ಮೂರನೇ ದಿನವಾದ ಇಂದು ಬುಧವಾರ ಸೇನಾ ಡೈವರ್‌ಗಳು ಹೊರತೆಗೆದಿದ್ದಾರೆ.ನೌಕಾಪಡೆ, ಸೇನೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿಯ ತಂಡ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಿದ್ದರೂ, ಎಂಟು ಮಂದಿ ಬದುಕುಳಿಯುವ ಸಾಧ್ಯತೆಗಳು ಕ್ಷೀಣವಾಗಿದೆ.

    ಉಮ್ರಾಂಗ್ಸೊದ 3 ಕಿಲೋ ಪ್ರದೇಶದಲ್ಲಿ ನೆಲೆಗೊಂಡಿರುವ ಕಲ್ಲಿದ್ದಲು ಗಣಿಯಲ್ಲಿ ಸೋಮವಾರ ಹಠಾತ್ ನೀರು ಹರಿದು ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದರು. ಇಂದು ಮುಳುಗುಗಾರರು ಮೃತದೇಹವನ್ನು ಗಣಿಯಲ್ಲಿ ಪತ್ತೆ ಹಚ್ಚಿದ್ದು, ಅವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

   21 ಪ್ಯಾರಾ ಡೈವರ್‌ಗಳು ಇದೀಗ ಬಾವಿಯ ತಳದಿಂದ ನಿರ್ಜೀವ ದೇಹವನ್ನು ಹೊರತೆಗೆದಿದ್ದಾರೆ. ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬದವರ ಜೊತೆ ನಾವು ನಿಲ್ಲುತ್ತೇವೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಎಕ್ಸ್‌ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

   ರಕ್ಷಣಾ ಕಾರ್ಯಾಚರಣೆಯು ತ್ವರಿತವಾಗಿ ಮುಂದುವರೆದಿದೆ, ಸೇನೆ ಮತ್ತು ಎನ್‌ಡಿಆರ್‌ಎಫ್‌ ಡೈವರ್‌ಗಳು ಈಗಾಗಲೇ ಬಾವಿಗೆ ಪ್ರವೇಶಿಸಿದ್ದಾರೆ. ನೌಕಾಪಡೆ ಸಿಬ್ಬಂದಿ ಸ್ಥಳದಲ್ಲಿದ್ದು, ಅಂತಿಮ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.ಗಣಿಯನ್ನು ಅಕ್ರಮವಾಗಿ ನಡೆಸುತ್ತಿರುವಂತೆ ಕಂಡುಬರುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.