ಕಲಬುರಗಿ :
ಜಮೀನು ಅಕ್ರಮ ತಡೆಗೆ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ರಾಜ್ಯದಲ್ಲಿನ ಎಲ್ಲ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಕಲಬುರಗಿ ವಿಭಾಗದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯಾರದೋ ಜಮೀನನ್ನು ಮತ್ತೊಬ್ಬರು ಲಪಟಾಯಿಸುವುದನ್ನು ತಡೆಯಲು, ಬೆಳೆ ನಷ್ಟ ಮತ್ತಿತರ ಸಂದರ್ಭಗಳಲ್ಲಿ ದೊರೆಯುವ ಪರಿಹಾರವನ್ನು ಮತ್ತೊಬ್ಬರು ಪಡೆದು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ರಾಜ್ಯದಲ್ಲಿನ ಎಲ್ಲ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಜುಲೈ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ” ಎಂದು ತಿಳಿಸಿದ್ದಾರೆ.
ರಾಜ್ಯದಾದ್ಯಂತ 4 ಕೋಟಿಗೂ ಅಧಿಕ ಆರ್ಟಿಸಿ ಮಾಲೀಕರಿದ್ದಾರೆ. ಈ ಪೈಕಿ 1.75 ಕೋಟಿ ಆರ್ಟಿಸಿಗಳನ್ನು ಆಧಾರ್ ಜೊತೆಗೆ ಜೋಡಿಸಲಾಗಿದೆ. ಅಲ್ಲದೆ, 1.20 ಕೋಟಿ ಆರ್ಟಿಸಿಗಳ್ನು ಒಟಿಪಿ ಮೂಲಕ ಇಕೆವೈಸಿ ಮಾಡಲಾಗಿದೆ. ಇನ್ನೂ ಕಲಬುರಗಿ ವಿಭಾಗದಲ್ಲಿ 45 ಲಕ್ಷ ಆರ್ಟಿಸಿ ಮಾಲೀಕರಿದ್ದು ಈ ಪೈಕಿ 18 ಲಕ್ಷ ಆರ್ಟಿಸಿಗಳನ್ನು ಮಾತ್ರ ಆಧಾರ್ ಜೊತೆಗೆ ಜೋಡಿಸಲಾಗಿದೆ. ಅಂದರೆ ಶೇ. 40 ರಷ್ಟು ಕೆಲಸ ಮಾತ್ರ ಆಗಿದ್ದು, ಇದು ಸಾಲದು. ಮುಂದಿನ ಜುಲೈ ತಿಂಗಳ ಒಳಗಾಗಿ ಆಧಾರ್ ಸೀಡಿಂಗ್ ವಿಚಾರದಲ್ಲಿ ಶೇ. 90 ರಷ್ಟು ಪ್ರಗತಿ ಸಾಧಿಸಬೇಕು” ಎಂದು ತಾಕೀತು ಮಾಡಿದರು.
ಆರ್ಟಿಸಿಗಳನ್ನು ಆಧಾರ್ಗೆ ಲಿಂಕ್ ಮಾಡುವ ಮೂಲಕ ಯಾರದ್ದೋ ಜಮೀನನ್ನು ಮತ್ಯಾರೋ ಮಾರಾಟ ಮಾಡುವಂತಹ ವಂಚನೆಗಳನ್ನು ತಡೆಯಬಹುದು. ಅರ್ಹ ರೈತರಿಗೆ ಸರಿಯಾದ ಸಮಯಕ್ಕೆ ಪರಿಹಾರ ತಲುಪಿಸಲು ಹಾಗೂ ಮ್ಯುಟೇಶನ್, ಇನ್ಪುಟ್ ಸಬ್ಸಿಡಿ ನೀಡುವುದಕ್ಕೂ ಇದು ಸಹಕಾರಿಯಾಗುತ್ತದೆ. ಹೀಗಾಗಿ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಒಪ್ಪಿಸಿ ಆಧಾರ್ ಜೋಡಣೆ ಮಾಡಬೇಕು. ಆಧಾರ್ ಜೋಡಣೆಯಿಂದ ಜನರಿಗೆ ಆಗುವ ಅನುಕೂಲ ಏನು ಎಂಬ ಕುರಿತು ಕ್ಯಾಂಪೇನ್ ಮಾಡಿ, ಇದರಿಂದ ಒಳ್ಳೆಯ ಸರಳ ಆಡಳಿತ ನೀಡಬಹುದು, ಅಧಿಕಾರಿಗಳ ಕೆಲಸದ ಒತ್ತಡವೂ ಕಡಿಮೆಯಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು.
ಅಲ್ಲದೆ, ಆರ್ಟಿಸಿ-ಆಧಾರ್ ಲಿಂಕ್ ಮಾಡುವ ಮೂಲಕ ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಎಷ್ಟು ಎಂಬ ಬಗ್ಗೆ ಕೇಂದ್ರ ಸರ್ಕಾರಕ್ಕೆ ವಾಸ್ತವದ ಅಂಕಿ ನೀಡಬಹುದು. ಕೇಂದ್ರ ಸರ್ಕಾರದ ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಶೇ.44 ಮಾತ್ರ. ಆದರೆ, ವಾಸ್ತವದಲ್ಲಿ ಈ ಸಂಖ್ಯೆ ಶೇ.65 ರಿಂದ ಶೇ.70 ರಷ್ಟಿದೆ. ಈ ನಿಖರ ಸಂಖ್ಯೆಯನ್ನು ನೀಡುವ ಮೂಲಕ ಕೇಂದ್ರದಿಂದ ಹೆಚ್ಚಿನ ಬರ ಪರಿಹಾರ ಹಣ ಪಡೆಯಲು ಸಹಕಾರಿಯಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಭೆಯಲ್ಲಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ