ಬೆಂಗಳೂರು
ಕರ್ನಾಟಕದಲ್ಲಿ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಕುಡಿಯುವ ನೀರಿಗೆ ಕೊರತೆ ಉಂಟಾಗಿದೆ. ಖಾಸಗಿ ಬೋರವೆಲ್‌ಗಳು ಇದ್ದಲ್ಲಿ ಅವುಗಳನ್ನು ಬಾಡಿಗೆಗೆ ಪಡೆಯಬೇಕು ಅಲ್ಲದೇ ಅವಶ್ಯವಿರುವ ಕಡೆ ಬೋರವೆಲ್ ಕೊರೆಸಿ ಜನರಿಗೆ ಕುಡಿಯುವ ನೀರು ಪೂರೈಸಬೇಕು ಎಂದು ಜಿಲ್ಲಾಡಳಿತಗಳಿಗೆ ಸರ್ಕಾರ ನಿರ್ದೇಶನ ನೀಡಿದೆ.
ಕೃಷಿ ಚಟುವಟಿಕೆ, ಕುಡಿಯುವ ನೀರಿನ ಉದ್ದೇಶಕ್ಕೆ ಬೋರ್‌ವೆಲ್ ಕೊರೆಯುವುದು ಹೆಚ್ಚಾದಂತೆ ಬೇಡಿಕೆಯ ಜೊತೆ ದರಗೂ ಏರಿದೆ. ಆದ್ದರಿಂದ ಬೋರ್‌ವೆಲ್ ಕೊರತೆಯುವ ಏಜೆನ್ಸಿಗಳು ಹಾಗೂ ರೈತರಿಗೆ ಹೊರೆಯಾಗದಂತೆ ಬೋರ್‌ವೆಲ್ ಕೊರೆಯಲು ಏಕರೂಪದ ದರ ನಿಗದಿ ಮಾಡುವ ನಿರೀಕ್ಷೆ ಇದೆ.
ಬೆಂಗಳೂರು ಸೇರಿ ವಿವಿಧ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತದಿಂದಾಗಿ ಬೋರ್‌ವೆಲ್ ಬರಿದಾಗುತ್ತಿದೆ. ಬೋರ್ ವೆಲ್ ಕೊರೆಯಲು ದುಬಾರಿ ಶುಲ್ಕವನ್ನು ಮಾಲೀಕರು ವಸೂಲಿ ಮಾಡಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಎಂಬ ದೂರುಗಳು ಸರ್ಕಾರವನ್ನು ತಲುಪಿದೆ.
ರೈತ ಮುಖಂಡ ಈಚಘಟ್ಟ ಸಿದ್ಧವೀರಪ್ಪ ಎಂಬುವವರು ಮಾತನಾಡಿ, “ಕಳೆದ ಒಂದು ತಿಂಗಳ ಹಿಂದೆ ಬೋರ್ ವೆಲ್ ಕೊರೆಯಲು ಒಂದು ಅಡಿಗೆ ರೂ. 90 ಇತ್ತು. ಆದರೆ ಇದೀಗ ರೂ. 120 ರಿಂದ 130ಕ್ಕೆ ದರ ಏರಿಕೆಯಾಗಿದೆ” ಎಂದು ಆರೋಪಿಸಿದರು.
“ಯಾವ ಆಧಾರದ ಮೇಲೆ ದರ ಏರಿಕೆ ಮಾಡಲಾಗಿದೆ. ರೈತರು ಅಸಂಘಟಿತರಾಗಿರುವುದರಿಂದ ಪ್ರಶ್ನೆ ಮಾಡಲು ಸಾಧ್ಯವಾಗುತ್ತಿಲ್ಲ. ಬೋರ್ ವೆಲ್ ಏಜೆನ್ಸಿಗಳಿಂದ ರೈತರಿಗೆ ಶೋಷಣೆಯಾಗುತ್ತಿದೆ. ಸರ್ಕಾರ ಏಕರೂಪದ ದರವನ್ನು ನಿಗದಿ ಮಾಡಿ, ರೈತರ ನೆರವಿಗೆ ಬರಬೇಕು” ಎಂದು ಒತ್ತಾಯಿಸಿದರು.
ಬರಗಾಲದ ಪರಿಸ್ಥಿತಿಯಲ್ಲಿ ರೈತರನ್ನು ಶೋಷಣೆ ಮಾಡಲಾಗುತ್ತಿದೆ. ಬೋರ್‌ವೆಲ್ ಕೊರೆಯುವ ಏಜೆನ್ಸಿಗಳು ದರಗಳನ್ನು ಏಕಾಏಕಿ ಏರಿಕೆ ಮಾಡಿವೆ. ಇದಕ್ಕೆ ಪರಿಹಾರ ಎಂದರೆ ಏಕರೂಪದ ದರ ನಿಗದಿ ಮಾಡಿ, ಮಾನದಂಡ ರೂಪಿಸುವ ಅಗತ್ಯವಿದೆ ಎಂದು ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಆದರೆ ಬೋರ್ ವೆಲ್ ಕೊರೆಯುವ ವಾಹನಗಳ ಮಾಲೀಕರು, ಬೋರ್ ವೆಲ್ ಕೊರೆಯಲು ಕಾರ್ಮಿಕರ ಸಮಸ್ಯೆ ಎದುರಾಗಿದೆ. ಛತ್ತೀಸ್‍ಗಢದಿಂದ ಕಾರ್ಮಿಕರನ್ನು ಕರೆದುಕೊಂಡು ಬರಲಾಗುತ್ತಿದೆ. ಉಪಕರಣಗಳ ವೆಚ್ಚವೂ ಹೆಚ್ಚಾಗಿದೆ. ನಾವು ಕೂಡ ರೈತರ ಪರವಾಗಿದ್ದೇವೆ. ಕಾರ್ಮಿಕರ ಕೊರತೆಯಿಂದ ಶೇ. 25ರಷ್ಟು ಬೋರ್ ವೆಲ್ ಕೊರೆಯುವ ವಾಹನಗಳು ಸ್ಥಗಿತಗೊಂಡಿವೆ ಎಂದು ಹೇಳಿದ್ದಾರೆ.
ಈಗಾಗಲೇ ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಬೋರ್ ವೆಲ್ ಕೊರೆಯುವ ಏಜೆನ್ಸಿಗಳು ಹಾಗೂ ರೈತರೊಂದಿಗೆ ಸಭೆಯನ್ನು ನಡೆಸಿದ್ದಾರೆ. ಈ ಸಭೆಯಲ್ಲಿ ರೈತರು ಜಿಲ್ಲೆಯಲ್ಲಿ ಅಂತರ್ಜಲ ಕುಸಿತದಿಂದಾಗಿ ಬೋರ್ ವೆಲ್ ಬರಿದಾಗುತ್ತಿದ್ದು, ಹೊಸ ಬೋರ್ ವೆಲ್ ಕೊರೆಯಲು ಅತ್ಯಂತ ದುಬಾರಿ ಶುಲ್ಕವನ್ನು ವಸೂಲಿ ಮಾಡಿ ರೈತರ ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳು ರೈತರಿಗೆ ಹೊರೆಯಾಗದಂತೆ ಹಾಗೂ ಬೋರ್ ವೆಲ್ ಕೊರೆಯುವ ಮಾಲೀಕರಿಗೆ ಹಾಗೂ ಏಜೆನ್ಸಿಗಳಿಗೂ ನಷ್ಟವಾಗದಂತೆ ಬೋರ್ ವೆಲ್ ಕೊರೆಯಲು ಏಕರೂಪ ದರ ನಿಗದಿ ಮಾಡಲು ಸೂಚನೆ ನೀಡಿದ್ದಾರೆ. ಏಕರೂಪ ದರ ನಿಗದಿಗೆ ತಾಲ್ಲೂಕುವಾರು ಆಯಾ ತಹಶೀಲ್ದಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ರೈತ ಸಂಘನೆಗಳ ಮುಖಂಡರು, ಬೋರ್ ವೆಲ್ ಏಜೆನ್ಸಿಗಳನ್ನು ಒಳಗೊಂಡಂತೆ ಒಂದು ಸಮಿತಿಯನ್ನು ರಚನೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ಅಲ್ಲದೇ ವಿಫಲವಾದ ಬೋರ್ ವೆಲ್‌ಗಳನ್ನು ಮುಚ್ಚಲು ಸಂಬಂಧಪಟ್ಟ ಬೋರ್ ವೆಲ್ ಏಜೆನ್ಸಿಗಳು ತಕ್ಷಣವೇ ಕ್ರಮಗಳನ್ನು ಕೈಗೊಳ್ಳಬೇಕು. ವಿಫಲವಾದ ಬೋರ್ ವೆಲ್ ಕೇಸಿಂಗ್ ಪೈಪ್‍ಗೆ ಯಾವುದೇ ಕಾರಣಕ್ಕೂ ಹಣ ತೆಗೆದುಕೊಳ್ಳಬಾರದು. ಕಡ್ಡಾಯವಾಗಿ ಬಿಲ್ ನೀಡಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಕೆಯನ್ನು ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ