ಕೊಳವೆ ಬಾವಿಗೆ ಬಿದ್ದ ಬಾಲಕ; ರಕ್ಷಣಾ ಕಾರ್ಯಾಚರಣೆ ಜೋರು

ಜೈಪುರ: 

    ರಾಜಸ್ಥಾನದ ಝಲಾವರ್ ಜಿಲ್ಲೆಯ ಕೃಷಿ ಜಮೀನೊಂದರಲ್ಲಿ ಭಾನುವಾರ 5 ವರ್ಷದ ಬಾಲಕನೊಬ್ಬ 32 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದು,  ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಕೊಳವೆ ಬಾವಿಗೆ ಬಿದ್ದ ಬಾಲಕನನ್ನು ಪ್ರಹ್ಲಾದ್ ಎಂದು ಗುರುತಿಸಲಾಗಿದೆ. ಮಧ್ಯಾಹ್ನ 1.15 ರ ಸುಮಾರಿಗೆ ಪ್ರಹ್ಲಾದ್ ಹೊಲದಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆತನ ಪೋಷಕರು ಹೊಲದ ಇನ್ನೊಂದು ಬದಿಯಲ್ಲಿ ಕೆಲಸದಲ್ಲಿ ನಿರತರಾಗಿದ್ದಾಗ ಬೋರ್‌ವೆಲ್ ಬಳಿಯ ಕಲ್ಲಿನ ಚಪ್ಪಡಿಯ ಮೇಲೆ ಕುಳಿತುಕೊಂಡಿದ್ದ ನಂತರ ಜಾರಿ ಬಿದ್ದಿದ್ದಾನೆ ಎಂದು ಹೇಳಲಾಗಿದೆ.

    ಪ್ರಹ್ಲಾದ್ ಪ್ರಸ್ತುತ 32 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸ್ಥಳದಲ್ಲಿವೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಸ್ಥಳೀಯ ಯಂತ್ರಗಳನ್ನು ಬಳಸಿಕೊಂಡು ಬಾಲಕನನ್ನು ಹೊರತೆಗೆಯಲು ತಂಡಗಳು ಯೋಜಿಸುತ್ತಿವೆ” ಎಂದು ಎಸ್‌ಡಿಎಂ ಛತ್ರಪಾಲ್ ಚೌಧರಿ ಹೇಳಿದ್ದಾರೆ. ಬಾಲಕನ ತಂದೆ ಕಲುಲಾಲ್ ಹೇಳಿಕೆ ಪ್ರಕಾರ, ಎರಡು ದಿನಗಳ ಹಿಂದೆ ಕೊಳವೆ ಬಾವಿಯನ್ನು ಅಗೆಯಲಾಗಿತ್ತು. ಅದರಿಂದ ನೀರು ಹೊರಹರಿವು ಇರಲಿಲ್ಲ ಮತ್ತು ಅದನ್ನು ಮುಚ್ಚಲು ನಿರ್ಧರಿಸಲಾಗಿತ್ತು ಎಂದು ತಿಳಿದು ಬಂದಿದೆ. 

    ಸ್ಥಳದಲ್ಲಿ ವೈದ್ಯಕೀಯ ತಂಡವೂ ಇದೆ. ಬಾಲಕನಿಗೆ ಪೈಪ್‌ಗಳ ಮೂಲಕ ಆಮ್ಲಜನಕ ಪೂರೈಸಲಾಗುತ್ತಿದೆ ಎಂದು ಡಿಎಸ್‌ಪಿ ಜೈಪ್ರಕಾಶ್ ಅಟಲ್ ತಿಳಿಸಿದ್ದಾರೆ. ಬಾಲಕನನ್ನು ಮೇಲೆತ್ತಲು ನಾಲ್ಕು ಜೆಸಿಬಿಗಳನ್ನು ನಿಯೋಜನೆ ಮಾಡಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 

   ರಾಜ್ಯ ಸರ್ಕಾರವು ಎಲ್ಲಾ ಕೊಳವೆಬಾವಿಗಳನ್ನು ಮುಚ್ಚಲು ಸ್ಪಷ್ಟ ಸೂಚನೆಗಳನ್ನು ನೀಡಿದೆ ಆದರೆ ಹಲವು ಇನ್ನೂ ಮುಚ್ಚಲ್ಪಟ್ಟಿಲ್ಲ. ಹಿಂದೆ, ಮಕ್ಕಳು ಆಕಸ್ಮಿಕವಾಗಿ ತೆರೆದ ಕೊಳವೆಬಾವಿಗಳಿಗೆ ಬಿದ್ದ ಘಟನೆಗಳು ಅನೇಕ ಬಾರಿ ನಡೆದಿದ್ದವು.

Recent Articles

spot_img

Related Stories

Share via
Copy link