ಬಿಪಿಎಲ್ ರದ್ದು : ಆಹಾರ ಇಲಾಖೆಗೆ ಹಿರಿಯ ಜೀವಗಳ ಅಲೆದಾಟ!

ತುಮಕೂರು : 

      ರಾಜ್ಯ ಸರಕಾರ ಬಿಪಿಎಲ್ ಅಕ್ರಮ ಪಡಿತರ ಚೀಟಿಗಳ ರದ್ಧತಿಗೆ ಮುಂದಾಗಿ ಐಟಿ ತೆರಿಗೆ ಪಾವತಿದಾರರು, 1.20ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಉಳ್ಳವರು, ಸರಕಾರಿ ನೌಕರಿಯಲ್ಲಿರುವವರು, 3 ಹೆಕ್ಟೇರ್‍ಗಿಂತಲೂ ಅಧಿಕ ಜಮೀನು ಹೊಂದಿರುವ ಕಾರ್ಡ್‍ಗಳನ್ನು ರದ್ದುಮಾಡುವ ನಿಯಮ ರೂಪಿಸಿ ಲಕ್ಷಾಂತರ ಮಂದಿಯ ಕಾರ್ಡ್‍ಗಳನ್ನು ರದ್ದುಗೊಳಿಸಿ ಎಪಿಎಲ್‍ಗೆ ಪ್ರಮೋಟ್ ಮಾಡುತ್ತಿದೆ. ಆದರೆ ಈ ನಿಯಮಾವಳಿಗಳು ಅವಿಭಕ್ತ ಕುಟುಂಬಗಳ ಅರ್ಹ ಫಲಾನುಭವಿಗಳಿಗೆ ಸಂಕಷ್ಟ ತಂದೊಡ್ಡುತ್ತಿದ್ದು, ಬಿಪಿಎಲ್ ಕಾರ್ಡ್ ರದ್ಧತಿಯ ವಿಷಯವೇ ಗೊತ್ತಿರದೆ ಹಿರಿಜೀವಗಳು, ಅವಿಭಕ್ತ ಕುಟುಂಬಗಳವರು ಆಹಾರ ಇಲಾಖೆಗೆ ಎಡತಾಕುತ್ತಾ ಹಿಡಿಶಾಪಹಾಕುವ ಸ್ಥಿತಿ ನಿರ್ಮಾಣವಾಗಿದೆ.

       ಸಮಸ್ಯೆ ಏನು?:

      ಬಿಪಿಎಲ್ ಪಡಿತರ ಚೀಟಿಯಲ್ಲಿ ನೋಂದಣಿಯಾಗಿರುವ ಕುಟುಂಬದ ಸದಸ್ಯರಲ್ಲಿ ಯಾರೇ ಒಬ್ಬರು ಐಟಿ ಪಾವತಿದಾರರಾಗಿದ್ದರೂ ಇಡೀ ಕುಟುಂಬದ ಪಡಿತರ ಚೀಟಿ ರದ್ದುಮಾಡುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಬಹುತೇಕ ಕಾರ್ಡ್‍ನಲ್ಲಿ ಉದ್ಯೋಗಸ್ಥ ತೆರಿಗೆ ಪಾವತಿದಾರ ಮಕ್ಕಳ ಹೆಸರು ದಾಖಲೆ ನಿಮಿತ್ತ ಪಡಿತರ ಚೀಟಿಯಲ್ಲಿ ಹಾಗೆ ಉಳಿಸಿದ್ದು, ಹಲವರು ತಮ್ಮ ಪೋಷಕರಿಂದ ದೂರಾಗಿ ಪಟ್ಟಣ, ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ತಂದೆ-ತಾಯಿಯತ್ತ ತಿರುಗಿ ನೋಡದವರು ಬಹಳ ಮಂದಿಯಿದ್ದಾರೆ. ಮತ್ತೆ ಕೆಲ ಕುಟುಂಬಗಳಲ್ಲಿ ಒಬ್ಬ ಮಗ/ಮಗಳು ನೌಕರಿಯಲ್ಲಿದ್ದರೆ ಮತ್ತೊಬ್ಬ ಮಗ-ಮಗಳಿಗೆ ಸೂಕ್ತ ಉದ್ಯೋಗವಿಲ್ಲದೆ ಪೋಷಕರ ಆಶ್ರಯದಲ್ಲೇ ಬದುಕುತ್ತಿದ್ದಾರೆ. ಹೀಗಾಗಿ ಮನೆಯ ಒಬ್ಬ ಸದಸ್ಯರ ಆದಾಯ ತೆರಿಗೆ ಪಾವತಿ ಮಾಹಿತಿ ಆಧರಿಸಿ ಇಡೀ ಕುಟುಂಬದ ಬಿಪಿಎಲ್‍ಚೀಟಿ ರದ್ದು ಮಾಡಿ ಎಪಿಎಲ್‍ಗೆ ಪರಿವರ್ತಿಸಿರುವುದು ಅರ್ಹರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

    ಸಾಲ ಪಡೆಯಲು ಐಟಿ ರಿಟರ್ನ್ ಮಾಡಿಸಿದ್ದು, ಆಹಾರಕ್ಕೆ ಕುತ್ತಾಯ್ತು:

      ಇನ್ನು ಹೊಸಮನೆ ನಿರ್ಮಾಣ, ನಿವೇಶನ ಖರೀದಿ ಸೌಲಭ್ಯ ಪಡೆಯಲು ಆದಾಯ ಮೂಲ, ವೆಚ್ಚಗಳನ್ನು ತೋರಿಸಿ ಐಟಿ ರಿಟರ್ನ್ ಅನ್ನು ಇಂದು ಬಡ ಮಧ್ಯಮವರ್ಗದವರು ಸಲ್ಲಿಕೆ ಮಾಡುತ್ತಿದ್ದು, ವಾಸ್ತವದಲ್ಲಿ ಹೇಳಿಕೊಳ್ಳುವಂತಹ ಸಿರಿವಂತರೇನಲ್ಲ. ಐಟಿ ರಿಟರ್ನ್ ಸಲ್ಲಿಕೆಯನ್ನು ಮಾನದಂಡವಾಗಿಸಿ ಶ್ರೀಮಂತರು, ಬಡ -ಮಧ್ಯಮವರ್ಗದವರನ್ನು ಒಂದೇ ತಕ್ಕಡಿಯಲ್ಲಿ ತೂಗಿ ಬಿಪಿಎಲ್ ಕಾರ್ಡ್ ರದ್ದುಪಡಿಸಿರುವುದು ಸಾಲ ಪಡೆಯಲು ಐಟಿ ರಿಟರ್ನ್ ಮಾಡಿಸಿ ಉಚಿತ ಆಹಾರಕ್ಕೆ ಕುತ್ತು ತಂದುಕೊಳ್ಳುವಂತಾಗಿದೆ. ಜಿಲ್ಲೆಯಲ್ಲಿ ಈ ತರಹದ 4117 ಮಂದಿಯ ಕಾರ್ಡ್ ರದ್ದುಮಾಡಲಾಗಿದೆ.

      ಇನ್ನೂ 1.20 ಲಕ್ಷಕ್ಕಿಂತ ಹೆಚ್ಚು ಆದಾಯವುಳ್ಳ 1323 ಮಂದಿಯನ್ನು ಗುರುತಿಸಿದ್ದು ಅವರಲ್ಲಿ 249 ಮಂದಿಯ ಕಾರ್ಡ್ ರದ್ದತಿ ಅಥವಾ ಎಪಿಎಲ್ ಪರಿವರ್ತನೆಗಾಗಿ ಕಂದಾಯ ಇಲಾಖೆ ಅಧಿಕಾರಿಗಳಿಂದ ವರದಿ ತರಿಸಿಕೊಳ್ಳಲಾಗಿದೆ. ಇನ್ನೂ ಸರಕಾರಿ ನೌಕರಿಯಲ್ಲಿದ್ದು ಬಿಪಿಎಲ್ ಕಾರ್ಡ್ ಹೊಂದಿರುವ 206 ಕುಟುಂಬಗಳಿದ್ದು, 187 ಕಾರ್ಡ್‍ಗಳು ರದ್ದಾಗಿವೆ.

11,348 ರೈತ ಕುಟುಂಬಗಳಿಗೂ ಕಾರ್ಡ್ ರದ್ಧತಿಯ ತೂಗುಕತ್ತಿ:

      ಜಿಲ್ಲೆಯಲ್ಲಿ ಎರಡೂವರೆ ಹೆಕ್ಟೇರ್‍ನಷ್ಟು ಜಮೀನಿದ್ದು(ಏಳೂವರೆ ಎಕರೆ) ಬಿಪಿಎಲ್ ಕಾರ್ಡ್ ಹೊಂದಿರುವ 11,348 ರೈತಾಪಿ ವರ್ಗದವರ ಕಾರ್ಡ್ ರದ್ದುಗೊಳಿಸುವ ಪಟ್ಟಿ ಸಹಸಿದ್ಧವಾಗಿದ್ದು, ಇನ್ನೂ ಸರಕಾರದ ಆದೇಶವಾಗಿಲ್ಲ. ಅವರದ್ದು ರದ್ದಾದರೆ ಸುಮಾರು 16 ಸಾವಿರಕ್ಕೂ ಅಧಿಕ ಕುಟುಂಬಗಳ ಬಿಪಿಎಲ್ ಕಾರ್ಡ್‍ಗಳು ಜಿಲ್ಲೆಯಲ್ಲಿ ರದ್ದಾಗಲಿದೆ. 

ಸಚಿವರು, ಶಾಸಕರೇ ಸಮಸ್ಯೆಗೆ ಪರಿಹಾರ ಕಲ್ಪಿಸಿ

      ಬಿಪಿಎಲ್ ಕಾರ್ಡ್ ರದ್ದುಗೊಂಡು ಆಹಾರ ಇಲಾಖೆಗೆ ಎಡತಾಕುತ್ತಿರುವ ಅರ್ಹ ಫಲಾನುಭವಿಗಳ ಸಮಸ್ಯೆಗೆ ಜನಪ್ರತಿನಿಧಿಗಳು, ಆಹಾರ ಇಲಾಖೆಯವರು ತ್ವರಿತ ಸ್ಪಂದಿಸಬೇಕಾದ ಅಗತ್ಯವಿದೆ. ಐಟಿ ಪಾವತಿ, ಕುಟುಂಬ ಸದಸ್ಯರ ಅಧಿಕ ಆದಾಯ ಕಾರಣ ಮುಂದುಮಾಡಿ ಕಾರ್ಡ್ ರದ್ದುಮಾಡಿರುವುದನ್ನು ಪುನರ್ ಪರಿಶೀಲಿಸಿ, ಅಂತಹ ಫಲಾನುಭವಿಗಳ ಹೆಸರನ್ನು ಕಾರ್ಡ್‍ನಿಂದ ತೆಗಿಸಿ ಉಳಿದ ಅರ್ಹರಿಗೆ ಪಡಿತರ ಒದಗಿಸಬೇಕು. ಬಿಪಿಎಲ್ ಕಾರ್ಡ್ ರದ್ದುಗೊಳಿಸಿ ಎಪಿಎಲ್‍ಗೆ ಪರಿವರ್ತಿಸಿರುವುದರಿಂದ ಹೊಸದಾಗಿ ಬಿಪಿಎಲ್ ಕಾರ್ಡ್‍ಗೆ ಅರ್ಜಿ ಸಲ್ಲಿಸಲು ತೊಡಕಾಗಿದ್ದು, ಸ್ಥಗಿತಗೊಂಡಿರುವ ರೇಷನ್ ಕಾರ್ಡ್‍ನಲ್ಲಿ ಹೆಸರು ತೆಗೆಸುವ, ಸೇರಿಸುವ ಅವಕಾಶವನ್ನು ಮತ್ತೆ ಆಹಾರ ಇಲಾಖೆ ಬೇಗ ಚಾಲೂಗೊಳಿಸಬೇಕಿದೆ. ಈ ಮೂಲಕ ಹೊಸ ಬಿಪಿಎಲ್‍ಗೆ ಕಾರ್ಡ್‍ಗೆ ಅರ್ಹ ಪಡಿತರದಾರರು ಪುನಃ ಅರ್ಜಿ ಹಾಕುವ ಅವಕಾಶವಾಗಬೇಕಿದೆ.

     ಆಹಾರ ಇಲಾಖೆಯವರು ಬಿಪಿಎಲ್ ಪಡಿತರದಾರ ಕುಟುಂಬದಲ್ಲಿ ತೆರಿಗೆ ಪಾವತಿದಾರರಿದ್ದರೆ ಅಂತಹ ಕುಟುಂಬ ಸದಸ್ಯರÀ ಹೆಸರನ್ನು ಕೈ ಬಿಟ್ಟು. ಅವರ ಯೂನಿಟ್ ಪ್ರಮಾಣದ ಆಹಾರ ಕಡಿತ ಮಾಡಬೇಕಿತ್ತು. ಅದನ್ನು ಬಿಟ್ಟು ಬಿಪಿಎಲ್ ಪಡಿತರ ಕಾರ್ಡ್‍ಗಳನ್ನೇ ರದ್ದು ಮಾಡಿರುವುದು ಸೋಂಕಿನ ಬೆರಳು ಕತ್ತರಿಸುವ ಕಡೆ ಇಡೀ ಕೈಯನ್ನೇ ಕಟ್ ಮಾಡಿದಂತಾಗಿದೆ. ಎಷ್ಟೋ ಹಿರಿಯ ನಾಗರಿಕರೆಡೆಗೆ ಅವರ ಮಕ್ಕಳು ತಿರುಗಿ ನೋಡುತ್ತಿಲ್ಲ. ರೇಷನ್ ಕಾರ್ಡ್‍ನಲ್ಲಿ ದಾಖಲೆಗಾಗಿ ಮಾತ್ರ ಮಕ್ಕಳಾಗಿ ಉಳಿದಿದ್ದಾರೆ. ಈ ರೀತಿ ಅರ್ಹರ ಕಾರ್ಡ್‍ರದ್ದು ಮಾಡಿರುವುದನ್ನು ಪುನರ್ ಪರಿಶೀಲಿಸಿ ಮತ್ತೆ ಪಡಿತರ ಚೀಟಿ ಒದಗಿಸಬೇಕು.

-ಜಯಸಿಂಹ ನಾಗರಿಕರು.

      ಸರಕಾರದ ಮಾನದಂಡÀ ಕೇಂದ್ರ ಕಚೇರಿಯಲ್ಲಿ ಒದಗಿಸಲಾದ ಪಟ್ಟಿಯ ಅನುಸಾರ ಜಿಲ್ಲೆಯಲ್ಲಿ 4117 ಐಟಿ ಪಾವತಿದಾರರು, 1323 ಮಂದಿ ಅಧಿಕ ಆದಾಯಉಳ್ಳವರು, 206 ಮಂದಿ ಸರಕಾರಿ ನೌಕರರ ಬಿಪಿಎಲ್ ಕಾರ್ಡ್‍ಗಳು ಪರಿಶೀಲನೆಗೊಳಪಟ್ಟು ರದ್ದು ಮಾಡಲಾಗುತ್ತಿದ್ದು, 3 ಹೆಕ್ಟೇರ್‍ಗಿಂತ ಅಧಿಕ ಜಮೀನುಳ್ಳವರ ಕಾರ್ಡ್‍ಗಳ ರದ್ದು ಪ್ರಕ್ರಿಯೆ ನಡೆದಿಲ್ಲ. ಪಡಿತರದಿಂದ ಯಾರು ವಂಚಿತವಾಗಬಾರದೆಂದು ಎಪಿಎಲ್ ಕಾರ್ಡ್‍ಗೆ ರೂಪಾಂತರಿಸಲು ಇಲಾಖೆ ಕ್ರಮ ವಹಿಸಿದೆ.

-ಶ್ರೀನಿವಾಸಯ್ಯ, ಜಂಟಿ ನಿರ್ದೇಶಕರು ಆಹಾರ ಇಲಾಖೆ.

 ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap