ವಿಜಯಪುರ:
ತಾಯಿಯ ಎದೆಹಾಲನ್ನು ಜೀವನಾಮೃತ ಎಂದೇ ಹೇಳಲಾಗುತ್ತದೆ. ತಾಯಿ-ಮಗುವಿನ ಬಾಂಧವ್ಯವನ್ನು ಕಾಂಗರೂ ಪರಿಕಲ್ಪನೆ ಎಂದೂ ಕರೆಯಲಾಗುತ್ತದೆ. ತಾಯಿ ಎದೆಹಾಲನ್ನು ಉಣಿಸುವ ಸಮಯದ ಈ ಬಾಂಧವ್ಯ ಮಗುವಿನ ಜೀವನ ಪೂರ್ತಿ ಸಂಬಂಧವನ್ನು ಕಾಪಾಡುವಲ್ಲಿ ಪೂರಕವಾಗಿರುತ್ತದೆ.ಉತ್ತರ ಕರ್ನಾಟಕದ ವಿಜಯಪುರದಲ್ಲಿ ಮೊದಲ ಬಾರಿಗೆ ತಾಯಿ ಎದೆಹಾಲಿನ ಬ್ಯಾಂಕ್ನ್ನು ತೆರೆಯಲಾಗುತ್ತಿದೆ.
ಮಗುವು ಜನಿಸಿದ ತಕ್ಷಣ ಉತ್ಪತ್ತಿಯಾಗುವ ಕೊಲಸ್ಟ್ರಮ್‌ಮಗುವಿಗೆ ಜೀವನ ಪೂರ್ತಿ ಆಂತರಿಕ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಬಲ್ಲ ಪ್ರತಿಕಾಯಗಳನ್ನು ಒದಗಿಸುತ್ತದೆ. ಅವಧಿಗೂ ಮುನ್ನ ಶಿಶು ಜನಿಸಿರುವುದು, ಎದೆಹಾಲು ಉತ್ಪತ್ತಿಯಾಗದೇ ಇರುವುದು, ಮಗು ತಾಯಿಯನ್ನು ಕಳೆದುಕೊಂಡಿರುವ ಸಮಯದಲ್ಲಿ, ಅಥವಾ ತಾಯಿ ಮಗುವಿಗೆ ಎದೆಹಾಲು ಉಣಿಸಲು ಸಾಧ್ಯವಾಗದ ಸಂದರ್ಭದಲ್ಲಿ ಹುಟ್ಟಿದ ಪರಿಕಲ್ಪನೆ ಈ ತಾಯಿ ಹಾಕಿನ ಬ್ಯಾಂಕ್.
ದಾನಿಗಳಿಂದ ಪಡೆದ ತಾಯಿ ಹಾಲನ್ನು ಸೇವಿಸಿದ ಮಕ್ಕಳಲ್ಲಿ ಸೋಂಕು, ಎಂಟೆರೋಕೋಲೈಟಿನ್, ತೀವ್ರವಾದ ಕಾಯಿಲೆಗಳಾಗುವ ಸಂಭವ ಕಡಿಮೆ ಎಂದು ಅಧ್ಯಯನಗಳು ತಿಳಿಸುತ್ತವೆ. ಜಾಗತಿಕವಾಗಿ ಅತಿ ಹೆಚ್ಚು ಅವಧಿಪೂರ್ವ ಜನನ ಭಾರತದಲ್ಲಿ ಆಗುತ್ತಿದ್ದು, ಎಲ್ಲಾ ಹೆರಿಗೆಗಳಲ್ಲಿ ಶೇ. 12 ರಷ್ಟು ಅವಧಿಪೂರ್ವ ಶಿಶುಗಳ ಜನನಕ್ಕೆ ಕಾರಣವಾಗುತ್ತಿದೆ. ಇಂತಹ ಹಲವು ನವಜಾತ ಶಿಶುಗಳು ವಿಶೇಷವಾಗಿ ಹಿಂದುಳಿದಿರುವ ಜಿಲ್ಲೆಗಳಲ್ಲಿ ತಾಯಿಯ ಹಾಲಿನ ಕೊರತೆಯಿಂದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
ಈ ಸಮಸ್ಯೆಯನ್ನು ಪರಿಹರಿಸಲು ವಿಜಯಪುರ ಸರ್ಕಾರಿ ಆಸ್ಪತ್ರೆಯು ಉತ್ತರ ಕರ್ನಾಟಕದಲ್ಲಿ ಮೊದಲ ಎದೆಹಾಲು ಬ್ಯಾಂಕ್ ಸ್ಥಾಪಿಸಲು ಮುಂದಾಗಿದೆ. ಇದು ವಾರ್ಷಿಕವಾಗಿ 2 ಸಾವಿರ ನವಜಾತ ಶಿಶುಗಳಿಗೆ ಸೇವೆ ಸಲ್ಲಿಸಲಿದೆ. ದಾನಿಗಳಿಂದ ತಾಯಿಯ ಹಾಲನ್ನು ಸರಿಯಾದ ರೀತಿಯಲ್ಲಿ ಪಡೆದು ಶೇಖರಿಸಲಾಗುತ್ತದೆ. ಹಾಲನ್ನು ಪಡೆಯುವ ಮುನ್ನ ತಾಯಿಯ ಅನುಮತಿಯನ್ನು ಪಡೆಯಬೇಕಾಗುತ್ತದೆ. ಅಲ್ಲದೆ ತಾಯಿಗೆ ಅವಶ್ಯಕವಿರುವ ರಕ್ತ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಹೆಪಟೈಟಿಸ್ ‘ಬಿ’, ‘ಸಿ’, ಎಚ್‌ಐವಿ, ಎಚ್‌ಟಿಎಲ್‌ವಿ–1, 2,ಸಿಫಿಲಿಸ್ ಮುಂತಾದ ಸೋಂಕುಗಳು ದಾನಿಯಾದ ತಾಯಿಗೆ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ಸ್ವಯಂ ಪ್ರೇರಿತ ದಾನಿಗಳು, ಮಗುವನ್ನು ಕಳೆದುಕೊಂಡ ತಾಯಂದಿರು, ಕೆಲಸಕ್ಕೆ ಹೋಗುವ ತಾಯಂದಿರು ಹಾಲನ್ನು ದಾನ ಮಾಡಬಹುದಾಗಿದೆ. ನವಜಾತ ಶಿಶುಗಳಲ್ಲಿ ಜೀರ್ಣಾಂಗವ್ಯೂಹದ ನ್ಯೂನತೆಗಳು ಹಾಗೂ ಕಾಯಿಲೆಗಳು ಇದ್ದಲ್ಲಿ ಉಪಯೋಗವಾಗಬಹುದಾಗಿದೆ. ಅವಧಿಗೆ ಮುನ್ನ ಜನಿಸಿದ ಮಕ್ಕಳಲ್ಲಿ 1500gm ಕ್ಕಿಂತ ತೂಕ ಕಡಿಮೆಯಿರುವ ಶಿಶುಗಳಿಗೆ ಇದು ಉಪಯೋಗವಾಗಬಹುದಾಗಿದೆ.
ತಾಯಿಯ ಹಾಲಿನಲ್ಲಿ ಅನೇಕ ಸಂರಕ್ಷಕ ಅಂಶಗಳಿದ್ದು ಮಗುವನ್ನು ಸೋಂಕಿನಿಂದ ರಕ್ಷಿಸಬಹುದಾಗಿದೆ. ತಾಯಿಯ ಹಾಲನ್ನು ಪೂರ್ವಾವಧಿಯಾಗಿ ಜನಿಸಿದ ಮಕ್ಕಳಿಗೆ ನೀಡಿದಲ್ಲಿ ಸುಲಭವಾಗಿ ಜೀರ್ಣವಾಗುವ ಪುಡಿ ಹಾಲು ಅಥವಾ ಇನ್ಫ್ಯಾಂಟ್ ಫಾರ್ಮುಲಾ ಗಳಿಗಿಂತ ಆರೋಗ್ಯಕರ ಎನ್ನಬಹುದಾಗಿದೆ. ತಾಯಿಯ ಹಾಲನ್ನು ದಾನ ಮಾಡುವುದರಿಂದ ತಾಯಂದಿರು ಅಧಿಕ ತೂಕ, ಕ್ಯಾನ್ಸರ್ ಮುಂತಾದ ಸಮಸ್ಯೆಗಳಿಂದ ದೂರ ಉಳಿಯಬಹುದಾಗಿದೆ.
ವಿಜಯಪುರ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಾಸ್ತಿಹೊಳಿ, ಇಂಡಿಯನ್ ಎಕ್ಸ್ಪ್ರೆಸ್ನೊಂದಿಗೆ ಮಾತನಾಡಿ, ತಾಯಿಯ ಸಾವು, ಅನಾರೋಗ್ಯ ಅಥವಾ ಸಾಕಷ್ಟು ಪ್ರಮಾಣ ಹಾಲು ಉತ್ಪಾದನೆ ಸಾಧ್ಯವಾಗದ ಸಮಯದಲ್ಲಿ ಸುಮಾರು ಶೇ. 20 ರಷ್ಟು ನವಜಾತ ಶಿಶುಗಳಿಗೆ ದಾನಿ ತಾಯಿಯ ಹಾಲು ಅಗತ್ಯವಿದೆ. ಆಸ್ಪತ್ರೆಯಲ್ಲಿ ಹೆರಿಗೆ ಮಾಡುವ 900 ತಾಯಂದಿರಲ್ಲಿ 150 ತಾಯಂದಿರನ್ನು ಹಾಲು ದಾನ ಮಾಡಲು ಮನವೊಲಿಸುವುದು ಸಹ ಬ್ಯಾಂಕಿನ ಆರಂಭಿಕ ಗುರಿಗಳನ್ನು ಪೂರೈಸುತ್ತದೆ ಎಂದು ಮಾಹಿತಿ ನೀಡಿದರು.
ವಿಜಯಪುರದ ಹಾಲಿನ ಬ್ಯಾಂಕ್ ಹೈದರಾಬಾದ್‌ನ ನಿಲೋಫರ್ ಆಸ್ಪತ್ರೆಯ ಮಾದರಿಯನ್ನು ಅನುಸರಿಸುತ್ತದೆ. ಇದು ಭಾರತದ ಅತಿದೊಡ್ಡ ತಾಯಂದಿರ ಹಾಲಿನ ಬ್ಯಾಂಕ್ ಹೊಂದಿದೆ. ಇದು ತಿಂಗಳಿಗೆ 300 ಲೀಟರ್ ವರೆಗೆ ಹಾಲು ಸಂಗ್ರಹಿಸುತ್ತದೆ.