ಲಂಡನ್:
ಮಹತ್ವದ ವ್ಯಾಪಾರ ಒಪ್ಪಂದಕ್ಕಾಗಿ ಪ್ರಧಾನಿ ಮೋದಿ ಇಂದು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದಾರೆ. ಪ್ರಧಾನಿಯನ್ನು ವಿಮಾನ ನಿಲ್ದಾಣದಲ್ಲಿ ಇಂಡೋ-ಪೆಸಿಫಿಕ್ ಉಸ್ತುವಾರಿ ಹೊಂದಿರುವ ಯುಕೆ ವಿದೇಶಾಂಗ ಕಚೇರಿಯ ಸಚಿವೆ ಕ್ಯಾಥರೀನ್ ವೆಸ್ಟ್, ಯುಕೆಗೆ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೆಸಾಮಿ ಮತ್ತು ನವದೆಹಲಿಗೆ ಬ್ರಿಟಿಷ್ ಹೈಕಮಿಷನರ್ ಲಿಂಡಿ ಕ್ಯಾಮರೂನ್ ಅವರು ಬರಮಾಡಿಕೊಂಡರು. ಪ್ರಧಾನಿ ಮೋದಿ ಅವರು ಲಂಡನ್‌ಗೆ ಆಗಮಿಸುತ್ತಿದ್ದಂತೆ, ಲಂಡನ್‌ನ ಹೊರವಲಯದಲ್ಲಿ ನೆರೆದಿದ್ದ ಸಮುದಾಯದ ಮುಖಂಡರು ಮೋದಿಯನ್ನು ಆತ್ಮೀಯವಾಗಿ ಬರ ಮಾಡಿಕೊಂಡಿದ್ದಾರೆ.
ಭೇಟಿಯ ಸಮಯದಲ್ಲಿ, ಅವರು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಚರ್ಚೆಯನ್ನು ನಡೆಸಲಾಗುತ್ತದೆ. ನಂತರ ಮೋದಿ ರಾಜ ಚಾರ್ಲ್ಸ್ III ಅವರನ್ನು ಭೇಟಿ ಮಾಡಲಿದ್ದಾರೆ. ಈ ಭೇಟಿಯ ಕೇಂದ್ರಬಿಂದು ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕುವುದು ಮತ್ತು ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು (CSP) ಹೆಚ್ಚಿಸುವ ಹೊಸ ಪ್ರಯತ್ನವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರ ಪ್ರಕಾರ, ಒಪ್ಪಂದವು ಅಂತಿಮ ಕಾನೂನು ಹಂತದಲ್ಲಿದೆ, ಮೇ 6 ರಂದು ಭಾರತ-ಬ್ರಿಟಿಷ್ ಅಧಿಕಾರಿಗಳ ನಡುವೆ ನಡೆದ ಮಾತುಕತೆಯ ಆಧಾರದ ಮೇಲೆ ಅದು ಜಾರಿಗೆ ಬಂದಿದೆ ಎಂದಿದ್ದಾರೆ. ಮುಕ್ತ ವ್ಯಾಪಾರ ಒಪ್ಪಂದದ ಮೂಲಕ, ಭಾರತ- ಯುಕೆ 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 120 ಶತಕೋಟಿ ಅಮೆರಿಕನ್ ಡಾಲರ್‌ಗಳಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತಿವೆ.
ನಮ್ಮ ಸಹಯೋಗವು ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ನಾವೀನ್ಯತೆ, ರಕ್ಷಣೆ, ಶಿಕ್ಷಣ, ಸಂಶೋಧನೆ, ಸುಸ್ಥಿರತೆ, ಆರೋಗ್ಯ ಮತ್ತು ಜನರಿಂದ ಜನರಿಗೆ ಸಂಬಂಧಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳನ್ನು ವ್ಯಾಪಿಸಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಪ್ರವಾಸದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ವ್ಯಾಪಾರ ನಿಯೋಗವೂ ಇದೆ. ಬ್ರಿಟನ್ ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವುದರಿಂದ ಭಾರತದ ಸರಕುಗಳು ಆಮದು ಸುಂಕವಿಲ್ಲದೇ ಬ್ರಿಟನ್ ಮಾರುಕಟ್ಟೆಯನ್ನು ತಲುಪುತ್ತದೆ. ಹಾಗೂ ದೇಶಗಳ ಸ್ಪರ್ಧೆಯಿಂದ ತಪ್ಪಿಸಿಕೊಂಡು ಹೆಚ್ಚು ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ.
ಬ್ರಿಟನ್‌ನಲ್ಲಿ ತಮ್ಮ ಕಾರ್ಯಕ್ರಮಗಳ ನಂತರ, ಪ್ರಧಾನಿ ಮಾಲ್ಡೀವ್ಸ್‌ಗೆ ತೆರಳಲಿದ್ದಾರೆ, ಅಲ್ಲಿ ಜುಲೈ 26 ರಂದು ಮಾಲ್ಡೀವ್ಸ್‌ನಲ್ಲಿ ಸ್ವಾತಂತ್ರ್ಯದ 60 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮೋದಿ ಅತಿಥಿಯಾಗಿರಲಿದ್ದಾರೆ.
