‘ಬಿಎಸ್ ಯಡಿಯೂರಪ್ಪ ಯುಗಾಂತ್ಯ: ವಾಜಪೇಯಿ ನಂತರ ಮೋದಿ ಬಂದ ಹಾಗೆ, ರಾಜ್ಯದಲ್ಲಿ ಪರ್ಯಾಯ ನಾಯಕತ್ವದ ಅಗತ್ಯವಿದೆ’

ಬೆಳಗಾವಿ: 

     ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಯುಗಾಂತ್ಯವಾಗಿದ್ದು, ರಾಜ್ಯದಲ್ಲಿ ಪರ್ಯಾಯ ಅಂದರೆ ಎರಡನೇ ನಾಯಕತ್ವದ ಅಗತ್ಯವಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಬುಧವರ ಮಾತನಾಡಿದ ಅವರು, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅಗತ್ಯ, ಅನಿವಾರ್ಯ ಆಗಿದೆ.

    ಕ್ರಿಯಾಶೀಲರಾಗಿ ಕೆಲಸ ಮಾಡಲು 2ನೇ ನಾಯಕತ್ವ ಅಗತ್ಯವಾಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹವಾ ಮುಗಿದಿದೆ. ಇನ್ನೂ 3-4 ಜನರಿದ್ದಾರೆ ಅವರದ್ದೂ ಮುಗಿಯಲು ಬಂದಿದೆ. ವಾಜಪೇಯಿ ನಂತರ ಮೋದಿ ಬಂದ ರೀತಿ ಬದಲಾವಣೆ ಅಗತ್ಯವಾಗಿದೆ ಎಂದು ಬೆಳಗಾವಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಬುಧವಾರ ಹೇಳಿಕೆ ನೀಡಿದ್ದಾರೆ.

ಬೊಮ್ಮಾಯಿ ಬದಲಾವಣೆ ಆಗುತ್ತಾರೆ ಅಂತಾ ನಾನು ಹೇಳಿಲ್ಲ. ಎರಡನೇ ನಾಯಕತ್ವ ಪಕ್ಷಕ್ಕೆ ಬೇಕು ಅಂತಾ ಹೇಳುತ್ತಿದ್ದೇನೆ. ಇದಕ್ಕಾಗಿ ಪಕ್ಷದ ವರಿಷ್ಠರು ಹೊಸ ಪ್ರಕ್ರಿಯೆ ಮಾಡುತ್ತಿದ್ದಾರೆ. ಪಕ್ಷದ ವರಿಷ್ಠರು 2023ರ ಚುನಾವಣೆಗೆ ಒಳ್ಳೆ ಟೀಮ್ ರಚಿಸಿ ಮತ್ತೆ ಅಧಿಕಾರಕ್ಕೆ ಬರುವ ಪ್ಲ್ಯಾನ್ ಇಟ್ಟಿಕೊಂಡು ಬದಲಾವಣೆ ಮಾಡಬೇಕು ಎಂದು ಬೆಳಗಾವಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ನಾನು ಯಾವ ಸ್ಥಾನಮಾನ ನಿರೀಕ್ಷೆ ಮಾಡಿಲ್ಲ. ಮುಂದಿನ ಚುನಾವಣೆಯಲ್ಲಿ ಪಕ್ಷ ನನಗೆ ಮಹತ್ವಪೂರ್ಣ ಜವಾಬ್ದಾರಿ ಕೊಡುತ್ತದೆ. ಸಂಕ್ರಾಂತಿ ಹಬ್ಬದ ನಂತರ ಬದಲಾವಣೆಯಾಗುತ್ತದೆ ಎಂಬ ನಿರೀಕ್ಷೆಯಿತ್ತು, ಆದರೆ ಆಗಲಿಲ್ಲ, ಆದರೆ ಯುಗಾದಿ ವೇಳೆಗೆ ರಾಜ್ಯದಲ್ಲಿ ಮಹತ್ವದ ಬದಲಾವಣೆ ನಡೆಯಲಿದೆ ಎಂದು ಹೇಳಿದ್ದಾರೆ.

ಹಬ್ಬಕ್ಕೆ ಹೊಸ ಹೊಸ ಜನರಿಗೆ ಜವಾಬ್ದಾರಿ ಕೊಡ್ತಾರೆ. ಹೊಸ ಮಂತ್ರಿಗಳಾಗ್ತಾರೆ, ರಾಜ್ಯದಲ್ಲಿ ಹೊಸ ಪದಾಧಿಕಾರಿಗಳು ಬರಬಹುದು ಎಂದು ತಿಳಿಸಿದ್ದಾರೆ. ಸಿಎಂ ದೆಹಲಿಗೆ ಹೋಗುತ್ತಿರುವ ವಿಚಾರವಾಗಿಯೂ ಈ ವೇಳೆ ಬೆಳಗಾವಿಯಲ್ಲಿ ಶಾಸಕ ಬಸವನಗೌಡ ಯತ್ನಾಳ ಪ್ರತಿಕ್ರಿಯೆ ನೀಡಿದ್ದಾರೆ.

ಸಿಎಂ ಅವರು ದೆಹಲಿಯಲ್ಲಿ ಸಂಸದರ ಸಭೆ ಮಾಡಬೇಕು. ಅಧಿವೇಶನ ಹಿನ್ನೆಲೆ ರಾಜ್ಯದ ಅಭಿವೃದ್ಧಿ ವಿಚಾರದ ಕುರಿತು ಚರ್ಚೆ ಮಾಡಬೇಕು. ಕೇಂದ್ರದ ಮೇಲೆ ಒತ್ತಡ ತರಲು ಸಹಜವಾಗಿ ಇದೊಂದು ಪದ್ಧತಿ ಇದೆ. ಸಂಸದರ ಸಭೆ ಹಿನ್ನೆಲೆ ದೆಹಲಿಗೆ ಹೋಗುತ್ತಿರಬಹುದು ಎಂದು ಹೇಳಿದ್ದಾರೆ.

ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಬಗ್ಗೆ ಮಾತನಾಡಿದ ಯತ್ನಾಳ್, ‘ನಾನು ಅವರನ್ನು ಅವರ ನಿವಾಸಕ್ಕೆ ಊಟಕ್ಕಾಗಿ ಹೋಗಿದ್ದೆ, ಅವರು ನನ್ನ ಮನೆಗೆ ಊಟಕ್ಕೆ ಭೇಟಿ ನೀಡಿದರು. ಅವರು ಬಿಜೆಪಿಯಲ್ಲೇ ಉಳಿಯಲು ಬಯಸಿದ್ದಾರೆ. ನಾವು ಎಲ್ಲಾ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿ ಪಕ್ಷವನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link