ಧರ್ಮಸ್ಥಳ ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲರ ಸಂಚು: ಬಿಜೆಪಿ ಆರೋಪ

ಬೆಳಗಾವಿ

   ಧರ್ಮಸ್ಥಳ ಪ್ರಕರಣ  ಹಿಂದೆ ಷಡ್ಯಂತ್ರವಿದೆ ಎಂದು ನಾವು ಮೊದಲೇ ಹೇಳಿದ್ದೆವು. ಅದು ಈಗ ನಿಜವಾಗಿದ್ದು, ಸತ್ಯಕ್ಕೆ ಜಯವಾಗಿದೆ. ಈ ಬುರುಡೆ ಗ್ಯಾಂಗ್ ಹಿಂದೆ ಯಾರಿದ್ದಾರೆ ಎಂಬುದು ಹೊರಬರಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಸುವರ್ಣ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashok), ಧರ್ಮಸ್ಥಳ ವಿಚಾರದಲ್ಲಿ ಅರ್ಬನ್ ನಕ್ಸಲ್  ಕೈವಾಡವಿದೆ ಎಂದು ಆರೋಪಿಸಿದರು.

    ಆರು ಜನ ಪಿತೂರಿ ಮಾಡಿ, ಷಡ್ಯಂತ್ರ ಮಾಡಿದ್ದಾರೆ ಎಂದು ಬಿಜೆಪಿ ಮೊದಲೇ ಹೇಳಿತ್ತು. ಆ ಆರು ಜನರಿಗೆ ಹಣ ಸಹಾಯ ಮಾಡಿದ್ದು ಯಾರು? ಆ ತಿಮಿಂಗಿಲ ಯಾರು ಎಂಬುದು ಹೊರಬರಬೇಕು. ಆ ಸೂತ್ರಧಾರನನ್ನು ಎಸ್ಐಟಿ ಪತ್ತೆ ಹಚ್ಚಿ ಬಂಧಿಸಬೇಕು. ಅಯ್ಯಪ್ಪ, ಶನಿ ಸಿಂಗ್ನಾಪುರ, ಧರ್ಮಸ್ಥಳ ಆಯಿತು. ಈಗ ಹಳ್ಳಿಯಲ್ಲಿರುವ ಮಾರಮ್ಮ, ಆಂಜನೇಯ ಸೇರಿ ಎಲ್ಲಾ ದೇವರನ್ನು ತರುತ್ತಾರೆ. ಸದನದಲ್ಲಿ ಈ ಬಗ್ಗೆಯೂ ಚರ್ಚೆ ಮಾಡುತ್ತೇವೆ ಎಂದರು.

    ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಮಾತನಾಡಿ, ಧರ್ಮಸ್ಥಳ ಪ್ರಕರಣ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆ ದುರ್ಬಲಗೊಳಿಸಲು ಮಾಡಿರುವ ಷಡ್ಯಂತ್ರ ಎಂದು ನಾನು ಮೊದಲೇ ಹೇಳಿದ್ದೆ. ಆಗ ನನ್ನ ಮಾತನ್ನು ಅನೇಕರು ಟೀಕಿಸಿದ್ದರು. ಎಸ್ಐಟಿ ಪ್ರಾಥಮಿಕ ತನಿಖೆಯಲ್ಲಿ ಷಡ್ಯಂತ್ರ ಎಂಬುದು ಬೆಳಕಿಗೆ ಬಂದಿದೆ. ಬುರುಡೆ ಗ್ಯಾಂಗ್‌ ಏಕೆ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿತು ಎಂದು ನಾನು ಸರ್ಕಾರವನ್ನು ಕೇಳುತ್ತೇನೆ. ಇದೊಂದು ಮತಾಂತರ ಮಾಫಿಯಾ ಎನ್ನುವುದು ಗೊತ್ತಾಗಿದೆ. ನಿಯೋ ಕಮ್ಯುನಿಸ್ಟ್‌ ಮಿದುಳು ಇದರಲ್ಲಿ ಕೆಲಸ ಮಾಡುತ್ತಿದೆ. ಇದಕ್ಕೆ ಅವರೇ ನೀರು, ಗೊಬ್ಬರ ಹಾಕಿದ್ದಾರೆ. ಇದೆಲ್ಲವನ್ನೂ ಆಧರಿಸಿ ಸಮಗ್ರ ತನಿಖೆ ನಡೆಸಬೇಕು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು. 

   ಬುರುಡೆ ಗ್ಯಾಂಗ್ ಮಾತು ನಂಬಿ, ಅವರು ಹೇಳಿದ ಕಡೆ ಅಗೆಯಲಾಯಿತು. ಧರ್ಮಸ್ಥಳದ ಬಗ್ಗೆ ಅರಿತು ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಈ ಸರ್ಕಾರಕ್ಕೆ ಬುರುಡೆ ಗ್ಯಾಂಗ್ ಮೇಲೆ ನಂಬಿಕೆ ಹೆಚ್ಚಿತ್ತು. ಜನಾಭಿಪ್ರಾಯದ ಮೇಲೆ ನಂಬಿಕೆ ಇರಲಿಲ್ಲ. ಆರಂಭದಲ್ಲೇ ಧರ್ಮಸ್ಥಳ ಬಗ್ಗೆ ಆರೋಪ ಮಾಡಿದವರ ಪೂರ್ವಾಪರ ತಿಳಿಯಬೇಕಿತ್ತು. ಗುಂಡಿ ಅಗೆದಾಗ ಖಳನಾಯಕರೇ ನಾಯಕರಾಗಿದ್ದರು. ನಾಯಕರು ಖಳನಾಯಕರಾಗಿದ್ದರು. ಭಾರತದಲ್ಲಿ ಧರ್ಮ ಎನ್ನುವುದು ನಂಬಿಕೆ. ಅದಕ್ಕೆ ಅಪಮಾನ ಮಾಡಬಾರದು. ಏನೇ ಇರಲಿ, ದೇವರು ದೊಡ್ಡವನು, ಸತ್ಯಮೇಯ ಜಯತೆ ಎಂದು ಸಿ.ಟಿ.ರವಿ ನುಡಿದರು.

   ಇದರಲ್ಲಿ ಆರು ಜನರ ಜೊತೆ ಬೇರೆಯವರೂ ಇದ್ದಾರೆ. ಯುಟ್ಯೂಬರ್ಸ್‌ಗೆ ಹಣಕಾಸು ವ್ಯವಸ್ಥೆ ಮಾಡಿದ್ದಾರೆ. ಈ ಪ್ರಕರಣವನ್ನು ಫಾಸ್ಟ್‌ಟ್ರ್ಯಾಕ್‌ ಕೋರ್ಟ್‌ಗೆ ತಂದು ಶೀಘ್ರವಾಗಿ ಮುಗಿಸಬೇಕು. ಈ ಷಡ್ಯಂತ್ರದಲ್ಲಿ ಭಾಗಿಯಾದವರಿಗೆ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು. 

   ಶಾಸಕ ಚನ್ನಬಸಪ್ಪ ಮಾತನಾಡಿ, ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ಮಾಡಿದ ಆರು ಜನರಿಗೆ ಶಿಕ್ಷೆ ಆಗಬೇಕು. ಸರ್ಕಾರ ಇದರಲ್ಲಿ ಆಟ ಆಡಲು ಹೋಗಬಾರದು. ಇದನ್ನು ಖಂಡಿತವಾಗಿಯೂ ನಾವು ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ. ಷಡ್ಯಂತ್ರ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇವೆ. ಹಿಂದೂ ಧರ್ಮದ ವಿರುದ್ಧ, ಹಿಂದೂಗಳ ವಿರುದ್ಧ ಯಾರೇ ಷಡ್ಯಂತ್ರ‌ ಮಾಡಿದರೂ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

   ಶಾಸಕ ಎಸ್.ಆರ್‌.ವಿಶ್ವನಾಥ್ ಮಾತನಾಡಿ, ಧರ್ಮಸ್ಥಳ ಪ್ರಕರಣ ತನಿಖೆ ಮಾಡುವಾಗಲೇ ಇದು ಷಡ್ಯಂತ್ರ ಎಂದು ಹೇಳಿದ್ದೆವು. ಎಸ್ಐಟಿ ಸುದೀರ್ಘ ತನಿಖೆ ಮಾಡಿ ವರದಿ ಸಲ್ಲಿಸಿದೆ. ಇದು ವ್ಯವಸ್ಥಿತ ಕುತಂತ್ರ ಎಂಬುದು ತನಿಖೆಯಲ್ಲಿ ಹೊರ ಬಂದಿದೆ ಎಂದರು.

Recent Articles

spot_img

Related Stories

Share via
Copy link