ಅವರ ವಿರುದ್ಧ 65 ಕೇಸ್‌ಗಳಿವೆ: ಸಿಟಿ ರವಿ

ಬೆಂಗಳೂರು:

   ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾರ್ವಜನಿಕ ಜೀವನ ಹೇಳಿಕೊಂಡಷ್ಟು ಪರಿಶುದ್ಧವೇನಲ್ಲ. ತಮ್ಮ ಭ್ರಷ್ಟಾಚಾರ ಹೊರಗೆ ಬರಬಾರದು ಎಂದು ಪೂರ್ವ ತಯಾರಿ ಮಾಡಿಕೊಂಡು ಭ್ರಷ್ಟಾಚಾರ ಮಾಡುವವರು ಎಂದು ಬಿಜೆಪಿ ನಾಯಕ ಸಿಟಿ ರವಿ ಅವರು ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

  ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತೆ ತಿಳಿದಷ್ಟು ಸಿದ್ದರಾಮಯ್ಯ ಪರಿಶುದ್ಧರೇನಲ್ಲ. ಅವರ ಮೇಲೆ 65 ಕ್ಕೂ ಹೆಚ್ಚು ಭ್ರಷ್ಟಾಚಾರ ದ ಆರೋಪಗಳಿವೆ. ತನಿಖೆ ಆಗದಂತೆ ಮುನ್ನೆಚ್ಚರಿಕೆವಹಿಸಿ ಅವರಿಗೆ ಅವರೇ ಪ್ರಾಮಾಣಿಕರೆಂದು ಹೇಳಿಕೊಳ್ತಾ ಇದ್ದಾರೆ. ಈಗ ಈ ಪ್ರಕರಣದಲ್ಲಿ ಸಿಬಿಐ ತನಿಖೆ ಆಗದಂತೆ ಅಧಿಕಾರವನ್ನು ಮೊಟಕುಗೊಳಿಸಿರುವುದರ ಹಿಂದೆ ಇದೇ ದುರುದ್ದೇವಿದೆ. ಇಲ್ಲದಿದ್ರೆ ಅವರಿಗೆ ಸಿಬಿಐ ತನಿಖೆ ಬಗ್ಗೆ ಭಯ ಯಾಕೆ ಎಂದು ಪ್ರಶ್ನಿಸಿದರು.

  ಸಿದ್ದರಾಮಯ್ಯ ನಿಜವಾಗಲೂ ಪ್ರಾಮಾಣಿಕರಾಗಿದ್ದಾರೆ. ಮೈಮೇಲೆ ಕಪ್ಪು ಚುಕ್ಕೆ ಇಲ್ಲದಿದ್ರೆ, ಭ್ರಷ್ಟಾಚಾರ ರಹಿತ ರಾಜಕಾರಣ ಮಾಡಿದ್ದರೆ ಯಾವ ತನಿಖೆಗೂ ಹೆದರಬೇಕಿಲ್ಲ. ಎಷ್ಟೇ ಶುದ್ಧಹಸ್ತರೆಂದು ಹೇಳಿಕೊಂಡರೂ ಕಾಂಗ್ರೆಸ್ ಪರಮಭ್ರಷ್ಟ ಸರ್ಕಾರವಾಗಿದೆ. ರಾಜ್ಯಪಾಲರ ಪತ್ರಕ್ಕೆ ಸಂಪುಟದ ನಿರ್ಣಯದ ಬಳಿಕವೇ ಉತ್ತರ ಕೊಡಬೇಕು ಎಂಬ ಹಾಸ್ಯಾಸ್ಪದ ನಿರ್ಧಾರ ಕೂಡಾ ತೆಗೆದುಕೊಂಡಿದ್ದೀರಿ. ರಾಜ್ಯಪಾಲರ ಪತ್ರಕ್ಕೂ ಉತ್ತರ ನೀಡುವ ಅಧಿಕಾರವೂ ಮುಖ್ಯ ಕಾರ್ಯದರ್ಶಿಗೆ ಇಲ್ಲವಾ? ಪಾರದರ್ಶಕತೆ ಪ್ರಜಾಪ್ರಭುತ್ವದ ಭಾಗ ಆಗಬೇಕು. ರಾಜ್ಯಪಾಲರ ಪತ್ರಕ್ಕೆ ಉತ್ತರ ಕೊಡಲೇಬಾರದು ಎಂಬ ನಿಲುವು ಪ್ರಜಾಪ್ರಭುತ್ವ ದ ಆಶಯಕ್ಕೆ ವಿರುದ್ದವಾಗಿದೆ. ಅವಕಾಶ ಇದ್ದಿದ್ದರೆ ಲೋಕಾಯುಕ್ತಕ್ಕೂ ಭೀಗ ಹಾಕ್ತಾ ಇದ್ರೋ ಏನೋ.? ಎಂದು ಹರಿಹಾಯ್ದರು.

  ‘ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸತ್ಯಾಸತ್ಯತೆ ಬೆಳಕಿಗೆ ಬರಬಾರದು ಎಂಬ ಉದ್ದೇಶದಿಂದ ಲೋಕಾಯುಕ್ತ ಬದಲು ಭ್ರಷ್ಟಾಚಾರ ನಿಗ್ರಹ ದಳ ರಚಿಸಿದ್ದರು. ಎಸಿಬಿ ರಚಿಸುವ ಮೂಲಕ 15 ಪ್ರಕರಣಗಳಲ್ಲಿ ಕ್ಲೀನ್ ಚಿಟ್ ಪಡೆದಿದ್ದಾರೆ. 50 ಪ್ರಕರಣಗಳಲ್ಲಿ ಯಾವುದೇ ತನಿಖೆ ನಡೆದಿಲ್ಲ. ನೀವು ಪ್ರಾಮಾಣಿಕರಾಗಿದ್ದರೆ, ಸಿಬಿಐ ತನಿಖೆಗೆ ಏಕೆ ಹೆದರುತ್ತೀರಿ? ನಿಮ್ಮ ಈ ನಿಲುವು ನೀವು ಮತ್ತು ನಿಮ್ಮ ಸರ್ಕಾರ ಭ್ರಷ್ಟ ಎಂಬುದನ್ನು ತೋರಿಸುತ್ತದೆ ಎಂದರು.

   ಇದೇ ವೇಳೆ ಹೈಕೋರ್ಟ್ ತೀರ್ಪನ್ನು ರಾಜಕೀಯ ತೀರ್ಪು ಎಂದು ಪರಿಗಣಿಸಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಅವರು ಸಿಎಂಗೆ ಒತ್ತಾಯಿಸಿದರು.ಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ ನಾರಾಯಣ್ ಮಾತನಾಡಿ, ತಾವೇ ನೇಮಿಸಿದ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರನ್ನೇ ಸರ್ಕಾರ ನಂಬುತ್ತಿಲ್ಲ ಎಂದು ವ್ಯಂಗ್ಯವಾಡಿದರು.

Recent Articles

spot_img

Related Stories

Share via
Copy link
Powered by Social Snap