ಕಾನ್ಪುರ
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಮಳೆಯಿಂದಾಗಿ 1 ಗಂಟೆ ತಡವಾಗಿ ಪಂದ್ಯ ಆರಂಭವಾಯಿತು. ಈ ವೇಳೆ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ದಿನದಾಟದ ಮೊದಲ ಸೆಷನ್ವರೆಗೂ ವರುಣ ರಾಯ ಪಂದ್ಯಕ್ಕೆ ಯಾವುದೇ ಅಡ್ಡಿಪಡಿಸಲಿಲ್ಲ. ಆದರೆ ಎರಡನೇ ಸೆಷನ್ ಆರಂಭವಾದಂತೆ ಮಳೆ ಕೂಡ ಬೀಳಲಾರಂಭಿಸಿತು. ಅಲ್ಲದೆ ಮಂದ ಬೆಳಕಿನ ಕಾರಣ ಪಂದ್ಯವನ್ನು ಅವಧಿಗೂ ಮುನ್ನವೇ ನಿಲ್ಲಿಸಲು ತೀರ್ಮಾನಿಸಲಾಯಿತು. ದಿನದಾಟ ಅಂತ್ಯದ ವೇಳೆಗೆ ಇಡೀ ದಿನ ಕೇವಲ 35 ಓವರ್ಗಳನ್ನು ಮಾತ್ರ ಆಡಲು ಸಾಧ್ಯವಾಯಿತು.
ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಪಂದ್ಯ ಆರಂಭವಾಗುವ ಎರಡು-ಮೂರು ದಿನಗಳ ಹಿಂದೆಯೇ ಮಳೆ ಬೀಳಲಾರಂಭಿಸಿತ್ತು. ಪಂದ್ಯದ ಆರಂಭದಿಂದಲೂ ಪ್ರತಿಕೂಲ ಹವಾಮಾನ ಅಡ್ಡಿಪಡಿಸುತ್ತಲೇ ಇತ್ತು. ಮೈದಾನ ಒದ್ದೆಯಾಗಿದ್ದರಿಂದ ಪಂದ್ಯ ಆರಂಭ ಕೂಡ ಒಂದು ಗಂಟೆ ತಡವಾಯಿತು. ಮೊದಲ ಸೆಷನ್ ಮುಗಿದ ನಂತರ ಮತ್ತೆ ಮಳೆ ಸುರಿದ ಕಾರಣ ಊಟದ ನಂತರ, ಆಟವನ್ನು 15 ನಿಮಿಷ ತಡವಾಗಿ ಆರಂಭಿಸಲಾಯಿತು. ಎರಡನೇ ಸೆಷನ್‌ನಲ್ಲೂ ಕೇವಲ 9 ಓವರ್‌ಗಳು ಬೌಲ್ ಆಗಿದ್ದು, ಮಂದ ಬೆಳಕಿನಿಂದ ಪಂದ್ಯವನ್ನು ನಿಲ್ಲಿಸಲಾಯಿತು. ಆ ನಂತರ ಭಾರೀ ಮಳೆಯಿಂದಾಗಿ ದಿನದ ಆಟವನ್ನು ಕೊನೆಗೊಳಿಸಲು ನಿರ್ಧರಿಸಲಾಯಿತು. ಒಟ್ಟಾರೆ ಮೊದಲ ದಿನ 35 ಓವರ್‌ಗಳು ಮಾತ್ರ ನಡೆದಿದ್ದು, ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 3 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿದೆ.
ಮೊದಲ ದಿನ ಮಳೆಗಾಹುತಿಯಾಗಿರುವುದರಿಂದ ಟೆಸ್ಟ್‌ನಲ್ಲಿ 4 ದಿನಗಳ ಆಟ ಮಾತ್ರ ಬಾಕಿ ಉಳಿದಿದೆ. ಆದರೆ ಕಾನ್ಪುರದಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಅಕ್ಯುವೆದರ್ ಮುನ್ಸೂಚನೆಯ ಪ್ರಕಾರ, ಶುಕ್ರವಾರ-ಶನಿವಾರ ಮಧ್ಯರಾತ್ರಿ ಕಾನ್ಪುರದಲ್ಲಿ ಭಾರೀ ಮಳೆಯಾಗಲಿದೆ. ಶನಿವಾರ ಬೆಳಗ್ಗೆ 9ರಿಂದ 10ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯೂ ಇದೆ. ಒಟ್ಟಿನಲ್ಲಿ ಶನಿವಾರ ಶೇ.80ರಷ್ಟು ಮಳೆಯಾಗಲಿದೆ.
ಸೆಪ್ಟೆಂಬರ್ 29 ರ ಭಾನುವಾರ ಅಂದರೆ ಟೆಸ್ಟ್ ಪಂದ್ಯದ ಮೂರನೇ ದಿನದಂದು ಮಳೆಯಾಗಲಿದೆ ಎಂದು ವರದಿಯಾಗಿದೆ. ಆ ದಿನವೂ ಪಂದ್ಯದ ಆರಂಭದ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ. ಹೀಗಿರುವಾಗ ಈ ಪಂದ್ಯದ ಬಹುಪಾಲು ಭಾಗ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಕೈತಪ್ಪಿ ಹೋಗುವುದು ನಿಶ್ಚಿತ, ಇದರಿಂದ ಫಲಿತಾಂಶ ಸಿಗುವ ಸಾಧ್ಯತೆ ಕಡಿಮೆ. ಕ್ಲೀನ್ ಸ್ವೀಪ್ ತಪ್ಪಿಸಲು ಯತ್ನಿಸುತ್ತಿರುವ ಬಾಂಗ್ಲಾದೇಶಕ್ಕೆ ಇದರಿಂದ ಲಾಭವಾಗಿದ್ದರೂ ಟೀಂ ಇಂಡಿಯಾ ಇದರ ಪರಿಣಾಮಗಳನ್ನು ಅನುಭವಿಸಬೇಕಾಗಬಹುದು.