ನವದೆಹಲಿ:
ಪೌರತ್ವ ತಿದ್ದುಪಡಿ ಕಾಯ್ದೆ 2019 ಜಾರಿಗೊಳಿಸಿ ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದ ನಂತರ ಈಶಾನ್ಯ ದೆಹಲಿ, ಶಾಹೀನ್ ಬಾಗ್, ಜಾಮಿಯಾ ಮತ್ತು ರಾಷ್ಟ್ರ ರಾಜಧಾನಿಯ ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಭಾಗಗಳಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದ್ದು, ಈಶಾನ್ಯ ಮತ್ತು ಆಗ್ನೇಯ ದೆಹಲಿಯ ಭಾಗಗಳಲ್ಲಿ ಧ್ವಜ ಮೆರವಣಿಗೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ದೆಹಲಿಯು 2020 ರಲ್ಲಿ ಸಿಎಎ ಮತ್ತು ಎನ್‌ಆರ್‌ಸಿ(ರಾಷ್ಟ್ರೀಯ ನಾಗರಿಕರ ನೋಂದಣಿ) ವಿರೋಧಿಸಿ ಭಾರೀ ಪ್ರತಿಭಟನೆ ಕೋಮುಗಲಭೆಗಳಿಗೆ ಸಾಕ್ಷಿಯಾಗಿತ್ತು.”ದಿಲ್ಲಿಯ ಈಶಾನ್ಯ ಜಿಲ್ಲೆಯ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಸುರಕ್ಷತೆ ನಮ್ಮ ಜವಾಬ್ದಾರಿಯಾಗಿದೆ” ಎಂದು ಈಶಾನ್ಯ ಡಿಸಿಪಿ ಜಾಯ್ ಟಿರ್ಕಿ ಅವರು ಪಿಟಿಐಗೆ ತಿಳಿಸಿದ್ದಾರೆ.
ಸೂಕ್ಷ್ಮ ಪ್ರದೇಶಗಳಲ್ಲಿ ನಾಗರಿಕರ ಸುರಕ್ಷತೆಗಾಗಿ ಈಶಾನ್ಯ ಜಿಲ್ಲಾ ಪೊಲೀಸ್ ಸಿಬ್ಬಂದಿ ಮತ್ತು ಅರೆಸೇನಾ ಪಡೆಗಳಿಂದ ತೀವ್ರ ಗಸ್ತು ಮತ್ತು ತಪಾಸಣೆ ನಡೆಸಲಾಗುತ್ತಿದೆ. ಪ್ರತಿಯೊಬ್ಬರೂ ಸುರಕ್ಷತಾ ಸೂಚನೆಗಳನ್ನು ಅನುಸರಿಸಲು ವಿನಂತಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
“ನಾವು ಅರೆಸೇನಾ ಪಡೆಗಳೊಂದಿಗೆ ರಾತ್ರಿ ಕಾವಲು ತೀವ್ರಗೊಳಿಸಿದ್ದೇವೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಪ್ರತಿಯೊಬ್ಬ ಸಾಮಾನ್ಯರ ಸುರಕ್ಷತೆಗಾಗಿ ನಾವು ಧ್ವಜ ಮೆರವಣಿಗೆಯನ್ನು ನಡೆಸಿದ್ದೇವೆ” ಎಂದು ಡಿಸಿಪಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ