ಬೆಂಗಳೂರು
ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಮೇ 6, 7ರಂದು ಬೆಂಗಳೂರಿನಲ್ಲಿ ನಮ್ಮ ಬೆಂಗಳೂರು, ನಮ್ಮ ಹೆಮ್ಮೆ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಶನಿವಾರ ಮತ್ತು ಭಾನುವಾರ ಸಂಜೆ ನಡೆಯಬೇಕಿದ್ದ ರೋಡ್ ಶೋನಲ್ಲಿ ಬದಲಾವಣೆಯಾಗಿದ್ದು, ಮಳೆ ಮತ್ತಿತರೆ ಕಾರಣಗಳಿಗಾಗಿ ಬೆಳಿಗ್ಗೆ ರೋಡ್ ಶೋಗೆ ವ್ಯವಸ್ಥೆ ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಶೋಭಾ ಕರಂದ್ಲಾಜೆ, ರಾಜಧಾನಿಯ ಎಲ್ಲರನ್ನೂ ನೋಡಬೇಕು, 17 ಕ್ಷೇತ್ರಗಳಿಗೆ ಭೇಟಿ ನೀಡಬೇಕು ಎಂಬ ಆಶಯದೊಂದಿಗೆ ಪ್ರಧಾನಿಯವರು ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಒಂದೇ ದಿನ ರೋಡ್ ಶೋ ನಡೆಸಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಎರಡು ದಿನ ರೋಡ್ ಶೋ ನಡೆಸಲಾಗುತ್ತಿದೆ. ಸಾರ್ವಜನಿಕರ ಭಾವನೆಗಳಿಗೆ ಗೌರವ ಕೊಟ್ಟು ಪ್ರಧಾನಿಯವರು ಎರಡು ದಿನ ರೋಡ್ ಶೋ ನಡೆಸುತ್ತಿದ್ದಾರೆ ಎಂದು ಹೇಳಿದರು.
6ರಂದು ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ರೋಡ್ ಶೋ ಹೊಸ ತಿಪ್ಪಸಂದ್ರದ ಕೆಂಪೇಗೌಡ ಪ್ರತಿಮೆಯಿಂದ ಹೊರಟು ಬ್ರಿಗೇಡ್ ರಸ್ತೆಯ ಯುದ್ಧ ಸ್ಮಾರಕದಲ್ಲಿ ಕೊನೆಗೊಳ್ಳಲಿದೆ. ಮೇ 7ರಂದು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ರೋಡ್ ಶೋ ಬ್ರಿಗೇಡ್ ರಸ್ತೆಯ ಯುದ್ಧ ಸ್ಮಾರಕದಿಂದ ಹೊರಟು ಮಲ್ಲೇಶ್ವರದ ಸ್ಯಾಂಕಿ ಕೆರೆ ಬಳಿ ಮುಕ್ತಾಯಗೊಳ್ಳಲಿದೆ. ರೋಡ್ ಶೋ ಮಾರ್ಗದ ವಿವರಗಳನ್ನು ಸಾರ್ವಜನಿಕರಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು. ಮೇ 5ರಂದು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಪ್ರಧಾನಿಯವರು ಬಳ್ಳಾರಿಯಲ್ಲಿ, ಸಂಜೆ 4.30ಕ್ಕೆ ತುಮಕೂರು ಗ್ರಾಮಾಂತರದಲ್ಲಿ ಬೃಹತ್ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಮೇ 6ರಂದು ಬೆಂಗಳೂರಿನಲ್ಲಿ ರೋಡ್ ಶೋ ಮುಗಿಸಿದ ನಂತರ ಪ್ರಧಾನಿಯವರು ಸಂಜೆ 4 ಗಂಟೆಗೆ ಬಾದಾಮಿಯಲ್ಲಿ, ಸಂಜೆ 7 ಗಂಟೆಗೆ ಹಾವೇರಿಯಲ್ಲಿ ಚುನಾವಣಾ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ. ಮೇ 7ರಂದು ಭಾನುವಾರ ಬೆಂಗಳೂರಿನಲ್ಲಿ ರೋಡ್ ಶೋ ಮುಗಿಸಿದ ನಂತರ ಪ್ರಧಾನಿಯವರು ಸಂಜೆ 4 ಗಂಟೆಗೆ ಶಿವಮೊಗ್ಗದಲ್ಲಿ ಸಂಜೆ 7 ಗಂಟೆಗೆ ನಂಜನಗೂಡಿನಲ್ಲಿ ಸಾರ್ವಜನಿಕ ಸಭೆಗಳನ್ನುದ್ದೇಶಿ ಭಾಷಣ ಮಾಡಲಿದ್ದಾರೆ. ನಂಜನಗೂಡಿನಲ್ಲಿ ಸಾರ್ವಜನಿಕ ಸಭೆ ನಂತರ ಪ್ರಧಾನಿಯವರು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ ಎಂದು ಕು.ಶೋಭಾ ಕರಂದ್ಲಾಜೆ ವಿವರಿಸಿದರು.
ಚುನಾವಣೆಯಲ್ಲಿ ಗೆಲ್ಲಬೇಕೆಂದು ಹಿಂದೂಗಳ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್‌ಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಬಿಜೆಪಿ, ಬಜರಂಗದಳದವರಿಗೆ ಹನುಮಾನ್ ಚಾಲಿಸಾ ಪಠಿಸಲು ಬರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲ ಹುಡುಗಾಟದ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ. ಅವರ ಈ ಸವಾಲನ್ನು ಸ್ವೀಕರಿಸಿ ಬಿಜೆಪಿ ಕಾರ್ಯರ್ತರ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸ ಪಠಿಸಲಿದ್ದಾರೆ. ತಾವು ಸಹ ಇಂದು ಮಲ್ಲೇಶ್ವರ 8ನೇ ಕ್ರಾಸ್‌ನ ಶ್ರೀರಾಮ ಮಂದಿರಲ್ಲಿ ಹನುಮಾನ್ ಚಾಲಿಸಾ ಪಠಿಸಲಿದ್ದು.
ಸುರ್ಜೆವಾಲ ಮತ್ತು ಕಾಂಗ್ರೆಸ್‌ನವರು ದೇವಸ್ಥಾನಗಳಿಗೆ ಬಂದು ಕೇಳಲಿ ಎಂದು ಆಹ್ವಾನಿಸಿದರು. ಹನುಮನನ್ನು ನಾವು ನಂಬಿರುವುದು ಮತ್ತು ಹನುಮನ ಶಕ್ತಿ ಬಗ್ಗೆ ವಿಶ್ವಕ್ಕೇ ಗೊತ್ತು. ಕರ್ನಾಟಕ, ಹನುಮ ಉದಯಿಸಿದ ನಾಡು. ಅಂಜನಾದ್ರಿ ಬೆಟ್ಟ, ಹಂಪಿ ಪ್ರದೇಶಗಳಲ್ಲಿ ಓಡಾಡಿದವರು. ಹನುಮಂತನ ಮೇಲೆ ಕನ್ನಡಿಗರಿಗಿರುವ ಭಕ್ತಿ, ಹೆಮ್ಮೆ, ಗೌರವವನ್ನು ಕದ್ದೊಯ್ಯುವ ಪ್ರಯತ್ನವನ್ನು ಕಾಂಗ್ರೆಸ್ ನವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸುರ್ಜೇವಾಲಗೆ ಆಂಜನೇಯನ ಬಗ್ಗೆ ಗೊತ್ತಿಲ್ಲ. ಆಂಜನೇಯನ ಅಪ್ಪ-ಅಮ್ಮ ಯಾರೆಂದು ಗೊತ್ತಿಲ್ಲ. ಆದರೂ ಆಂಜನೇಯನ ಶಕ್ತಿ ಬಗ್ಗೆ ಮಾತನಾಡಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಚುನಾವಣೆ, ಕುರ್ಚಿಗಾಗಿ ಏನು ಬೇಕಾದರೂ ಮಾಡಲು ಕಾಂಗ್ರೆಸ್ ಹೊರಟಿದೆ. ಹಿಂದೂಗಳು ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ ಎಂದು ತಿಳಿದಿದೆ. ಇದೇ ಎಸ್‌ಡಿಪಿಐ ಅನ್ನು ಖುಷಿ ಪಡಿಸಲು ಕಾಂಗ್ರೆಸ್ ಇಂತಹ ಹೇಳಿಕೆಗಳನ್ನು ನೀಡುತ್ತಿದೆ. ನಿಷೇಧಿತ ಪಿಎಫ್‌ಐನವರೇ ಎಸ್‌ಡಿಪಿಐನಲ್ಲಿದ್ದಾರೆ.
ಎಸ್‌ಡಿಪಿಐ ಪ್ರಣಾಳಿಕೆ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿದೆ. ಈ ಚುನಾವಣೆಯಲ್ಲಿ ಧರ್ಮವನ್ನು ಎಳೆದುತಂದು ಕಾಂಗ್ರೆಸ್ ಕೆಟ್ಟ ರಾಜಕೀಯ ಮಾಡುತ್ತಿರುವುದನ್ನು ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದರು. ಬಿಜೆಪಿ, ಆರೆಸ್ಸೆಸ್‌ನ ಒಂದು ಭಾಗವಿದ್ದಂತೆ. ಅದೇ ರೀತಿ ಬಜರಂಗದಳ, ಆರೆಸ್ಸೆಸ್‌ನ ಒಂದು ಭಾಗ. ಯುವಕರಲ್ಲಿ ಶಕ್ತಿ ತುಂಬುವ ಕೆಲಸವನ್ನು ಬಜರಂಗದಳ ಮಾಡುತ್ತಿದೆ. ಧರ್ಮ, ದೇವಸ್ಥಾನಗಳನ್ನು ರಕ್ಷಿಸುವ ಕೆಲಸದಲ್ಲಿ ನಿರತವಾಗಿದೆ ಎಂದು ವಿವರಿಸಿದರು.
ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಮಾತನಾಡಿ, ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಸಾಧನೆಗಳ ಪಟ್ಟಿಯನ್ನು ಜನರ ಮುಂದಿಟ್ಟು ಕರ್ನಾಟಕದ ಬಗ್ಗೆ ದೂರದೃಷ್ಟಿ ಹೊಂದಿದೆ. ಆದರೆ, ಕಾಂಗ್ರೆಸ್, ತನ್ನ ಪ್ರಣಾಳಿಕೆ ಮೂಲಕ ಕೋಮು ವಿಷ ಕಾರಿದೆ. ಹನುಮನನ್ನು ಅವಮಾನಿಸಲು ಕಾಂಗ್ರೆಸ್ ಗೆ ಎಷ್ಟು ಧೈರ್ಯ? ಎಂದು ಆಕ್ಷೇಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ