ಬೆಂಗಳೂರು:
ಒಂದೆ ಮನೆಯನ್ನು ಇಬ್ಬರಿಗೆ ಮಾರಾಟ ಮಾಡಿದ ಆರೋಪದ ಮೇಲೆ ಓಝೋನ್ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವಿರುದ್ಧ ದೂರ ದಾಖಲಾಗಿದೆ.
ದೇವನಹಳ್ಳಿಯಲ್ಲಿರುವ ಓಝೋನ್ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ನ ಹೌಸಿಂಗ್ ಪ್ರಾಜೆಕ್ಟ್ ನಲ್ಲಿ ಈ ವಂಚನೆ ನಡೆಸಿದೆ. ವಂಚನೆಗೊಳಗಾದ ಖರೀದಿದಾರರಲ್ಲಿ ಒಬ್ಬರು ಬಿಲ್ಡರ್ ಮತ್ತು ಅದರ ಐವರು ನಿರ್ದೇಶಕರ ವಿರುದ್ಧ ಸೆಪ್ಟೆಂಬರ್ 28 ರಂದು ಪ್ರಕರಣವನ್ನು ದಾಖಲಿಸಿದ್ದಾರೆ.
ಮನೆ ಖರೀದಿದಾರ ಶಶಿಕಾಂತ ಗುಪ್ತಾ ಅವರ ದೂರಿನ ಆಧಾರದ ಮೇಲೆ ಬಿಲ್ಡರ್ಸ್ ವಿರುದ್ಧ ನಂಬಿಕೆ ಉಲ್ಲಂಘನೆ ಮತ್ತು ವಂಚನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಎಫ್ಐಆರ್ನಲ್ಲಿ ‘ಓಜೋನ್ ಅರ್ಬನ್ ಇನ್ಫ್ರಾ ಕಂಪನಿ’ಯನ್ನು ಮೊದಲ ಆರೋಪಿ ಎಂದು ಹೆಸರಿಸಲಾಗಿದ್ದು, ವ್ಯವಸ್ಥಾಪಕ ನಿರ್ದೇಶಕ ಎಸ್ ವಾಸುದೇವನ್ ಅವರನ್ನು ಎ2 ಎಂದು ಹೆಸರಿಸಲಾಗಿದೆ. ನಿರ್ದೇಶಕರಾದ ಸತ್ಯಮೂರ್ತಿ ಸಾಯಿ, ಡಿ ವಂಶಿ ಸಾಯಿ, ಸೀವೋಸಾಗರ್ ಮತ್ತು ರಾಜೀವ್ ಭಂಡ್ರಿ ಅವರನ್ನೂ ಎಫ್ಐಆರ್ನಲ್ಲಿ ಹೆಸರಿಸಲಾಗಿದೆ.
ಓಝೋನ್ ಅರ್ಬಾನಾ ಅವೆನ್ಯೂ 45 ಎಕರೆಗಳಲ್ಲಿ ಸುಮಾರು 1,800 ಮನೆಗಳನ್ನು ಹೊಂದಿದೆ, ಇದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದೆ. ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೆರಾ) ಯೋಜನೆ ಪೂರ್ಣಗೊಳಿಸಲು ಈ ವರ್ಷ ವಿಸ್ತರಣೆ ಅವಕಾಶ ನೀಡಲು ನಿರಾಕರಿಸಿದೆ.
ಗುಪ್ತಾ ಅವರು 2017 ರಲ್ಲಿ ‘ಓಝೋನ್ ಅರ್ಬಾನಾ ಅವೆನ್ಯೂ’ನಲ್ಲಿ ಪೆಂಟ್ ಹೌಸ್ (ಎಸ್ 1102) ಗಾಗಿ 1.32 ಕೋಟಿ ಪಾವತಿಸಿದ್ದರು. ಸೇಲ್ ಡೀಡ್ ಕೂಡ ಮಾಡಿಕೊಳ್ಳಲಾಗಿದೆ. ಬಿಲ್ಡರ್ಗೆ ಪೂರ್ಣ ಹಣ ಪಾವತಿಸಲು ಬ್ಯಾಂಕ್ ಸಾಲವನ್ನು ತೆಗೆದುಕೊಳ್ಳಲಾಗಿದೆ, 2022ರಲ್ಲಿ ಮನೆ ಶಶಿಕಾಂತ್ ಗಪ್ತಾ ಅವರಿಗೆ ಹಸ್ತಾಂತರವಾಗಬೇಕಿತ್ತು ಎಂದು ಗುಪ್ತಾ ಪರ ವಕೀಲ ರೆನಾಲ್ಡ್ ಡಿಸೋಜಾ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತಿಳಿಸಿದ್ದಾರೆ, ಮೂರು ವರ್ಷಗಳ ಹಿಂದೆ (ಸೆಪ್ಟೆಂಬರ್ 9, 2021) ಮನೆಯನ್ನು ಬಿಲ್ಡರ್ ಮತ್ತೊಬ್ಬ ಖರೀದಿದಾರರಿಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದ ಗುಪ್ತಾ ಅವರಿಗೆ ಆಘಾತವಾಗಿತ್ತು. ಹೊಸ ಖರೀದಿದಾರ ಕೂಡ ಮನೆ ಖರೀದಿಸಲು ಬ್ಯಾಂಕ್ ಸಾಲ ಪಡೆದಿದ್ದರು.
ಮನೆ ನಿರ್ಮಾಣ ಕೆಲಸ ಶೇ. 49 ರಷ್ಟು ಮಾತ್ರ ಪೂರ್ಣಗೊಂಡಿದೆ. ಕೆಲವು ಬ್ಲಾಕ್ಗಳು ಭೌತಿಕವಾಗಿ ಬಹುತೇಕ ಪೂರ್ಣಗೊಂಡಿವೆ, ಆದರೆ ಲಿಫ್ಟ್ಗಳು, ಶಾಶ್ವತ ನೀರು ಮತ್ತು ವಿದ್ಯುತ್ ಸಂಪರ್ಕದ ಕೊರತೆಯಿದೆ. ಬಿಲ್ಡರ್ ಒದಗಿಸಿದ ತಾತ್ಕಾಲಿಕ ಸೌಕರ್ಯಗಳೊಂದಿಗೆ ಸುಮಾರು 300 ಕುಟುಂಬಗಳು ಸದ್ಯಕ್ಕೆ ಅಲ್ಲಿ ವಾಸಿಸುತ್ತಿವೆ ಎಂದಿದ್ದಾರೆ.
2022 ಮತ್ತು 2023 ರಲ್ಲಿ K-RERA ನಿಂದ ಯೋಜನೆಗೆ ವಿಸ್ತರಣೆಯನ್ನು ಪಡೆಯಲು ಬಿಲ್ಡರ್ ಪ್ರಯತ್ನಿಸಿದ್ದಾರೆ, ಮನೆ-ಖರೀದಿದಾರರು ಈ ವರ್ಷ RERA ಸಂಪರ್ಕಿಸಿದ್ದಾರೆ. ಯಾವುದೇ ವಿಸ್ತರಣೆಗಳನ್ನು ಅನುಮತಿಸದಂತೆ ವಿನಂತಿಸಿದ್ದಾರೆ. ಮನೆ ಖರೀದಿದಾರರು ಸಹ ಅಪೂರ್ಣ ಯೋಜನೆಯನ್ನು ಕೈಗೆತ್ತಿಕೊಂಡು ಸ್ವಂತವಾಗಿ ಪೂರ್ಣಗೊಳಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.