ಶಿರಸಿ:
ಕಳೆದ ವಾರ ಅತಿಯಾದ ಮಳೆಗೆ ಉಕ್ಕಿದ ಬೇಡ್ತಿ ನದಿಯ ಪರಿಣಾಮ ಸಂಪೂರ್ಣ ಮನೆ ಕಳೆದುಕೊಂಡು ಬೀದಿಯಲ್ಲಿದ್ದ ಗ್ರಾಮವೊಂದನ್ನು ದತ್ತು ಪಡೆದು ಕಳೆದು ಹೋದದ್ದನ್ನು ಪುನಃ ಕಟ್ಟಿಕೊಡುವಲ್ಲಿ ಸೋದೆ ವಾದಿರಾಜ ಮಠ ಮುಂದಾಗಿದೆ.
ಸೋದೆ ಮಠದ ಯತಿಗಳಾದ ಶ್ರೀ ವಿಶ್ವವಲ್ಲಭ ಶ್ರೀಪಾದರ ಆಶಯದಂತೆ ಮನೆ, ಮನೆಯೊಳಗಿನ ವಸ್ತುಗಳನ್ನೂ ಅಕ್ಷರಶಃ ಕಳೆದುಕೊಂಡ ಅನಾಥ ಭಾವದಲ್ಲಿರುವ ಯಲ್ಲಾಪುರ ತಾಲೂಕಿನ ಕಂಪ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೋಮನಳ್ಳಿ ಬಳಿಯ ಕುಂಬ್ರಿ ಊರಿನ ಆರು ಕುಣಬಿ ಕುಟುಂಬಕ್ಕೆ ಮಠ ಆಸರೆಯಾಗಿ ನಿಲ್ಲಲು ತೀರ್ಮಾನಿಸಿದೆ. ಪವಿತ್ರ ಚಾತರ್ಮಾಸ್ಯ ವೃತದಲ್ಲಿರುವ ಶ್ರೀಗಳು ಆರೂ ಕುಟುಂಬವನ್ನು ದತ್ತು ಪಡೆದು ಅವರು ಕಳೆದುಕೊಂಡ ಬದುಕನ್ನು ಪುನಃ ಕಟ್ಟಿಕೊಡಲು ಸೂಚಿಸಿದ್ದಾರೆ ಎಂದು ಮಠದ ಪರವಾಗಿ ಆಡಳಿತಾಧಿಕಾರಿ ಮಾಣಿಕ್ಯ (ರಾಧಾರಮಣ) ಉಪಾಧ್ಯಾಯ ತಿಳಿಸಿದ್ದಾರೆ.
ಕೂಲಿ, ಕೃಷಿಯನ್ನು ನಂಬಿಕೊಂಡು ಬಡತನದಲ್ಲಿ ಬದುಕನ್ನು ಮುಗ್ದತೆ, ಪ್ರಾಮಾಣಿಕತೆಯಲ್ಲಿ ತೊಡಗಿಸಿಕೊಂಡ ಆರು ಕುಟುಂಬಗಳ ಮೂವತ್ತೈದಕ್ಕೂ ಅಧಿಕ ಕುಣಬಿ ಸಮುದಾಯ ಜನರು ಕಳೆದ ವಾರದಿಂದ ಕಂಗಾಲಾಗಿತ್ತು. ದಾನಿಗಳು, ಸಂಘ ಸಂಸ್ಥೆಗಳು, ಸ್ಥಳೀಯ ಪಂಚಾಯ್ತಿ ಸಹಕಾರ ನೀಡಿದ್ದರೂ ಬಿದ್ದು ಹೋದ ಮನೆ ಕಟ್ಟಿಕೊಳ್ಳುವ ಬಗ್ಗೆ ಚಿಂತಿತರಾಗಿದ್ದರು. ಇದೇ ವೇಳೆ ಮಠದ ಪ್ರತಿನಿಧಿಯಾಗಿ ಯಲ್ಲಾಪುರ ತಹಸೀಲ್ದಾರರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿ ತುಂಬ್ರಿ ಗ್ರಾಮಕ್ಕೆ ಭೇಟಿ ನೀಡಿ ಶ್ರೀಗಳಿಗೆ ಚಿತ್ರಣ ನೀಡಿದ ಬಳಿಕ ಈ ಸಂಕಲ್ಪ ಮಾಡಿದ್ದಾರೆ ಎಂದೂ ವಿವರಿಸಿದ್ದಾರೆ.
ಪುರುಷ ಗಣಪತಿ ಕುಣಬಿ, ಗಣಪತಿ ಅರ್ಜುನ ಕುಣಬಿ, ಗೋಪಾಲ ಗಣಪು ಕುಣಬಿ, ನಾಗೇಶ ನಾರಾಯಣ
ಕುಣಬಿ, ಶಿವು ನಾರಾಯಣ ಕುಣಬಿ, ಕೇಶವ ಕುಣಬಿ ಕುಟುಂಬಗಳಿಗೆ ತೀವ್ರ ತೊಂದರೆ ಆಗಿದೆ.
ಇದೇ ಊರಿನ ಭುವನೇಶ್ವರಿ ಜೋಶಿ ಅವರಿಗೆ ಸಂಬಂಧಿತ ಮನೆ ಕೂಡ ಬಿದ್ದಿದೆ.
ಈ ಕುಟುಂಬಗಳಿಗೆ ನೆರವಾಗಲು ಮಠ ಮುಂದಾಗಿದೆ. ತಕ್ಷಣಕ್ಕೆ ಮಳೆ ಕೂಡ ಇರುವದರಿಂದ ಸ್ಥಳೀಯ
ಮಂಚಿಕೇರಿ ಸೇವಾ ಸಹಕಾರಿ ಸಂಘದ ಮೂಲಕ ದಿನಸಿ ಹಾಗೂ ತಾತ್ಕಾಲಿಕ ನೆಲ ಹಾಸಲಿಗೆ ಕಲ್ಲು
ಒದಗಿಸಲು ಮಠ ಚಿಂತಿಸಿದೆ. ದೀಪಾವಳಿಯ ಬಳಿಕ ಇನ್ನೊಮ್ಮೆ
ನೆರೆ ಬಂದರೂ ಸಮಸ್ಯೆ ಆಗದಂತೆ ಸ್ಥಳ ನೋಡಿ ತಾಲೂಕು ಆಡಳಿತದ ಜೊತೆ ಸಮಾಲೋಚನೆ ನಡೆಸಿ
ಶಾಶ್ವತ ಮನೆ ನಿರ್ಮಾಣ ಕೂಡ ಮಠ ಮಾಡಿಕೊಡಲು ಸಿದ್ದವಿದೆ ಎಂದೂ ಮಾಣಿಕ್ಯ ಉಪಾಧ್ಯಾಯ
ತಿಳಿಸಿದ್ದಾರೆ.