ತಮಿಳುನಾಡು :
ತಮಿಳುನಾಡಿನಲ್ಲಿಯೂ ಕಾವೇರಿ ಹೋರಾಟ ತೀವ್ರಗೊಂಡಿದೆ. ತಮ್ಮ ರಾಜ್ಯಕ್ಕೆ ನದಿ ನೀರು ಬಿಡುವಂತೆ ಒತ್ತಾಯಿಸಿ ತಿರುಚ್ಚಿಯ ರೈತರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಕರ್ನಾಟಕವನ್ನು ಒತ್ತಾಯಿಸಿದರು.
ಮಾನವನ ಆಸ್ಥಿ ಪಂಜರ, ತಲೆಬುರುಡೆ ಇಟ್ಟುಕೊಂಡು ಅರೆಬೆತ್ತಲು ಪ್ರತಿಭಟನೆ ನಡೆಸಿದ ರೈತರು, ಕರ್ನಾಟಕ ಸದ್ಯ ಹರಿಸುತ್ತಿರುವ ಕಾವೇರಿ ನೀರು ನಮ್ಮ ಬೆಳೆಗೆ ಸಾಕಾಗುತ್ತಿಲ್ಲ. ಇನ್ನೂ ಹೆಚ್ಚಿನ ನೀರು ಹರಿಸಬೇಕೆಂದು ಆಗ್ರಹಿಸಿದರು.
ಈ ಮಧ್ಯೆ ನೆರೆಯ ರಾಜ್ಯಕ್ಕೆ ಕಳುಹಿಸುವಷ್ಟು ನೀರಿಲ್ಲ ಎಂಬುದು ಕರ್ನಾಟಕ ಸರ್ಕಾರದ ವಾದವಾದರೂ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ರಾಜತಾಂತ್ರಿಕವಾಗಿ ಸಮಸ್ಯೆ ನಿಭಾಯಿಸಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಿಎಂಕೆ ಹೇಳಿದೆ.
ಕಾವೇರಿ ನೀರಿನ ಕೊರತೆಯಿದೆ ಎಂಬುದು ಕರ್ನಾಟಕದ ವಾದವಾಗಿದ್ದರೂ ತಮಿಳುನಾಡು ರೈತರು ಸಂಪೂರ್ಣವಾಗಿ ಕೃಷಿಯ ಮೇಲೆ ಅವಲಂಬಿತವಾಗಿರುವುದು ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸರ್ಕಾರ ಕಾನೂನು ಪ್ರಕ್ರಿಯೆ, ಕೇಂದ್ರ ಸರ್ಕಾರ ಮತ್ತು ಜಲಶಕ್ತಿ ಸಚಿವರ ಬೆಂಬಲ ಕೋರುವುದರ ಜೊತೆಗೆ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲು ಪ್ರಯತ್ನಿಸುತ್ತಿದೆ ಎಂದು ಡಿಎಂಕೆ ಸಂಸದ ತಿರುಚಿ ಶಿವಾ ಹೇಳಿದ್ದಾರೆ.
ಸಿಎಂ ಸ್ಟಾಲಿನ್ ರಾಜತಾಂತ್ರಿಕವಾಗಿ ಸಮಸ್ಯೆಯನ್ನು ನಿಭಾಯಿಸುತ್ತಿದ್ದಾರೆ. ತಮಿಳುನಾಡಿಗೆ ಬಾಕಿ ಹರಿಸಬೇಕಾದ ನೀರನ್ನು ಕರ್ನಾಟಕ ಬಿಡುಗಡೆ ಮಾಡಲಿದೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.