ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ …!

ವದೆಹಲಿ

   ಕೇಂದ್ರ ಸರ್ಕಾರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ಏರಿಕೆ ಮಾಡಿ ದೀಪಾವಳಿ ಹಬ್ಬದ ಉಡುಗೊರೆ ನೀಡಿದೆ. ಆದರೆ ಕೇಂದ್ರ ಸರ್ಕಾರಿ ನೌಕರರ ಪ್ರಮುಖ ಬೇಡಿಕೆ 8ನೇ ಕೇಂದ್ರ ವೇತನ ಆಯೋಗದ ರಚನೆಯಾಗಿದೆ.

   ಕೆಲವೇ ದಿನಗಳಲ್ಲಿ ಈ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ. ಆಯೋಗದ ವರದಿಯಂತೆ ವೇತನ ಎಷ್ಟು ಏರಿಕೆಯಾಗಲಿದೆ? ಎಂದು ಚರ್ಚೆಗಳು ನಡೆಯುತ್ತಿವೆ.

   ಕೇಂದ್ರ ಸರ್ಕಾರ ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗ ರಚನೆ ಮಾಡುತ್ತಾ ಬಂದಿದೆ. ಈಗ ಕೇಂದ್ರ ಸರ್ಕಾರಿ ನೌಕರರು 7ನೇ ಕೇಂದ್ರ ವೇತನ ಆಯೋಗದ ಶಿಫಾರಸಿನ ಅನ್ವಯ ವೇತನವನ್ನು ಪಡೆಯುತ್ತಿದ್ದಾರೆ. 8ನೇ ವೇತನ ಆಯೋಗ ರಚನೆ ಮಾಡಬೇಕು ಎಂದು ಸರ್ಕಾರಿ ನೌಕರರ ಸಂಘಟನೆಗಳು ಹಣಕಾಸು ಸಚಿವರಿಗೆ ಮನವಿಯನ್ನು ಸಲ್ಲಿಕೆ ಮಾಡಿವೆ. 

   ಕೇಂದ್ರದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರ ತನ್ನ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ 8ನೇ ವೇತನ ಆಯೋಗ ರಚನೆ ಕುರಿತು ಯಾವುದೇ ಘೋಷಣೆ ಮಾಡಿಲ್ಲ. ಇದು ಸರ್ಕಾರಿ ನೌಕರರ ನಿರಾಸೆಗೆ ಕಾರಣವಾಗಿತ್ತು. ಆದರೆ ಈಗ ಹೊಸ ಅಪ್‌ಡೇಟ್ ಸಿಕ್ಕಿದ್ದು, ಈ ಕುರಿತು ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುತ್ತದೆ. 

  ಕೇಂದ್ರ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ 8ನೇ ವೇತನ ಆಯೋಗ ರಚನೆ ಕುರಿತು ಚರ್ಚಿಸಲು ನವೆಂಬರ್‌ನಲ್ಲಿ ಜಂಟಿ ಸಲಹಾ ಮಂಡಳಿ ಸಭೆ ನಿಗದಿಯಾಗಿದೆ. ನೌಕರರ ಬೇಡಿಕೆ ಕುರಿತು ಸಭೆಯಲ್ಲಿ ವಿವರವಾದ ಚರ್ಚೆಗಳು ನಡೆಯಲಿವೆ. ಕಾರ್ಮಿಕ ಸಂಘಟನೆಗಳು ಸಹ ವೇತನ ಆಯೋಗದ ಬೇಡಿಕೆಯನ್ನು ಸಭೆಯಲ್ಲಿ ಮಂಡಿಸಲಿವೆ. 

   7ನೇ ಕೇಂದ್ರ ವೇತನ ಆಯೋಗ ತನ್ನ ವರದಿಯನ್ನು ಅಂತಿಮಗೊಳಿಸಲು 18 ತಿಂಗಳ ಕಾಲಾವಕಾಶ ತೆಗೆದುಕೊಂಡಿತ್ತು. 2016ರಲ್ಲಿ ಈ ವರದಿ ಜಾರಿಗೆ ಬಂದಿದೆ. ಈಗ 8ನೇ ವೇತನ ಆಯೋಗ ರಚನೆಯ ಕುರಿತು 2025ರ ಆರಂಭದಲ್ಲಿ ಘೋಷಣೆ ಮಾಡುವ ನಿರೀಕ್ಷೆಯನ್ನು ಹೊಂದಲಾಗಿದೆ. ಅದಕ್ಕಾಗಿ ನವೆಂಬರ್‌ನಲ್ಲಿ ಸಭೆಯನ್ನು ನಿಗದಿ ಮಾಡಲಾಗಿದೆ.

   ರಚನೆಯಾಗುವ ಹೊಸ ವೇತನ ಆಯೋಗ ಸರ್ಕಾರಿ ನೌಕರರ ಮೂಲ ವೇತನ, ಪಿಂಚಣಿ ಮುಂತಾದವುಗಳನ್ನು ಏರಿಕೆ ಮಾಡುವ ಕುರಿತು ವಿವರವಾದ ಅಧ್ಯಯನ ನಡೆಸಲಿದೆ. ಹಣದುಬ್ಬರ ಮತ್ತು ಇತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರಿ ನೌಕರರ ಸಂಘದ ಮನವಿಗಳನ್ನು ಸ್ವೀಕಾರ ಮಾಡಿ ಸರ್ಕಾರಕ್ಕೆ ಶಿಫಾರಸು ಸಲ್ಲಿಕೆ ಮಾಡಲಿದೆ.

   8ನೇ ವೇತನ ಆಯೋಗದ ವರದಿ ಜಾರಿಗೆ ಬಂದರೆ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ ಶೇ 34,560 ರೂ.ಗಳಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ನಿವೃತ್ತ ನೌಕರರ ಪಿಂಚಣಿಯೂ ಏರಿಕೆಯಾಗಲಿದೆ. ಆದ್ದರಿಂದ ನಿವೃತ್ತ ನೌಕರರಿಗೂ ಸಹ ವೇತನ ಆಯೋಗದ ಶಿಫಾರಸಿನ ಪ್ರಯೋಜನ ಸಿಗಲಿದೆ.

   2014ರ ಫೆಬ್ರವರಿ 28ರಂದು ಕೇಂದ್ರ ಸರ್ಕಾರ 7ನೇ ಕೇಂದ್ರ ವೇತನ ಆಯೋಗ ರಚನೆ ಮಾಡಿತ್ತು. ಈ ಆಯೋಗ ನೀಡಿದ ವರದಿಯನ್ನು 2016ರಲ್ಲಿ ಜಾರಿಗೊಳಿಸಲಾಗಿದೆ. ಈಗ 8ನೇ ವೇತನ ಆಯೋಗ ರಚನೆ ಮಾಡಿದರೆ 2026ರಲ್ಲಿ ವರದಿ ಕೈ ಸೇರಲಿದ್ದು, ಹೊಸ ವರದಿ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಸಹಾಯಕವಾಗಲಿದೆ ಎಂಬುದು ಲೆಕ್ಕಾಚಾರವಾಗಿದೆ.

ಈ ಹಿಂದೆ ಪೂರ್ಣಗೊಂಡ ಸಂಸತ್ ಕಲಾಪದ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರ ನೀಡಿದ್ದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ 8ನೇ ವೇತನ ಆಯೋಗ ರಚನೆ ಮಾಡುವ ಪ್ರಸ್ತಾವನೆ ಸದ್ಯ ಸರ್ಕಾರದ ಮುಂದಿಲ್ಲ ಎಂದು ಹೇಳಿಕೆ ನೀಡಿದ್ದರು. ಸರ್ಕಾರಿ ನೌಕರರ ಸಂಘಗಳ ಅಭಿಪ್ರಾಯದಂತೆ ಹಿಂದಿನ ವೇತನ ಆಯೋಗ ರಚನೆಗೆ ಹೋಲಿಕೆ ಮಾಡಿದರೆ 8ನೇ ವೇತನ ಆಯೋಗ ರಚನೆಯ ಘೋಷಣೆ ವಿಳಂಬವಾಗುತ್ತಿದೆ.

Recent Articles

spot_img

Related Stories

Share via
Copy link
Powered by Social Snap