ಜೈಪುರ:
ರಾಜಸ್ಥಾನದ ಅಜ್ಮೀರದ ಮೊಯಿನುದ್ದೀನ್ ಚಿಸ್ತಿ ದರ್ಗಾ ಶಿವನ ದೇವಾಲಯವಾಗಿದೆ ಎಂಬ ವಿವಾದದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಂಪ್ರದಾಯಿಕ ಪದ್ಧತಿಯನ್ನು ಮುಂದುವರಿಸಿದ್ದಾರೆ. ಮೋದಿ ಗುರುವಾರ ಅಜ್ಮೀರ್ ಷರೀಫ್ ದರ್ಗಾಕ್ಕೆ ಚಾದರ್ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ.
ಚಾದರ್ ಅನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದಿಕಿ ಅವರಿಗೆ ಸಂಜೆ 6 ಗಂಟೆಗೆ ನೀಡಲಾಗುವುದು. ನಂತರ ಅವರು ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದ ಉರ್ಸ್ ಸಮಯದಲ್ಲಿ ಅದನ್ನು ದೇಗುಲದಲ್ಲಿ ಅರ್ಪಿಸುತ್ತಾರೆ. ಪ್ರಧಾನಿಯಾದ ನಂತರ ನರೇಂದ್ರ ಮೋದಿ ಅವರು ಅಜ್ಮೀರ್ ಷರೀಫ್ ದರ್ಗಾಕ್ಕೆ 10 ಬಾರಿ ‘ಚಾದರ್’ ಅರ್ಪಿಸಿದ್ದಾರೆ. ಈ ವರ್ಷ ಅವರು 11 ಬಾರಿಗೆ ಚಾದರ್ ಅರ್ಪಿಸಲಿದ್ದಾರೆ. ಕಳೆದ ವರ್ಷ, 812 ನೇ ಉರ್ಸ್ ಸಮಯದಲ್ಲಿ, ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುವ ನಿಯೋಗದೊಂದಿಗೆ ಆಗಿನ ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಮತ್ತು ಜಮಾಲ್ ಸಿದ್ದಿಕಿ ಮೋದಿ ಅವರ ಪರವಾಗಿ ‘ಚಾದರ್’ ಅನ್ನುಅರ್ಪಿಸಿದ್ದರು.
ರಾಜಸ್ಥಾನದ ಅಜ್ಮೀರ್‌ನಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ದರ್ಗಾ ಒಂದು ಕಾಲದಲ್ಲಿ ಹಿಂದೂ ದೇವಾಲಯವಾಗಿತ್ತು. ಅಲ್ಲಿ ಶಿವನನ್ನು ಪೂಜಿಸಲಾಗುತ್ತಿತ್ತು ಎಂದು ಹಿಂದೂ ಸಂಘಟನೆಯೊಂದು ಪ್ರತಿಪಾದನೆ ನಡೆಸಿ ಕೋರ್ಟ್ ಮೆಟ್ಟಿಲೇರಿತ್ತು. ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಸೆಪ್ಟೆಂಬರ್ 25, 2024 ರಂದು ದರ್ಗಾದೊಳಗೆ ಶಿವ ದೇವಾಲಯವಿದೆ ಎಂದು ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಾಲಯ ಪರಿಶೀಲನೆಗೆ ತೆಗೆದುಕೊಂಡ ನಂತರ ವಿವಾದ ಭುಗಿಲೆದಿತ್ತು.
ನ್ಯಾಯಾಲಯವು ನವೆಂಬರ್ 27, 2024 ರಂದು ಅರ್ಜಿಯನ್ನು ಸ್ವೀಕರಿಸಿತು. ಸಿವಿಲ್ ನ್ಯಾಯಾಧೀಶ ಮನಮೋಹನ್ ಚಂದೇಲ್ ಅವರು ಅಜ್ಮೀರ್ ದರ್ಗಾ ಸಮಿತಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಗೆ ಡಿಸೆಂಬರ್ 20 ರೊಳಗೆ ಮಾಹಿತಿ ನೀಡಲು ಆದೇಶಿಸಿದ್ದರು. ನಂತರ ಮುಂದಿನ ವಿಚಾರಣೆಯನ್ನು ಜನವರಿ 24ಕ್ಕೆ ನಿಗದಿಪಡಿಸಲಾಗಿದೆ.
ಈ ಬಗ್ಗೆ ಮಾತನಾಡಿದ ರಾಜಸ್ಥಾನದ ಶಿಕ್ಷಣ ಸಚಿವ, ಮದನ್ ದಿಲಾವರ್, ಈ ವಿಷಯದ ಬಗ್ಗೆ ನ್ಯಾಯಾಲಯವು ನಿರ್ಧರಿಸುತ್ತದೆ, ಔರಂಗಜೇಬ್ ಮತ್ತು ಬಾಬರ್ ಸೇರಿದಂತೆ ಮೊಘಲ್ ಆಕ್ರಮಣಕಾರರಿಂದ ಹಲವಾರು ದೇವಾಲಯಗಳನ್ನು ನಾಶಪಡಿಸಲಾಗಿದೆ, ನಂತರ ಆ ಸ್ಥಳಗಳಲ್ಲಿ ಮಸೀದಿಗಳನ್ನು ನಿರ್ಮಿಸಿದರು ಎಂಬುದಂತೂ ನಿಜ. ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕಲಾಕೃತಿಗಳನ್ನು ಪತ್ತೆ ಹಚ್ಚಲು ಅಗತ್ಯಬಿದ್ದರೆ ನ್ಯಾಯಾಲಯ ಉತ್ಖನನಕ್ಕೆ ಆದೇಶಿಸಬೇಕು ಎಂದು ಹೇಳಿದ್ದಾರೆ.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಅರ್ಜಿ ಬಗ್ಗೆ ಟೀಕಿಸಿದ ಅವರು ಅಜ್ಮೀರ್ ದರ್ಗಾ ಸುಮಾರು 800 ವರ್ಷಗಳಷ್ಟು ಹಳೆಯದಾಗಿದೆ. ಸೌಹಾರ್ದತೆಯ ಪ್ರತೀಕವಾಗಿರುವ ದರ್ಗಾಕ್ಕೆ ಹಿಂದೂಗಳು ಸೇರಿದಂತೆ ಎಲ್ಲ ಧರ್ಮದ ಜನರು ಭೇಟಿ ನೀಡುತ್ತಾರೆ. ವಾಹರಲಾಲ್ ನೆಹರು ಅವರಿಂದ ಹಿಡಿದು ನರೇಂದ್ರ ಮೋದಿಯವರೆಗೆ ಪ್ರತಿಯೊಬ್ಬ ಭಾರತೀಯ ಪ್ರಧಾನ ಮಂತ್ರಿಗಳು ದರ್ಗಾದಲ್ಲಿ ಚಾದರ್ (ಪವಿತ್ರವಾದ ಬಟ್ಟೆ) ಅರ್ಪಿಸಿದ್ದಾರೆ ಎಂದು ಹೇಳಿದ್ದಾರೆ.