ಬೆಂಗಳೂರು
ಕೊಡಗು ಜಿಲ್ಲೆಯ ಬಾಡಗ ಗ್ರಾಮ, ಸುತ್ತಮುತ್ತ 24 ಗಂಟೆಗಳಲ್ಲಿ ಅಜ್ಜ ಮತ್ತು ಮೊಮ್ಮಗನ ಮೇಲೆ ಹುಲಿ ದಾಳಿ ಮಾಡಿ ಜೀವ ಬಲಿ ತೆಗೆದುಕೊಂಡು ಘಟನೆಗಳಿಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿಂದು ಭಾರೀ ಆಕ್ರೋಶ ವ್ಯಕ್ತವಾಯಿತು. ವ್ಯಾಘ್ರ ದಾಳಿಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಕೆ.ಜಿ. ಬೋಪಯ್ಯ, ಹುಲಿ ಬೇಟೆಗೆ ನಮಗೆ ಅವಕಾಶ ನೀಡಬೇಕು. ನಮ್ಮ ಕೊಡವ ಜನಾಂಗದಲ್ಲಿ ಹುಲಿ ಮದುವೆ ಎಂಬ ಪ್ರತೀತಿ ಇತ್ತು. ನಾವು ದಾಳಿ ಮಾಡುವ ಹುಲಿಗೆ ಮದುವೆ ಮಾಡಿಸುತ್ತೇವೆ ಎಂದರು. ಬಿಜೆಪಿಯ ಅಪ್ಪಚ್ಚು ರಂಜನ್ ಮಾತನಾಡಿ, ಹುಲಿ ದಾಳಿ ಆತಂಕಕಾರಿಯಾಗಿದ್ದು, ಡಿಎಫ್‌ಒ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ, ಅಜ್ಜ ಮತ್ತು ಮೊಮ್ಮಗ ಮೃತಪಟ್ಟ ನಂತರ ಇದನ್ನು ತಿಳಿದು ಅಜ್ಜಿಯೂ ಆಘಾತದಿಂದ ಸಾವನ್ನಪ್ಪಿದ್ದಾರೆ. ಮೃತಪಟ್ಟವರು ನಮ್ಮ ಕ್ಷೇತ್ರಕ್ಕೆ ಸಂಬಂಧಪಟ್ಟವರು. ಮಗು ನೋಡಲು ಹೋದಾಗ ಅಜ್ಜನ ಮೇಲೆ ಹುಲಿ ಮಾಡಿದೆ. ಪರಿಹಾರ ಕೊಡುವುದು ಬೇರೆ, ಆದರೆ ಅಧಿಕಾರಿಗಳಿಗೆ ಬರೆ ಹಾಕದಿದ್ದರೆ ತೊಂದರೆ ಎದುರಾಗಲಿದೆ. ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಮಾತನಾಡಿ, ಇದೊಂದು ಗಂಭೀರ ವಿಚಾರವಾಗಿದ್ದು, ಈ ಕುರಿತು ವಿಶೇಷ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ಹೇಳಿದರು. ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ನಿರ್ಲಕ್ಷ ಆಗಿದ್ದರೆ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಮಾಹಿತಿ ಪಡೆದು ಸರ್ಕಾರ ಸದನಕ್ಕೆ ಉತ್ತರ ನೀಡಲಿದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ