ಮರಾಠ ಸಾಮ್ರಾಜ್ಯದ ಸಂಸ್ಥಾಪಕರು, ಮಹಾನ್ ಯೋಧರು ಆದ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನವನ್ನು ಫೆಬ್ರವರಿ 19 ರಂದು ಅಂದರೆ ಇಂದು ಆಚರಿಸಲಾಗುತ್ತದೆ. ಛತ್ರಪತಿ ಶಿವಾಜಿ ಮಹಾರಾಜರ ವೀರಗಾಥೆಗಳು ಇತಿಹಾಸದ ಪುಟಗಳಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ಅದರ ಬಗ್ಗೆ ಇಡೀ ದೇಶವು ಜಾಗೃತವಾಗಿದೆ. ಇಂದು ಶಿವಾಜಿ ಮಹಾರಾಜರ 394ನೇ ಜಯಂತಿಯನ್ನು ಆಚರಿಸಲಾಗುತ್ತಿದೆ. ಛತ್ರಪತಿ ಶಿವಾಜಿಯವರ ಜನ್ಮದಿನವನ್ನು ಮಹಾರಾಷ್ಟ್ರದಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ಆಚರಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಶಿವಾಜಿಯ ಜನ್ಮದಿನವು ಸಾಕಷ್ಟು ಜನಪ್ರಿಯವಾಗಿದೆ.
ಛತ್ರಪತಿ ಶಿವಾಜಿ ಮಹಾರಾಜರುವ 1630 ರ ಫೆಬ್ರವರಿ 19 ರಂದು ಮರಾಠ ಕುಟುಂಬದಲ್ಲಿ ಜನಿಸಿದರು. ಮೊಘಲರ ವಿರುದ್ಧ ಅನೇಕ ಯುದ್ಧಗಳನ್ನು ಮಾಡಿ ಅವರನ್ನು ಸೋಲಿಸಿದ ಮರಾಠ ಚಕ್ರವರ್ತಿ ಈತ. ತಮ್ಮ 15 ನೇ ವಯಸ್ಸಿನಲ್ಲಿ, ಶಿವಾಜಿ ಮಹಾರಾಜರು ಮೊಘಲರ ವಿರುದ್ಧ ಮೊದಲ ಯುದ್ಧವನ್ನು ಪ್ರಾರಂಭಿಸಿದರು. 16 ನೇ ವಯಸ್ಸಿನಲ್ಲಿ ತೋರ್ನಾ ಕೋಟೆಯನ್ನು ವಶಪಡಿಸಿಕೊಂಡನು ಮತ್ತು 17 ನೇ ವಯಸ್ಸಿನಲ್ಲಿ ರಾಯಗಢ ಮತ್ತು ಕೊಂಡ್ಲಾ ಕೋಟೆಗಳನ್ನು ವಶಪಡಿಸಿಕೊಂಡರು. ಶಿವಾಜಿಯವರ ಜನ್ಮ ವಾರ್ಷಿಕೋತ್ಸವದ ವಿಶೇಷ ಸಂದರ್ಭದಲ್ಲಿ ಅವರ ಕುರಿತು ಒಂದಿಷ್ಟು ಆಸಕ್ತಿಕಾರಕ ಮಾಹಿತಿಗಳನ್ನು ತಿಳಿದುಕೊಳ್ಳೋಣ.
ಛತ್ರಪತಿ ಶಿವಾಜಿಯು ಅತ್ಯಂತ ಧೈರ್ಯಶಾಲಿ ಸಾಮ್ರಾಟನಾಗಿದ್ದು, ಭಾರತದಾದ್ಯಂತ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿ, ವಿಸ್ತರಿಸಿದ ಕೀರ್ತಿ ಇವರದ್ದು. ಶಿವಾಜಿ ಅವರು ತಮ್ಮ ಜೀವಿತಾವಧಿಯಲ್ಲಿ ತನ್ನ ಸಾಮ್ರಾಜ್ಯವನ್ನು ಮೊಘಲರಿಂದ ಕಾಪಾಡಿಕೊಳ್ಳಲು ಅನೇಕ ವರ್ಷಗಳ ಕಾಲ ಹೋರಾಡಿದ್ದರು. ಇನ್ನು ಕೆಲವರು ಛತ್ರಪತಿ ಶಿವಾಜಿಯನ್ನು ದೇವರೆಂದೇ ಪರಿಗಣಿಸುತ್ತಾರೆ. ದಕ್ಕಿಣ ಭಾರತದಲ್ಲಿ ಇಂದಿಗೂ ಕೂಡ ಪ್ರಾಚೀನ ಹಿಂದೂ ದೇವಾಲಯಗಳು ಅಳಿಯದೇ ಉಳಿದಿದೆಯೆಂದರೆ ಅದಕ್ಕೆ ಮುಖ್ಯ ಕಾರಣ ಛತ್ರಪತಿ ಶಿವಾಜಿಯ ನ್ಯಾಯಯುತ ಆಡಳಿತವಾಗಿದೆ.
ಶಿವಾಜಿ ಮಹಾರಾಜರ ಪರಿಚಯ:
ಛತ್ರಪತಿ ಶಿವಾಜಿ ಮಹಾರಾಜರ ಪೂರ್ಣ ಹೆಸರು ಶಿವಾಜಿರಾಜೆ ಶಹಾಜಿರಾಜೆ ಬೋಂಸ್ಲೆ. ಶಿವಾಜಿ ಮಹಾರಾಜರು ಫೆಬ್ರುವರಿ 19, 1630 ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿನ ಶಿವನೇರಿ ಎನ್ನುವ ಕೋಟೆಯಲ್ಲಿ ಜನಿಸಿದರು. ಶಿವಾಜಿ ಮಹಾರಾಜರ ಪಟ್ಟಾಭಿಷೇಕವು ಜೂನ್ 6, 1674 ರಂದು ನಡೆಯಿತು. ಶಿವಾಜಿ ಮಹಾರಾಜರು ತಮ್ಮ ಆಡಳಿತಾವಧಿಯಲ್ಲಿ ಪಶ್ಚಿಮ ಮಹಾರಾಷ್ಟ್ರದ ಕೊಂಕಣ, ಸಹ್ಯಾದ್ರಿ ಬೆಟ್ಟಗಳಿಂದ ಪಶ್ಚಿಮ ಮಹಾರಾಷ್ಟ್ರದ ದಕ್ಷಿಣ ಭಾರತದ ತಂಜಾವರ್‌ವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತಿರಿಸಿದ್ದರು. ಶಿವಾಜಿ ಮಹಾರಾಜರು ಜೂನ್ 6, 1674 ರಿಂದ ಎಪ್ರಿಲ್ 3, 1680 ರವರೆಗೆ ಆಳ್ವಿಕೆಯನ್ನು ಮಾಡಿದ್ದರು.
ಸಹಬಾಳ್ವೆಯ ಪ್ರತೀಕ
ಶಿವಾಜಿ ಮಹಾರಾಜರು ಹಿಂದೂ ಧರ್ಮಕ್ಕೆ ಸೇರಿದವರು ಹಾಗೂ ಇವರು ಧಾರ್ಮಿಕ ಸಹಿಷ್ಣುಹಿಯಾಗಿದ್ದರು. ಅವರ ಆಡಳಿತದ ಅವಧಿಯಲ್ಲಿ ಹಿಂದೂಗಳು ಮಾತ್ರವಲ್ಲ, ಮುಸ್ಲಿಮರೂ ಕೂಡ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯವನ್ನು ಹೊಂದಿದ್ದರು. ಶಿವಾಜಿ ಹಿಂದುಗಳಿಗೆ ಹೇಗೆ ದೇವಾಲಯವನ್ನು ನಿರ್ಮಿಸಲು ಸಹಕಾರವನ್ನು ನೀಡುತ್ತಿದ್ದರೋ, ಅಷ್ಟೇ ಸಹಕಾರವನ್ನು ಮುಸ್ಲಿಂರಿಗೆ ಮಸೀದಿಯನ್ನು ನಿರ್ಮಿಸಲು ನೀಡುವ ಮೂಲಕ ಸಹಬಾಳ್ವೆಯ ಪ್ರತೀಕವಾಗಿದ್ದರು. ಅವರ ಸಾಮ್ರಾಜ್ಯದಲ್ಲಿ ಹಿಂದೂ ಪಂಡಿತರಿಗಿದ್ದ ಗೌರವವನ್ನೇ ಮುಸ್ಲಿಂ ಸಂತರಿಗೆ ಹಾಗೂ ಫಕೀರ್‌ರಿಗೂ ನೀಡಲಾಗುತ್ತಿತ್ತು. ಶಿವಾಜಿಯ ಸೈನ್ಯದಲ್ಲಿ ಹಿಂದೂ ಸೈನಿಕರಂತೆ ಮುಸ್ಲಿಂ ಸೈನಿಕರು ಇದ್ದರು. ಶಿವಾಜಿ ಹಿಂದೂ ಸಂಸ್ಕೃತಿಯನ್ನು ಉತ್ತೇಜಿಸುತ್ತಿದ್ದರು, ಗೌರವಿಸುತ್ತಿದ್ದರು. ಶಿವಾಜಿ ಆಡಳಿತಾವಧಿಯಲ್ಲಿ ಸಾಂಪ್ರದಾಯಿಕ ಹಿಂದೂ ಮೌಲ್ಯಗಳಿಗೆ ಹಾಗೂ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿತ್ತು.
ಧೈರ್ಯಶಾಲಿ
ಒಂದಾನೊಂದು ಕಾಲದಲ್ಲ, ಶಿವಾಜಿಯ ಸೈನಿಕರು ಗ್ರಾಮದ ಮುಖ್ಯಸ್ಥನನ್ನು ಕರೆತಂದು ಶಿವಾಜಿಯ ಮುಂದೆ ನಿಲ್ಲಿಸಿದರು. ಆ ಮುಖ್ಯಸ್ಥನು ದೊಡ್ಡ ತಲೆ, ದಪ್ಪ ಮೀಸೆ ಹೊಂದಿರುವ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದನು. ಆದರೆ ಈ ವ್ಯಕ್ತಿಯು ವಿಧವೆಯರ ಗೌರವಕ್ಕೆ ಧಕ್ಕೆ ತರುವಂತಹ ಕೆಲಸಮಾಡಿದ್ದಾನೆಂದು ಶಿವಾಜಿಯ ಸೈನಿಕರು ಶಿವಾಜಿಗೆ ತಿಳಿಸುತ್ತಾರೆ. ಈ ಘಟನೆಯ ಸಂದರ್ಭದಲ್ಲಿ ಶಿವಾಜಿ ಮಹಾರಾಜರಿಗೆ ಕೇವಲ 14 ವರ್ಷ ವಯಸ್ಸಾಗಿತ್ತು. ಆದರೂ ಶಿವಾಜಿ ಮಹಾರಾಜನು ಅತ್ಯಂತ ಧೈರ್ಯಶಾಲಿ, ನಿರ್ಭೀತ, ನ್ಯಾಯಸಮ್ಮತನಾಗಿದ್ದ ಮತ್ತು ಮಹಿಳೆಯರ ಬಗ್ಗೆ ವಿಶೇಷ ಗೌರವವನ್ನು ಹೊಂದಿದ್ದರು. ಗ್ರಾಮದ ಮುಖ್ಯಸ್ಥನ ನೀಚ ಕೃತ್ಯವನ್ನು ಕೇಳಿ ಶಿವಾಜಿ ಮಹಾರಾಜನು ಕೋಪಗೊಂಡನು.
ಶಿವಾಜಿ ಮಹಾರಾಜನು ತಕ್ಷಣ ತನ್ನ ನಿರ್ಧಾರವನ್ನು ತಿಳಿಸಿದನು. ಶಿವಾಜಿಯು ತನ್ನ ಸೈನಿಕರ ಬಳಿ ಈ ಮುಖ್ಯಸ್ಥನ ಎರಡೂ ಕೈ, ಕಾಲುಗಳನ್ನು ಕತ್ತರಿಸಲು ಹೇಳಿದನು. ಈತನ ನೀಚ ಕೃತ್ಯಕ್ಕೆ ಈ ಶಿಕ್ಷೆಯಷ್ಟು ಘೋರ ಶಿಕ್ಷೆ ಮತ್ತೊಂದಿಲ್ಲವೆಂದು ಹೇಳುತ್ತಾನೆ. ಛತ್ರಪತಿ ಶಿವಾಜಿ ಮಹಾರಾಜನು ತನ್ನ ಜೀವನದುದ್ದಕ್ಕೂ ಸಾಹಸವನ್ನು ಮಾಡಿದವನು. ಹಾಗೂ ಬಡ ಜನರಿಗೆ, ನಿರ್ಗತಿಕರಿಗೆ ಯಾವಾಗಲೂ ಕೂಡ ಪ್ರೀತಿ , ಗೌರವವನ್ನು ನೀಡಿದವರು ಇವರು.
ರಾಯಗಢ ಕೋಟೆಯಲ್ಲಿ ನಿಧನ
ಶಿವಾಜಿ ಮಾಹಾರಾಜರ ಆಳ್ವಿಕೆ ಸಮಯದಲ್ಲಿ ರಾಯಗಢ ಕೋಟೆಯನ್ನು ಇಡೀ ಮಹಾರಾಷ್ಟ್ರದ ರಾಜಧಾನಿಯನ್ನಾಗಿ ಮಾಡಲಾಯಿತು. ಶಿವಾಜಿ ಮಹಾರಾಜರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಒಂದು ಮಗನ ಹೆಸರು ಸಂಭಾಜಿ ಹಾಗೂ ಇನ್ನೋರ್ವ ಮಗನ ಹೆಸರು ರಾಜರಾಮ್. ಶಿವಾಜಿಯವರ ತಂದೆಯ ಹೆಸರು ಶಹಾಜಿರಾಜೆ ಭೋಸ್ಲೆ ಮತ್ತು ಅವರ ತಾಯಿಯ ಹೆಸರು ಜಿಜಾಬಾಯಿ. ಶಿವಾಜಿ ಮಹಾರಾಜರು ಎಪ್ರಿಲ್3, 1680 ರಂದು ರಾಯಗಢ ಕೋಟೆಯಲ್ಲಿ ನಿಧನರಾದರು.
