ತುಮಕೂರು : ಹಳ್ಳಿಗಳಾಗುತ್ತಿವೆ ಕೋವಿಡ್ ಬಾಧಿತ ಗ್ರಾಮಗಳು!

ತುಮಕೂರು : 

      ಕಳೆದ ವರ್ಷ ಕೊರೊನಾ ಮೊದಲ ಅಲೆ ನಗರ -ಪಟ್ಟಣಗಳಲ್ಲಿ ಹೆಚ್ಚಾಗಿ ವ್ಯಾಪಿಸಿದ್ದರೆ, 2ನೇ ಅಲೆ ನಗರಗಳಿಗಿಂತಲೂ ಹಳ್ಳಿಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿರುವುದು ಶುದ್ಧಪರಿಸರದಿಂದ ಆರೋಗ್ಯಕರವಾಗಿದ್ದ ಹಳ್ಳಿಗಳನ್ನು ಕೊರೊನಾ ಪೀಡಿತ ಗ್ರಾಮಗಳಾಗಿಸುತ್ತಿವೆ.
ಹಳ್ಳಿಯ ಅರ್ಧದಷ್ಟು ಮನೆಗಳಲ್ಲಿ ಕೋವಿಡ್ ಪೀಡಿತರು ಕಂಡುಬರುತ್ತಿದ್ದು, ನಗರವಾಸಿಗಳಿಗಿಂತ ಗ್ರಾಮವಾಸಿಗಳು ಕೊರೊನಾ ಬಗ್ಗೆ ಹೆಚ್ಚು ಭಯಭೀತರಾಗುತ್ತಿದ್ದಾರೆ. ಮೊದಲ ಅಲೆಯಲ್ಲಿ ಕೊರೊನಾಗೆ ಸಿಟಿಗಿಂತ ಹಳ್ಳಿಸೇಫ್ ಎಂದು ಭಾವಿಸಿದ್ದ ನಗರಿಗರು, ಈಗ ನಗರವೂ ಸೇಫ್ ಇಲ್ಲ, ಹಳ್ಳಿಯಲ್ಲೂ ಆರೋಗ್ಯ ರಕ್ಷಣೆ ಇಲ್ಲದಂತಾಗಿದೆ ಎಂದು ವಿಲವಿಲ ಒದ್ಡಾಡುವ ಸ್ಥಿತಿ ನಿರ್ಮಾಣವಾಗಿದೆ.

      ಸದ್ಯ ತುಮಕೂರು ಜಿಲ್ಲೆಯ ನಗರ -ಪಟ್ಟಣಗಳಲ್ಲಿ 1979 ಕೋವಿಡ್ ಪಾಸಿಟಿವ್ ಹೋಂ ಐಸೋಲೇಷನ್ ಪ್ರಕರಣಗಳು ಕಂಡುಬಂದರೆ, ಗ್ರಾಮಾಂತರ ಭಾಗದಲ್ಲಿ 2297 ಪ್ರಕರಣಗಳು( ನಗರಕ್ಕಿಂತ 318 ಪ್ರಕರಣಗಳು ಅಧಿಕ) ಕಂಡುಬಂದಿರುವುದು ಜಿಲ್ಲಾ ಆರೋಗ್ಯ ಇಲಾಖೆ ಅಂಕಿ ಅಂಶಗಳಲ್ಲೇ ಬೆಳಕಿಗೆ ಬಂದಿದೆ.

ಜಿಲ್ಲೆಯಲ್ಲಿ ತುಮಕೂರು ತಾಲೂಕಿನ ಹಳ್ಳಿಗಳಲ್ಲೇ ಅತೀ ಹೆಚ್ಚು ಸೋಂಕಿತರು 460 ಸಂಖ್ಯೆಯಲ್ಲಿ ಪತ್ತೆಯಾಗಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ . ಉಳಿದಂತೆ ಚಿಕ್ಕನಾಯಕನಹಳ್ಳಿ 190, ಗುಬ್ಬಿ 296, ಕೊರಟಗೆರೆ 165, ಕುಣಿಗಲ್ 156, ಮಧುಗಿರಿ 124, ಪಾವಗಡ 228, ಶಿರಾ 335, ತಿಪಟೂರು 206 ಹಾಗೂ ತುರುವೇಕೆರೆಯ ಹಳ್ಳಿಗಳಲ್ಲಿ 169 ಸೋಂಕಿತರು ಹೋಂ ಐಸೋಲೇಷನ್‍ಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಪ್ರಥಮ, ದ್ವಿತೀಯ ಸಂಪರ್ಕಿಗಳನ್ನು ಗುರುತಿಸಿ ಸ್ವಾಬ್ ಟೆಸ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲೂ ಸಾವಿರಾರು ಮಂದಿ ಚಿಕಿತ್ಸೆಗೆ ದಾಖಲು :

      ಇನ್ನೂ ಹೋಂ ಐಸೋಲೇಷನ್‍ನಲ್ಲಿ 2297 ಮಂದಿ ಗ್ರಾಮೀಣ ಸೋಂಕಿತರಿದ್ದರೆ ಸೋಂಕು ತೀವ್ರಗೊಂಡು ತುಮಕೂರು ಜಿಲ್ಲಾ ಕೇಂದ್ರದ ಸರಕಾರಿ, ಖಾಸಗಿ ಆಸ್ಪತ್ರೆ ಹಾಗೂ ಆಯಾ ತಾಲೂಕು ಕೇಂದ್ರದ ಆಸ್ಪತ್ರೆಗಳಲ್ಲೂ ಸುಮಾರು 1500ಕ್ಕೂ ಅಧಿಕ ಮಂದಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಉಲ್ಬಣಗೊಂಡು ನಗರ -ಪಟ್ಟಣದ ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆಯೇ ಅನೇಕರು ಮೃತಪಡುತ್ತಿರುವುದು ಕಂಡುಬಂದಿದೆ. ಇನ್ನೂ ಅನೇಕ ಗ್ರಾಮೀಣರಿಗೆ ವೆಂಟಿಲೇಟರ್, ಆಕ್ಸಿಜನ್ ಬೆಡ್ ಸಿಗದೆ ಜೀವನ್ಮರಣದ ನಡುವೆ ಹೋರಾಡುವ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಏ.22ರಂದು ಸೋಂಕಿನಿಂದ ತೀವ್ರ ಉಸಿರಾಟದ ತೊಂದರೆ ಅನುಭವಿಸಿದ ಹೆಬ್ಬೂರಿನ ಯುವಕರೊಬ್ಬರನ್ನು ಆಂಬ್ಯುಲೆನ್ಸ್‍ನಲ್ಲಿ ತುಮಕೂರು ಜಿಲ್ಲಾಕೇಂದ್ರದ ಹಲವು ಆಸ್ಪತ್ರೆಗಳಿಗೆ ಕರೆತಂದರೂ ಆಕ್ಸಿಜನ್, ವೆಂಟಿಲೇಟರ್ ಬೆಡ್ ಸಿಗದೆ ಕಡೆ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿರುವುದೇ ಹಳ್ಳಿಗಳಲ್ಲಿನ ಕೊರೊನಾ ಕರಾಳತೆಗೆ ಜ್ವಲಂತ ನಿದರ್ಶನವೆನಿಸಿದೆ.

ಪಂಚಾಯ್ತಿ ಟಾಸ್ಕ್‍ಫೋರ್ಸ್ ಮರು ಜಾರಿ:

      ಕಳೆದ ಬಾರಿ ಕೋವಿಡ್ ನಿಯಂತ್ರಣಕ್ಕೆಂದೇ ಪಂಚಾಯಿತಿ ಮಟ್ಟದಲ್ಲಿ ಅಸ್ಥಿತ್ವಕ್ಕೆ ತರಲಾದ ಗ್ರಾಪಂ ಅಧ್ಯಕ್ಷರ ಅಧ್ಯಕ್ಷತೆಯ ಟಾಸ್ಕ್‍ಪೋರ್ಸ್ ಅನ್ನು ಜಿಲ್ಲೆಯಲ್ಲಿ ಮತ್ತೆ ಅಸ್ಥಿತ್ವಕ್ಕೆ ತರಲಾಗಿದೆ. ಈ ಸಮಿತಿಯಲ್ಲಿ ಪಿಡಿಓ, ವಿಎ, ಗ್ರಾಪಂ ಸದಸ್ಯರು, ಅಂಗನವಾಡಿ ಆಶಾ ಕಾರ್ಯಕರ್ತೆಯರಿದ್ದು, ಹಳ್ಳಿಗರು ಹೆಚ್ಚಾಗಿ ಪಟ್ಟಣ, ನಗರ ಪ್ರದೇಶಗಳಿಗೆ ತೆರಳದಂತೆ ತಡೆಯುವುದು, ಸೋಂಕಿತರ ಕಡ್ಡಾಯವಾಗಿ ಹೋಂ ಐಸೋಲೇಷನ್, ಕ್ವಾರಂಟೈನ್ ಪಾಲಿಸುವಂತೆ ನಿಗಾ ವಹಿಸುವುದು, ಸೋಂಕಿತರ ಪ್ರಥಮ ದ್ವಿತೀಯ ಸಂಪರ್ಕಿಗಳಿಗೆ ಕಡ್ಡಾಯ ಸ್ವಾಬ್ ಟೆಸ್ಟ್, ವ್ಯಾಕ್ಸಿನೇಷನ್ ಮಾಡಿಸುವುದು, ಗ್ರಾಮಸ್ವಚ್ಛತೆ ಕಾಪಾಡುವÀ ಜವಾಬ್ದಾರಿ ವಹಿಸಲಾಗಿದೆ. ಇದಕ್ಕಾಗಿ 14, 15ನೇ ಹಣಕಾಸು ಅನುದಾನ, ಸ್ವಚ್ಛಭಾರತ್ ಅನುದಾನವನ್ನು ಸದ್ಬಳಕೆ ಮಾಡಲು ಇತ್ತೀಚೆಗೆ ಪಂಚಾಯ್ತಿ ಅಧ್ಯಕ್ಷರು, ಪಿಡಿಒಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಡಿಸಿ, ಸಿಇಒ ಸೂಚಿಸಿದ್ದಾರೆ.

ಹೋಂ ಐಸೋಲೇಷನ್‍ನಲ್ಲಿರುವ ಸೋಂಕಿತರು (23-04-2021ರಲ್ಲಿದ್ದಂತೆ)

ತಾಲೂಕು               ನಗರ                     ಗ್ರಾಮೀಣ
ಚಿ.ನಾ.ಹಳ್ಳಿ              55                       190
ತಿಪಟೂರು              151                      206
ಶಿರಾ                    147                      335
ಕುಣಿಗಲ್                106                     160
ಪಾವಗಡ                102                     228
ಕೊರಟಗೆರೆ               82                      165
ಗುಬ್ಬಿ                     42                      296
ತುರುವೇಕೆರೆ              21                      169
ತುಮಕೂರು           1151                     460
ಮಧುಗಿರಿ                124                     122

ಪರಿಸ್ಥಿತಿ ಭೀಕರವಾಗುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಲಿ

How Delhi Govt Used Home Isolation Model To Contain Cases During Lockdown -  DTNext.in

      ಹಳ್ಳಿಗಳಲ್ಲಿ ಸದ್ಯ ಶೇ30-45ರಷ್ಟು ಕಂಡುಬಂದಿರುವ ಸೋಂಕಿನ ಪ್ರಮಾಣ ಹೀಗೆ ಹೆಚ್ಚುತ್ತಾ ಶೇ.70-80ರ ಏರಿಕೆಯಾದರೆ ಅದರ ಪರಿಣಾಮ ಹೆಚ್ಚು ಭೀಕರವಾಗುತ್ತದೆ ಎಂಬುವುದರಲ್ಲಿ ಸಂಶಯವಿಲ್ಲ. ಉದ್ಯೋಗ ನಿಮಿತ್ತ ಹಲವು ಗ್ರಾಮೀಣ ಯುವಕರು ಪಟ್ಟಣಕ್ಕೆ ಮತ್ತೆ ವಲಸೆ ಬಂದಿದ್ದು ಹಳ್ಳಿಗಳಲ್ಲೇ ಉಳಿದಿರುವ ವೃದ್ಧ ತಂದೆ ತಾಯಂದಿರುವ ಸೋಂಕಿನ ಭೀತಿಯಲ್ಲಿ ಏನಾದರೂ ಆದರೆ ನಮ್ಮ ಗತಿಯೇನು ಎಂದು ಚಿಂತಿತರಾಗುವಂತಾಗಿದೆ. ಅದರಲ್ಲೂ ಮುಂಗಾರು ಕೃಷಿ ಸಿದ್ಧತೆ ಸಂದರ್ಭದಲ್ಲಿ ಕೊರೊನಾ 2ನೇ ಅಲೆ ವ್ಯಾಪಕವಾಗಿ ಹಳ್ಳಿಗಳಲ್ಲಿ ಹಬ್ಬುತ್ತಿದ್ದು, ಸೋಂಕು ರೈತರಲ್ಲಿ ಹೆಚ್ಚಾದರೆ ಮುಂದಿನ ಆಹಾರೋತ್ಪಾದನೆ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಸರಕಾರ, ಜಿಲ್ಲಾಡಳಿತ ಈ ದಿಸೆಯಲ್ಲಿ ಇನ್ನಾದರೂ ಎಚ್ಚೆತ್ತು ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗದಂತೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 24 ತಾಸು ತೆರೆದಿಡುವ ಜೊತೆಗೆ ಹೋಬಳಿಗೆರೆಡು ಆಂಬ್ಯುಲೆನ್ಸ್‍ಗಳನ್ನು ಮೀಸಲಿಡುವುದು, ಕೊರೊನಾ ಬಗ್ಗೆ ಹೆಚ್ಚು ತಿಳುವಳಿಕೆ ಮೂಡಿಸುವ ಅಗತ್ಯವಿದೆ.

      ಸಾವಿಗೀಡಾದ 15ಮಂದಿಯಲ್ಲಿ 9 ಮಂದಿ ಗ್ರಾಮೀಣರು: ಏ.16 ರಿಂದ 22ರವರೆಗೆ ಜಿಲ್ಲೆಯಲ್ಲಿ 15 ಮಂದಿ ಕೋವಿಡ್ ಪಾಸಿಟಿವ್ ಆಗಿ ಮೃತಪಟ್ಟಿದ್ದು ಇವರಲ್ಲಿ 9 ಮಂದಿ ಗ್ರಾಮೀಣರೇ ಆಗಿರುವುದು ಸಾಯುತ್ತಿರುವವರ ಸಂಖ್ಯೆ ಹಳ್ಳಿಯಲ್ಲಿ ಹೆಚಾಗುತ್ತಿರುವುದಕ್ಕೆ ನಿದರ್ಶನವೆನಿಸಿದೆ. ಏ.22ರಂದು ಸಾವಿಗೀಡಾದ 5 ಮಂದಿಯಲ್ಲಿ ಇಬ್ಬರು ಗ್ರಾಮೀಣರಿದ್ದರೆ, ಏ.20ರಲ್ಲಿ ಸತ್ತ ಇಬ್ಬರು ಗ್ರಾಮೀಣರೇ ಆಗಿದ್ದಾರೆ. ಇನ್ನೂ ಏ.19, 17ರಂದು ಒಟ್ಟು 6 ಮಂದಿ ಸಾವನ್ನಪ್ಪಿದ್ದು ಈ ಪೈಕಿ ಇಬ್ಬರು ಮಾತ್ರ ನಗರದವರು. ಉಳಿದ ನಾಲ್ವರು ಗ್ರಾಮೀಣರೇ ಆಗಿದ್ದರು. ಅಂತೆಯೇ ಏ.16ರಂದು ಸತ್ತ ಇಬ್ಬರ ಪೈಕಿ ಒಬ್ಬರು ನಗರ, ಒಬ್ಬರು ಗ್ರಾಮೀಣ ಪ್ರದೇಶದವರಿದ್ದಾರೆ. ಏ.18 ಹಾಗೂ ಏ.21ರಂದು ಯಾವುದೇ ಸಾವು ವರದಿಯಾಗಿಲ್ಲ ಎಂದು ಆರೋಗ್ಯ ಇಲಾಖೆ ಅಂಕಿ-ಅಂಶಗಳಲ್ಲಿ ಹೇಳಲಾಗಿದೆ.
 
      ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕೋವಿಡ್ ನಿಯಂತ್ರಣ ಟಾಸ್ಕ್‍ಪೋರ್ಸ್ ಅನ್ನು ಮತ್ತೆ ಅಸ್ಥಿತ್ವಕ್ಕೆ ತರಲಾಗಿದ್ದು, ಹಳ್ಳಿಗಳಲ್ಲಿ ಕೋವಿಡ್ ಪೀಡಿತರ ಮೇಲೆ ನಿಗಾ, ಸ್ವಚ್ಛತೆ, ವ್ಯಾಕ್ಸಿನೇಷನ್ ನಿರ್ವಹಣೆಯ ಜವಾಬ್ದಾರಿ ವಹಿಸಲಾಗಿದೆ. ಹಳ್ಳಿಯಿಂದ ನಗರಗಳಿಗೆ ಹೆಚ್ಚು ಹೋಗದಂತೆ ನಿರ್ಬಂಧ ವಿಧಿಸಲಾಗಿದೆ. ಸ್ವಚ್ಛತೆ, ಶುದ್ಧ ಕುಡಿಯುವ ನೀರು ಪೂರೈಕೆಗೆ ಒತ್ತು ನೀಡಲಾಗಿದ್ದು, 14 ಹಾಗೂ 15ನೇ ಹಣಕಾಸು ಅನುದಾನವನ್ನು ಸದ್ಬಳಕೆ ಮಾಡುವಂತೆ ಪಿಡಿಓಗಳಿಗೆ ಸೂಚಿಸಲಾಗಿದೆ.

-ಕೆ.ವಿದ್ಯಾಕುಮಾರಿ, ಜಿಪಂ ಸಿಇಒ.

 

ಎಸ್.ಹರೀಶ್ ಆಚಾರ್ಯ

Recent Articles

spot_img

Related Stories

Share via
Copy link