ಬೆಂಗಳೂರು
ಮಾಜಿ ಶಾಸಕ ವೈ ಎಸ್ ವಿ ದತ್ತ ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ವಾರೆಂಟ್ ಜಾರಿಯಾಗಿದೆ.
ಕಾಂಗ್ರೆಸ್ ನಾಯಕರ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬುಧವಾರ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ. ಚೆಕ್ ಬೌನ್ಸ್ ಪ್ರಕರಣದ ವಿಚಾರಣೆಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಆದೇಶ ಹೊರಡಿಸಲಾಗಿದೆ.
ಮಾಜಿ ಶಾಸಕ ವೈಎಸ್‌ವಿ ದತ್ತ ಅವರ ವಿರುದ್ಧ ಸಿ.ಎಸ್ ಸೋಮೇಗೌಡ, ಎನ್ ನಿತ್ಯಾನಂದ ಎಂಬವರು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದು, ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶೆ ಜೆ.ಪ್ರೀತ್ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.
ದೂರುದಾರ ಎನ್ ನಿತ್ಯಾನಂದ ಹೂಡಿರುವ ಪ್ರಕರಣದಲ್ಲಿ ಸತತ ನಾಲ್ಕನೇ ಬಾರಿಗೆ ನ್ಯಾಯಾಲಯವು ಬಂಧನ ವಾರೆಂಟ್ ಹೊರಡಿಸಿದ್ದು, ಐದು ಬಾರಿ ಜಾಮೀನುರಹಿತ ವಾರೆಂಟ್ ಹೊರಡಿಸಿದೆ. ಸಿ.ಎಸ್. ಸೋಮೇಗೌಡ ಅವರ ಪ್ರಕರಣದಲ್ಲಿ ನ್ಯಾಯಾಲಯವು ಸತತ 10ನೇ ಬಾರಿಗೆ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
ಸದ್ಯ ಜಾಮೀನು ರಹಿತ ವಾರೆಂಟ್ ಹೊರಡಿಸಿ ಮಾರ್ಚ್ 27ಕ್ಕೆ ಕೋರ್ಟ್‌ಗೆ ಹಾಜರುಪಡಿಸುವಂತೆ ಬೆಂಗಳೂರು ಉತ್ತರ ಡಿಸಿಪಿಗೆ ಆದೇಶ ನೀಡಲಾಗಿದೆ. ಪ್ರಕರಣದಲ್ಲಿ ಆರೋಪಿಯಾಗಿರುವ ವೈಎಸ್‌ವಿ ದತ್ತ ವಿರುದ್ಧ 2022ರ ನವೆಂಬರ್‌ನಲ್ಲಿ ಪ್ರಕಾಶ್ ಜಿ ಎಸ್ ಎಂಬವರು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದಾರೆ. ಮೂರು ಪ್ರತ್ಯೇಕ ಪ್ರಕರಣಗಳ ವಿಚಾರಣೆಯನ್ನು ಮಾರ್ಚ್ 27ಕ್ಕೆ ನಿಗದಿಪಡಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ