ಚಿಕ್ಕನಾಯಕನಹಳ್ಳಿ :
ಗ್ರಾಮ ಪಂಚಾಯಿತಿ ಚುನಾವಣೆ ನಾಮಪತ್ರ ಸಲ್ಲಿಸಿದಾಗಿನಿಂದ ಅಭ್ಯರ್ಥಿಗಳು ಜನರಿಗೆ ರಸದೌತಣವನ್ನೇ ನೀಡುತ್ತಿದ್ದಾರೆ. ಹಲವು ಪಂಚಾಯಿತಿಗಳಲ್ಲಿ ಜನರಿಗೆ ಸೌಕರ್ಯಗಳ ಭರವಸೆ ಜೊತೆಗೆ ತಮ್ಮ ಪರವಾಗಿ ನಿಲ್ಲಲು ಅವರಿಗೆ ಉಡುಗೊರೆಗಳನ್ನು ನೀಡುತ್ತಿರುವುದು ಬಹುತೇಕ ಕಡೆ ನಡೆಯುತ್ತಿದೆ.
ಮತದಾನದ ದಿನ ಹತ್ತಿರವಾಗುತ್ತಿರುವುದರಿಂದ ಅಭ್ಯರ್ಥಿಗಳು ಮನೆ ಮನೆ ಭೇಟಿ ನೀಡುತ್ತಿದ್ದಾರೆ, ರಾತ್ರಿ ಬಾಡೂಟ ಸಾಮಾನ್ಯವಾಗಿದೆ. ಇದೇ ರೀತಿ ತಾಲ್ಲೂಕಿನ ಹಲವು ಕಡೆ ಈಗಾಗಲೇ ಹಣದ ಭರಾಟೆಯೂ ನಡೆಯುತ್ತಿದೆ, ಆಗಾಗ್ಗೆ ತಮ್ಮಿಂದೆ ಓಡಾಡುವ ಜನರಿಗೆ ಈಗಾಗಲೇ ಹಣದ ರುಚಿಯೂ ನಡೆಯುತ್ತಿದೆ. ಜೊತೆಗೆ ಕೆಲ ಹಳ್ಳಿಗಳಲ್ಲಿ ಮನೆಮನೆಗೆ ಕೋಳಿಗಳನ್ನು ನೀಡುತ್ತೇವೆ ಎಂಬ ಭರವಸೆ ನೀಡಿರುವ ಬಗ್ಗೆಯೂ ಕೇಳಿ ಬಂದಿದೆ.
ಚಿಹ್ನೆಗೆ ದುಂಬಾಲು :
ಗ್ರಾಮ ಪಂಚಾಯಿತಿಗೆ ಅಭ್ಯರ್ಥಿಗಳು, ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿಯನ್ನು ಗುರುತಿಸಲು ಚಿಹ್ನೆ ಅವಶ್ಯಕ. ಚುನಾವಣಾ ಆಯೋಗ ನೀಡುತ್ತಿರುವ ಕೆಲವೊಂದು ಚಿಹ್ನೆ ಅಪಶಕುನ, ತಮಗಿಷ್ಟವಾದ ಚಿಹ್ನೆ ಪಡೆಯಲೇಬೇಕು ಎಂದು ಅಭ್ಯರ್ಥಿಗಳು ಮೂರು, ನಾಲ್ಕು ಚಿಹ್ನೆ ಗುರುತಿಸಿ ಚುನಾವಣೆ ಶಾಖೆಗೆ ನೀಡಿದ್ದರು, ತಾವಂದುಕೊಂಡ ಚಿಹ್ನೆಯೋ, ಶಾಖೆ ನೀಡಿದ ಚಿಹ್ನೆಯೋ ಸದ್ಯಕ್ಕೆ ಚಿಹ್ನೆ ದೊರಕಿತಲ್ಲ ಎಂದು ಅಭ್ಯರ್ಥಿಗಳು ಪ್ರಿಂಟಿಂಗ್ ಪ್ರೆಸ್ ಕಡೆ ದೌಡಾಯಿಸಿದ್ದು ಕಂಡುಬಂದಿತು.
ಹಲವು ಅಭ್ಯರ್ಥಿಗಳು ತಾವು ನಿರ್ವಹಿಸುವ ಕೆಲಸದ ಗುರುತನ್ನೇ ಚಿಹ್ನೆಯನ್ನಾಗಿ ಪಡೆಯುತ್ತಿದ್ದರಿಂದ ಖುಷಿಯಿಂದ ಪ್ರಿಂಟಿಂಗ್ ಪ್ರೆಸ್ ಕಡೆ ತೆರಳುತ್ತಿದ್ದರು. ಆಟೋ ಓಡಿಸುವವರು ಆಟೋ ರಿಕ್ಷಾ ಚಾಲನೆಯ ಗುರುತು, ಮೈಕ್ ಸೆಟ್ ಕೆಲಸ ಮಾಡುವವರು ಮೈಕ್ ಗುರುತು, ಮರಗೆಲಸ ಮಾಡುವವರು ಗರಗಸ ಹೀಗೆ ಹಲವರು ತಮ್ಮ ಕೆಲಸವನ್ನೇ ಗುರುತನ್ನಾಗಿ ಪಡೆದಿದ್ದಾರೆ.
ಚುನಾವಣೆ ಶಾಖೆ ನೀಡಿರುವ ಚಿಹ್ನೆಗಳಲ್ಲಿ ಕೆಲವೊಂದನ್ನು ಪಡೆಯಲು ಹಿಂದೇಟು ಹಾಕಿತ್ತಿದ್ದಾರೆ. ಆಟೋ, ತೆಂಗಿನ ತೋಟ, ಹೊಲಿಗೆ ಯಂತ್ರ, ಟ್ರಾಕ್ಟರ್ ಚಿಹ್ನೆಗಳತ್ತ ಜನರು ಗಮನಹರಿಸಿದ್ದರು.
ಅಭ್ಯರ್ಥಿಗಳು ಚಿಹ್ನೆಗಳನ್ನು ಶನಿವಾರ ಪಡೆಯುತ್ತಿದ್ದಂತೆ ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ಕಾವು ರಂಗೇರಲಿದೆ, ಸಂಜೆಯಿಂದಲೇ ಮತದಾರರ ಓಲೈಕೆಯತ್ತ ಅಭ್ಯರ್ಥಿಗಳು ಗಮನಹರಿಸುತ್ತಿದ್ದರು.
ಧೂಳತ್ತಿದ್ದ ಮತಪೆಟ್ಟಿಗೆಗಳು :
ಗ್ರಾಮ ಪಂಚಾಯತ್ ಚುನಾವಣೆ ಬ್ಯಾಲೆಟ್ ಪೇಪರ್ ಇರುವುದರಿಂದ ಹಲವು ದಿನಗಳ ಕಾಲ ಧೂಳೆತ್ತಿದ್ದ ಮತಪೆಟ್ಟಿಗೆಗಳನ್ನು ಕೊಡವಿ ಇಡಲಾಗುತ್ತಿದೆ. ತಾಲ್ಲೂಕಿನ 27 ಪಂಚಾಯಿತಿಗಳಲ್ಲಿ 1394 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ