ಬೀಜಿಂಗ್:
ಚೀನಾ ತಂತ್ರಜ್ಞಾನದಲ್ಲಿ ವಿಶ್ವದಲ್ಲೇ ಬಹಳಷ್ಟು ಪ್ರಗತಿಯನ್ನು ಸಾಧಿಸಿದೆ. ಅದರಲ್ಲೂ ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವಾರು ವೈವಿಧ್ಯಮಯ ಆವಿಷ್ಕಾರಗಳನ್ನು ಚೀನಾದ ವಿಜ್ಞಾನಿಗಳು ಮಾಡುತ್ತಲೇ ಇರುತ್ತಾರೆ. ಇದಕ್ಕೊಂದು ಹೊಸ ನಿದರ್ಶನವೆಂಬಂತೆ, ಚೀನಾದ ಸ್ಟಾರ್ಟ್ ಅಪ್‌ಗಳಲ್ಲಿ ಒಂದಾಗಿರುವ ನ್ಯೂರೋಆಕ್ಸೆಸ್ ಇದೀಗ ಎರಡು ಯಶಸ್ವಿ ಪರೀಕ್ಷೆಗಳನ್ನು ನಡೆಸಿರುವುದಾಗಿ ಘೋಷಿಸಿಕೊಂಡಿದೆ.
ಈ ಸಂಸ್ಥೆಯ ಫ್ಲೆಕ್ಸಿಬಲ್ ಬ್ರೈನ್ ಕಂಪ್ಯೂಟರ್ ಇಂಟರ್ ಫೇಸ್ ಯಂತ್ರವು ಮಿದುಳು ಹಾನಿಯಿಂದ ಬಳಲುತ್ತಿದ್ದ ರೋಗಿಯ ಆಲೋಚನೆಗಳನ್ನು ಡಿಕೋಡ್ ಮಾಡುವಲ್ಲಿ ಯಶಸ್ವಿಯಾಗಿದೆ. ಇಷ್ಟು ಮಾತ್ರವಲ್ಲದೇ ರಿಯಲ್ ಟೈಮ್ ನಲ್ಲೇ ಈ ಸಾಧನೆಯನ್ನು ಈ ಯಂತ್ರವು ಮಾಡಿ ತೋರಿಸಿದೆ ಎಂದು ಈ ಸಂಸ್ಥೆಯು ಇದೀಗ ಹೇಳಿಕೊಂಡಿದೆ. ಇದೇ ಸಂದರ್ಭದಲ್ಲಿ ಈ ಯಂತ್ರವು ಚೀನಾ ಭಾಷೆಯಲ್ಲಿರುವ ಭಾಷಣವನ್ನೂ ಸಹ ರಿಯಲ್ ಟೈಂನಲ್ಲಿ ಡಿಕೋಡ್ ಮಾಡುವಲ್ಲಿ ಯಶಸ್ವಿಯಾಗುವ ಮೂಲಕ ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಾಧನೆಯನ್ನು ಮಾಡಿದೆ.
ಕ್ಸಿನ್ ಹುವಾ ವರದಿಗಳ ಪ್ರಕಾರ, ಬಿಸಿಐ ತಂತ್ರಜ್ಞಾನವು ರೋಗಿಗಳಿಗೆ ಈ ಸಾಫ್ಟ್‌ವೇರ್ ಮೂಲಕ ತನ್ನ ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ನೆರವಾಗಲಿದೆ. ಮಾತ್ರವಲ್ಲದೇ ವಸ್ತುಗಳನ್ನು ರೂಪಾಂತರಗೊಳಿಸಲು, ಎಐ ಮಾಡೆಲ್‌ಗಳೊಂದಿಗೆ ಸಂವಹನ ನಡೆಸಲು ಹಾಗೂ ಮಾತಿನ ಮೂಲಕ ಡಿಜಿಟಲ್ ಅವತಾರಗಳನ್ನು ನಿಯಂತ್ರಿಸಲು ಇದರಿಂದ ಸಾಧ್ಯವಿದೆಯಂತೆ.
2024ರ ಆಗಸ್ಟ್‌ನಲ್ಲಿ ಹೌಶಾನ್ ಆಸ್ಪತ್ರೆಯ ನ್ಯರೋಸರ್ಜನ್‌ಗಳು ಫುಡಾನ್ ವಿ.ವಿ.ಯ ಸಹಯೋಗದೊಂದಿಗೆ 256-ಚಾನೆಲ್, ಉನ್ನತ-ಚಿಂತನಾ ಸಾಮರ್ಥ್ಯದ, ಫ್ಲೆಕ್ಸಿಬಲ್ ಬಿಸಿಐ ಯಂತ್ರವನ್ನು 21 ವರ್ಷದ ಮಹಿಳಾ ರೋಗಿಯೊಬ್ಬರಿಗೆ ಅಳವಡಿಸಿ ಈ ಪರೀಕ್ಷೆಯನ್ನು ನಡೆಸಿದ್ದಾರೆ. ಈ ಮಹಿಳೆ ಅಪಸ್ಮಾರ ರೋಗದಿಂದ ಬಳಲುತ್ತಿದ್ದರು. ಶಾಂಘಾಯ್ ಮೂಲದ ನ್ಯೂರೋ ಆಕ್ಸೆಸ್ ಸಂಸ್ಥೆ ಈ ಯಂತ್ರವನ್ನು ಅಭಿವೃದ್ಧಿಪಡಿಸಿದೆ. ರೋಗಿಯ ಮಿದುಳಿನಲ್ಲಿರುವ ಚಾಲನಾ ಪ್ರದೇಶದಲ್ಲಿರುವ ಊತ ಆವೃತ ಪ್ರದೇಶವನ್ನು ಚಿಕಿತ್ಸೆಗೊಳಪಡಿಸಲು ಈ ಯಂತ್ರವನ್ನು ಅಳವಡಿಸಲಾಗಿತ್ತು.
ನ್ಯೂರೋ ಆಕ್ಸೆಸ್ ಹೇಳಿಕೊಂಡಿರುವಂತೆ, ಈ ತಂಡವು ಎಲೆಕ್ಟ್ರೋಕಾರ್ಟಿಕೊಗ್ರಾಂ ಅನ್ನು ರೋಗಿಯ ಮಿದುಳಿನ ಸಿಗ್ನಲ್‌ಗಳ ಉನ್ನತ ಗಾಮಾ ಬ್ಯಾಂಡ್‌ನಿಂದ ಹೊರತೆಗೆದಿದೆ. ಬಳಿಕ ಆ ತಂಡವು, ಈ ಫೀಚರ್‌ಗಳನ್ನು ರಿಯಲ್ ಟೈಂನಲ್ಲಿ ಡಿಕೋಡ್ ಮಾಡಲು ನರ ಜಾಲಕ್ಕೆ ತರಬೇತು ನೀಡಿದ್ದಾರೆ. ಈ ವಿಧಾನವು 60 ಮಿಲಿ ಸೆಕೆಂಡ್ ಗಳೊಳಗೆ ಯಶಸ್ವಿಯಾಗಿದೆ ಮತ್ತು ಮಿದುಳಿನ ಕಾರ್ಯಚಟುವಟಿಕೆಯನ್ನು ನಿಖರವಾಗಿ ಪುನಃಸ್ಥಾಪಿಸುವಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.
ಮಾನವ ನಾಗರಿಕತೆಯಲ್ಲಿ ಭಾಷೆಯನ್ನು ಅತ್ಯುನ್ನತ ಬೆಳವಣಿಗೆಯೆಂದೇ ಪರಿಗಣಿಸಲಾಗುತ್ತಿದೆ. ಇದನ್ನು ಮನುಕುಲದ ಅತೀ ಸಂತುಲಿತ ಗೋಚರ ಕ್ರಿಯೆ ಎಂದೇ ಗುರುತಿಸಲಾಗುತ್ತದೆ. ಮಿದುಳಿನ ಸಿಗ್ನಲ್‌ಗಳಿಂದ ಮಾತನ್ನು ಅರ್ಥ ಮಾಡಿಕೊಳ್ಳುವುದು ಮಿದುಳು ಕಂಪ್ಯೂಟರ್ ಸಂವಹನ ತಂತ್ರಜ್ಞಾನದಲ್ಲಿ ಮಹತ್ವದ ಬೆಳವಣಿಗೆ ಎಂದೇ ಗುರುತಿಸಲಾಗುತ್ತದೆ. 2024ರ ಡಿಸೆಂಬರ್ ತಿಂಗಳಿನಲ್ಲಿ, ಒಂದು ಸಂಯೋಜಿತ ತಂಡವು ದೇಶದ ಪ್ರಪ್ರಥಮ ಉನ್ನತ-ಮಟ್ಟದ, ಫ್ಲೆಕ್ಸಿಬಲ್ ಬಿಸಿಐ ಮೂಲಕ ಚೈನಿಸ್ ಭಾಷೆಯನ್ನು ಯಶಸ್ವಿಯಾಗಿ ಸಂವಹನಗೊಳಿಸಿತು.
6-ಚಾನೆಲ್ ಬ್ರೈನ್-ಕಂಪ್ಯೂಟರ್ ಸಂವಹನವನ್ನು ಸಂಶೋಧಕರು ಅಳವಡಿಸಿದರು. ಇದರ ಮೂಲಕ ರೋಗಿಯೂ ಉತ್ತಮವಾಗಿ ಚೇತರಿಕೆ ಕಂಡರು ಮತ್ತು 71% ಸ್ಪೀಚ್ ಡಿಕೋಡ್ ನಿಖರತೆಯನ್ನು ಕೇವಲ ಐದೇ ದಿನಗಳಲ್ಲಿ ಸಾಧಿಸಿದರು. ಈ ನಿಖರತೆಯು 142 ಚೈನೀಸ್ ಸಿಲಬಸ್ ಗಳ ಸಾಮಾನ್ಯ ಸೆಟ್ ಒಂದನ್ನು ಬಳಸಿ ನಡೆಸಲಾಗಿತ್ತು. ಇದರಲ್ಲಿ ಒಂದು ಪದವನ್ನು 100 ಮಿಲಿ ಸೆಕೆಂಡ್‌ಗಿಂತಲೂ ಕಡಿಮೆ ಅವಧಿಯಲ್ಲಿ ಡಿಕೋಡ್ ಮಾಡಲು ಸಾಧ್ಯವಾಗಿತ್ತು.
ಒಟ್ಟಿನಲ್ಲಿ ಚೀನಾ ತಂತ್ರಜ್ಞರ ಈ ಹೊಸ ಸಾಧನೆ ಭವಿಷ್ಯದಲ್ಲಿ ಮಾನವ ಮಿದುಳು ಮತ್ತು ಕಂಪ್ಯೂಟರ್ ಸಂವಹನ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟುಹಾಕಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.