ಟ್ರಂಪ್‌ ಗೆ ಸೆಡ್ಡು ಹೊಡೆದ ಚೀನಾ…!

ಬೀಜಿಂಗ್:

     ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ಹೆಚ್ಚಳ ಕ್ರಮದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಉಂಟಾಗಿದ್ದು, ಇದರ ಬೆನ್ನಲ್ಲೇ ಇದೀಗ ಚೀನಾ ಕೂಡ ಅಮೆರಿಕಕ್ಕೆ ಸಡ್ಡು ಹೊಡೆದು ನಿಂತಿದೆ.ವಿದೇಶ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ನಿರ್ಧಾರಕ್ಕೆ ಚೀನಾ ಸರ್ಕಾರ ಕೂಡ ತಿರುಗೇಟು ನೀಡಿದ್ದು, ಅಮೆರಿಕ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ.34ಕ್ಕೆ ಏರಿಕೆ ಮಾಡಿದೆ.

    ಆ ಮೂಲಕ ಚೀನಾ ಅಮೆರಿಕದ ಬಳಿಕೆ ತೆರಿಗೆ ಹೆಚ್ಚಳ ಮಾಡಿದ ಮೊದಲ ಪ್ರಮುಖ ದೇಶವಾಗಿದೆ. ಇನ್ನು ಅಮೆರಿಕ ಮತ್ತು ಚೀನಾ ದೇಶಗಳ ತೆರಿಗೆ ಏರಿಕೆಯು ಜಾಗತಿಕ ವ್ಯಾಪಾರ ಯುದ್ಧವು ಮಾರುಕಟ್ಟೆಗಳನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ.ಈಗಾಗಲೇ ಅಂದರೆ ಟ್ರಂಪ್ ಹೊಸ ತೆರಿಗೆ ಘೋಷಣೆ ಬೆನ್ನಲ್ಲೇ ಜಗತ್ತಿನಾದ್ಯಂತ ಷೇರುಮಾರುಕಟ್ಟೆಗಳು ತೀವ್ರವಾಗಿ ಕುಸಿಯ ತೊಡಗಿದ್ದು, ಇದೀಗ ಚೀನಾ ಕೂಡ ಹೊಸ ಸುಂಕ ಘೋಷಣೆ ಮೂಲಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.

   ಚೀನಾ ಬೆನ್ನಲ್ಲೇ ಇದೀಗ ಯೂರೋಪಿಯನ್ ಒಕ್ಕೂಟ ಕೂಡ ತನ್ನ ತೆರಿಗೆ ಪರಿಷ್ಕರಣೆ ಮಾಡುವ ಕುರಿತು ಗಂಭೀರ ಚಿಂತನೆಯಲ್ಲಿದೆ. ಅಂತೆಯೇ ಇತರೆ ದೇಶಗಳೂ ಕೂಡ ಸಂಭಾವ್ಯ ಪ್ರತಿಕ್ರಿಯೆಗಳಲ್ಲಿ ಪ್ರತೀಕಾರದ ಸುಂಕ ಏರಿಕೆ ಕುರಿತು ಚಿಂತನೆಯಲ್ಲಿ ತೊಡಗಿದ್ದು, ಇದು ಆರ್ಥಿಕ ಹಿಂಜರಿತದ ಭಯವನ್ನು ಹೆಚ್ಚಿಸಿದೆ.

    ಅಮೆರಿಕದ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಒಂದಾದ ಚೀನಾ, ಏಪ್ರಿಲ್ 10 ರಿಂದ ಎಲ್ಲಾ ಅಮೇರಿಕನ್ ಆಮದುಗಳ ಮೇಲೆ 34 ಪ್ರತಿಶತ ಸುಂಕಗಳು ಜಾರಿಗೆ ಬರಲಿವೆ ಎಂದು ಘೋಷಿಸಿತು ಮತ್ತು ಅಲ್ಲದೆ ಅಮೆರಿಕದ ಸುಂ ಏರಿಕೆಗಳ ಕುರಿತು ವಿಶ್ವ ವ್ಯಾಪಾರ ಸಂಸ್ಥೆ  ನಲ್ಲಿ ಮೊಕದ್ದಮೆ ಹೂಡುವುದಾಗಿಯೂ ಹೇಳಿತು. ಮಾತ್ರವಲ್ಲದೇ ವೈದ್ಯಕೀಯ ತಂತ್ರಜ್ಞಾನ ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್‌ಗಳಲ್ಲಿ ಬಳಸಲಾಗುವ ಹಲವಾರು ಅಪರೂಪದ ಅಂಶಗಳ ಮೇಲೆ ರಫ್ತು ನಿಯಂತ್ರಣಗಳನ್ನು ವಿಧಿಸುವುದಾಗಿಯೂ ಚೀನಾ ಹೇಳಿದೆ.

   ಗುರುವಾರ ನಡೆದ ಷೇರು ಮಾರುಕಟ್ಟೆ ತೀವ್ರ ಕುಸಿತದ ನಂತರ ಶುಕ್ರವಾರವೂ ಕೂಡ ಏಷ್ಯಾ ಮತ್ತು ಯುರೋಪಿಯನ್ ಷೇರು ಮಾರುಕಟ್ಟೆಗಳು ತಮ್ಮ ನಷ್ಟವನ್ನು ಹೆಚ್ಚಿಸಿಕೊಂಡವು, ಇದು ನ್ಯೂಯಾರ್ಕ್‌ನ ವಿಶಾಲ-ಆಧಾರಿತ S&P 500 ಸೂಚ್ಯಂಕವನ್ನು ಶೇಕಡಾ 4.8 ರಷ್ಟು ಇಳಿಸಿತು. ಇದು 2020 ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ನಂತರದ ಅತಿದೊಡ್ಡ ಕುಸಿತವಾಗಿದೆ.

   ಅಂತೆಯೇ ಅತ್ತ ಯುರೋಪ್‌ನಲ್ಲಿ, ಶುಕ್ರವಾರ ಮಧ್ಯಾಹ್ನದ ನಂತರ ಫ್ರಾಂಕ್‌ಫರ್ಟ್ ಐದು ಪ್ರತಿಶತದಷ್ಟು ಕುಸಿದರೆ, ಪ್ಯಾರಿಸ್ ನಾಲ್ಕು ಪ್ರತಿಶತಕ್ಕಿಂತ ಹೆಚ್ಚು ಕುಸಿದಿದೆ. ಲಂಡನ್ ಮಾರುಕಟ್ಟೆ ಕೂಡ ಸುಮಾರು ಶೇಕಡಾ 3.8 ರಷ್ಟು ಕುಸಿದಿದೆ. ಟೋಕಿಯೊದ ನಿಕ್ಕಿ ಸೂಚ್ಯಂಕವು ಶೇಕಡಾ 2.8 ರಷ್ಟು ಕುಸಿದಿದೆ.