ನವದೆಹಲಿ:
ಇತ್ತೀಚೆಗಷ್ಟೇ ಹುಟ್ಟುಹಬ್ಬದ ದಿನವೇ ಕೇಕ್ ತಿಂದು ಪಂಜಾಬ್ನ 10 ವರ್ಷದ ಬಾಲಕಿ ಮಾನ್ವಿ ಸಾವನ್ನಪ್ಪಿದ್ದು ದೊಡ್ಡ ಸುದ್ದಿಯಾಗಿತ್ತು. ಆನ್‌ಲೈನ್‌ನಲ್ಲಿ ತರಿಸಿದ್ದ ಕೇಕ್ ತಿಂದು ಈ ದುರಂತ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಜೊಮ್ಯಾಟೋ ಕೇಕ್ ಶಾಪ್ ಅನ್ನು ತನ್ನ ಆಯಪ್ನಿಂದ ಹೊರ ಹಾಕುವ ಮೂಲಕ ಬಾಲಕಿಯ ಸಾವಿಗೆ ಸಂತಾಪ ಸೂಚಿಸಿತ್ತು.
ಬಾಲಕಿ ಮೃತಪಟ್ಟ ಬಳಿಕ ಕೇಕ್‌ನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು, ಹೆಚ್ಚಿನ ಪ್ರಮಾಣದ ಸ್ಯಾಕ್ರರಿನ್, ಸಿಹಿ ರುಚಿಯ ಸಿಂಥೆಟಿಕ್ ಸಂಯುಕ್ತವನ್ನು ಬಳಸಿದ್ದರಿಂದಲೇ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ, ಡಿಎಚ್‌ಒ ಡಾ ವಿಜಯ್ ಜಿಂದಾಲ್ ಎನ್‌ಡಿಟಿವಿಗೆ ತಿಳಿಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಸ್ಯಾಕ್ರರಿನ್ ಅನ್ನು ಆಹಾರ ಮತ್ತು ಪಾನೀಯಗಳಲ್ಲಿ ಬಳಸಿದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಲು ಕಾರಣವಾಗಬಹುದು ಎಂದು ಅವರು ತಿಳಿಸಿದ್ದಾರೆ.
ಸದ್ಯದಲ್ಲೇ ಕೇಕ್ ಕನ್ಹಾ ಬೇಕರಿ ವಿರುದ್ಧ ಕ್ರಮ ಜರುಗಿಸಿ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೇಕರಿ ಮಾಲೀಕರ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದೆ.
ಮಾರ್ಚ್ 24 ರಂದು ಹುಡುಗಿಯ ಜನ್ಮದಿನದಂದು ಪಟಿಯಾಲಾದ ಬೇಕರಿಯಿಂದ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಕೇಕ್ ತರಿಸಲಾಗಿತ್ತು. ಇಡೀ ಕುಟುಂಬ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿತ್ತು. ಆದರೆ ಕೆಲ ಹೊತ್ತಿನಲ್ಲೇಚಾಕೊಲೇಟ್ ಕೇಕ್ ತಿಂದ ಇಡೀ ಕುಟುಂಬ ಅಸ್ವಸ್ಥಗೊಂಡಿತು.
ಕೇಕ್ ಕತ್ತರಿಸಿದ ಕೆಲವೇ ಗಂಟೆಗಳ ನಂತ ಬಾಲಕಿಯ ಕಿರಿಯ ಸಹೋದರಿ ಸೇರಿದಂತೆ ಇಡೀ ಕುಟುಂಬವು ಅನಾರೋಗ್ಯಕ್ಕೆ ಒಳಗಾಯಿತು. ಹುಡುಗಿಯರು ವಾಂತಿ ಮಾಡಲು ಪ್ರಾರಂಭಿಸಿದರು. ಮಾನ್ವಿ ಬಾಯಿಯಲ್ಲಿ ಒಣಗುವ ಅನುಭವವಾಗಿತ್ತು ಎಂದು ಬಾಲಕಿಯ ಅಜ್ಜ ತಿಳಿಸಿದ್ದರು.
ಮಾನ್ವಿ ನಿತ್ರಾಣಗೊಂಡಾಗ ಮನೆಯವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಆಕೆಗೆ ಆಮ್ಲಜನಕವನ್ನು ಹಾಕಲಾಯಿತು, ಆದರೆ ಕೆಲವೇ ನಿಮಿಷಗಳಲ್ಲಿ ಮಾನ್ವಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದರು. ಕೇಕ್ ಕನ್ಹಾನಿಂದ ಆರ್ಡರ್ ಮಾಡಿದ್ದ ಚಾಕೊಲೇಟ್ ಕೇಕ್ ನಲ್ಲಿ ವಿಷಕಾರಿ ಅಂಶವಿತ್ತು ಎಂದು ಕುಟುಂಬದವರು ಆರೋಪಿಸಿದ್ದರು. ಅದು ನಿಜವೆಂದು ತನಿಖೆಯಿಂದ ತಿಳಿದು ಬಂದಿದೆ.