ಬೆಂಗಳೂರು:
ಆರ್ಸಿಬಿ ತಂಡದ ಐಪಿಎಲ್ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಕೇಸ್ ಕುರಿತು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ. ಐಪಿಎಸ್ ಅಧಿಕಾರಿಗಳ ಅಮಾನತ್ತಿಗೆ ಕಾರಣ ಸೇರಿದಂತೆ ಅವಘಡದ ಸಂಪೂರ್ಣ ವಿವರಣೆ ಕೂಡ ವರದಿಯಲ್ಲಿದೆ. ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಕಾಲ್ತುಳಿತಕ್ಕೆ ಮೂವರು ಐಪಿಎಸ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಉಲ್ಲೇಖಿಸಲಾಗಿದೆ.
ಮೂವರು ಐಪಿಎಸ್ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸರ್ಕಾರ ವರದಿ ನೀಡಿದೆ. ಇದೇ ಕಾರಣಕ್ಕೆ ಮೂವರು ಐಪಿಎಸ್ ಅಧಿಕಾರಿಗಳ ಅಮಾನತ್ತು ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಆಡಳಿತ ಸುಧಾರಣ ಇಲಾಖೆ ಮೂಲಕ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಿದ್ದು, ಕಾಲ್ತುಳಿತದಲ್ಲಿ 11 ಮಂದಿಯ ಸಾವಿಗೆ ಪೊಲೀಸ್ ಭದ್ರತಾ ವೈಪಲ್ಯ ಕಾರಣವಾಗಿದೆ. ಭದ್ರತೆ ಜೊತೆ ಅಧಿಕಾರಿಗಳ ಮಧ್ಯೆ ಸಂವಹನದ ಕೊರತೆ ಎದ್ದು ಕಂಡಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದೇ ಕಾರಣಕ್ಕೆ ಅಧಿಕಾರಗಳ ಅಮಾನತು ಮಾಡಲಾಗಿದ್ದು, ನಗರ ಪೊಲೀಸ್ ಆಯುಕ್ತ ದಯಾನಂದ್ ಸೇರಿ ಮೂವರು ಐಪಿಎಸ್ ಗಳ ಅಮಾನತು ಮಾಡಲಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಬಳಿಕ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದರೆ, 50ಕ್ಕೂ ಹೆಚ್ಚು ಗಾಯಗೊಂಡಿದ್ದರು. ಇದು ಬೆಂಗಳೂರು ಈವರೆಗೆ ಕಂಡು ಕೇಳಿರದ ದುರಂತವಾಗಿತ್ತು. ಸಾವು-ನೋವಿಗೆ ಸರಕಾರದ ವೈಫಲ್ಯ ಕಾರಣ ಎಂದು ಜನ ಟೀಕಿಸಿದ್ದರು. ಪ್ರಕರಣದಲ್ಲಿ ಆಡಳಿತದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಈ ಕೇಸ್ನಲ್ಲಿ ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಲಾಗಿದೆ ಎಂಬುದು ಐಎಎಸ್ ಮತ್ತು ಐಪಿಎಸ್ ವಲಯ ಕೂಡ ಅಸಮಾಧಾನಗೊಂಡಿದೆ.








