ಮುಂಬೈ:
ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ, ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರಿಗೆ ಬಾಂಬೆ ಹೈಕೋರ್ಟ್ ಸೋಮವಾರ ಖಾಯಂ ಜಾಮೀನು ಮಂಜೂರು ಮಾಡಿದೆ.
ಈ ವರ್ಷದ ಮೇನಲ್ಲಿ ನ್ಯಾಯಮೂರ್ತಿ ಎನ್‌ಜೆ ಜಮಾದಾರ್ ಅವರ ಏಕ ಸದಸ್ಯ ಪೀಠ ವೈದ್ಯಕೀಯ ಕಾರಣಗಳಿಗಾಗಿ ಗೋಯಲ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ನ್ಯಾಯಮೂರ್ತಿ ಜಮಾದಾರ್ ಅವರು ಇಂದು ಮಧ್ಯಂತರ ಆದೇಶವನ್ನು ಖಾಯಂಗೊಳಿಸಿದ್ದಾರೆ.ಗೋಯಲ್ (75) ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲು ಜಾಮೀನು ಕೋರಿದ್ದರು. ಜಾರಿ ನಿರ್ದೇಶನಾಲಯ (ಇಡಿ) ಅವರ ಮನವಿಯನ್ನು ವಿರೋಧಿಸಿತ್ತು ಮತ್ತು ಕಸ್ಟಡಿಯಲ್ಲಿರುವಾಗ ಅವರ ಆಯ್ಕೆಯ ಆಸ್ಪತ್ರೆಗೆ ದಾಖಲಿಸಬಹುದು ಮತ್ತು ಚಿಕಿತ್ಸೆ ಪಡೆಯಬಹುದು ಎಂದು ಹೇಳಿತ್ತು. ಆದರೆ ಮೇ ತಿಂಗಳಲ್ಲಿ, ಹೈಕೋರ್ಟ್ ಎರಡು ತಿಂಗಳ ಅವಧಿಗೆ ಗೋಯಲ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ನಂತರ ಅದನ್ನು ನಾಲ್ಕು ವಾರಗಳವರೆಗೆ ಮತ್ತು ನಂತರ ಮತ್ತೆ ಎರಡು ತಿಂಗಳವರೆಗೆ ವಿಸ್ತರಿಸಲಾಯಿತು.
ಕೆನರಾ ಬ್ಯಾಂಕ್‌ನಿಂದ ಜೆಟ್ ಏರ್‌ವೇಸ್‌ಗೆ 538.62 ಕೋಟಿ ರೂ. ಸಾಲ ಪಡೆದು ವಂಚಿಸಿದ್ದಾರೆ ಮತ್ತು ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಇಡಿ ಸೆಪ್ಟೆಂಬರ್ 2023 ರಲ್ಲಿ ಗೋಯಲ್ ಅವರನ್ನು ಬಂಧಿಸಿತ್ತು.