ಪಾಟ್ನಾ:
ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಸ್ಕೋರ್ ಮಾಡಿದ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ಬಿಹಾರದಲ್ಲಿ ಹೊಸ “ದಲಿತ ಐಕಾನ್” ಆಗಿ ಹೊರ ಹೊಮ್ಮಿದ್ದಾರೆ. ಈ ಮೂಲಕ ಅವರ ತಂದೆಯ ಪರಂಪರೆಯ ವಾರಸುದಾರರಾಗಿದ್ದಾರೆ.
ಚಿರಾಗ್ ಪಾಸ್ವಾನ್ ಅವರು ಹಾಜಿಪುರ(SC) ನಿಂದ ಗೆಲುವು ಸಾಧಿಸಿದ್ದಾರೆ. ಅಲ್ಲದೆ ಅವರ ಪಕ್ಷ ಸ್ಪರ್ಧಿಸಿದ ಇತರ ನಾಲ್ಕು ಸ್ಥಾನಗಳಲ್ಲೂ ಭರ್ಜರಿ ಗೆಲುವು ಸಾಧಿಸಿದೆ. ಸ್ಪರ್ಧಿಸಿದ್ದ ಐದು ಕ್ಷೇತ್ರಗಳಲ್ಲೂ ಚಿರಾಗ್ ಪಾಸ್ವಾನ್ ಪಕ್ಷ ಗೆದ್ದಿದೆ.
2020 ರಲ್ಲಿ ನಿಧನರಾದ ಚಿರಾಗ್ ಅವರ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರು ಎಂಟು ಬಾರಿ ಹಾಜಿಪುರವನ್ನು ಪ್ರತಿನಿಧಿಸಿದ್ದರು ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದರು.
ಚಿರಾಗ್ ಅವರು ಹಾಜಿಪುರದಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)ದ ಶಿವಚಂದ್ರ ರಾಮ್ ಅವರನ್ನು 1.70 ಲಕ್ಷ ಮತಗಳಿಂದ ಸೋಲಿಸಿದ್ದಾರೆ. ಪಾಸ್ವಾನ್ 6.14 ಲಕ್ಷ ಮತಗಳನ್ನು ಪಡೆದರೆ, ರಾಮ್ ಅವರು 4.44 ಲಕ್ಷ ಮತಗಳನ್ನು ಪಡೆದಿದ್ದಾರೆ.
2019 ರಲ್ಲಿ, ಹಾಜಿಪುರ್ ಸ್ಥಾನವು ಅವರ ಚಿಕ್ಕಪ್ಪ ಪಶುಪತಿ ಕುಮಾರ್ ಪರಸ್ ಅವರಿಗೆ ಬಿಟ್ಟುಕೊಟ್ಟಿದ್ದರು. ಅವರು ರಾಮ್ ವಿಲಾಸ್ ಸ್ಥಾಪಿಸಿದ ಪಕ್ಷವನ್ನು ತೊರೆದು 2021ರಲ್ಲಿ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ ಎಂಬ ಹೊಸ ಪಕ್ಷವನ್ನು ಕಟ್ಟಿದರು. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಒಟ್ಟು 40 ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಜೆಡಿಯು ತಲಾ 12 ಸ್ಥಾನಗಳನ್ನು ಗೆದ್ದುಕೊಂಡಿವೆ. ಕೇಸರಿ ಪಕ್ಷದ ಮತ ಹಂಚಿಕೆಯು ಶೇ. 20% ಕ್ಕಿಂತ ಸ್ವಲ್ಪ ಹೆಚ್ಚಿದ್ದರೆ, ನಿತೀಶ್ ಅವರ ಪಕ್ಷವು ಒಟ್ಟು ಮತಗಳಲ್ಲಿ ಶೇ. 18.52 ರಷ್ಟು ಮತ ಗಳಿಸಿದೆ.
“ನಾವು ಶೇ. 100 ರಷ್ಟು ಸ್ಟ್ರೈಕ್ ರೇಟ್ ಅನ್ನು ಇಟ್ಟುಕೊಂಡಿದ್ದೇವೆ. 2019 ರಲ್ಲಿ, ನಾವು ಸ್ಪರ್ಧಿಸಿದ ಎಲ್ಲಾ ಆರು ಸ್ಥಾನಗಳನ್ನು ಗೆದ್ದಿದ್ದೇವೆ ಮತ್ತು 2024 ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸೀಟು ಹಂಚಿಕೆ ಸೂತ್ರದಡಿಯಲ್ಲಿ ನಮ್ಮ ಪಕ್ಷಕ್ಕೆ ನಿಗದಿಪಡಿಸಿದ ಎಲ್ಲಾ ಐದು ಸ್ಥಾನಗಳನ್ನು ನಾವು ಗೆದ್ದಿದ್ದೇವೆ. “ಚಿರಾಗ್ ಪಾಸ್ವಾನ್ ಅವರು ಬಿಹಾರದ ದಲಿತ ಐಕಾನ್” ಎಂದು ಎಲ್‌ಜೆಪಿ(ಆರ್‌ವಿ) ರಾಜ್ಯ ಅಧ್ಯಕ್ಷ ರಾಜು ತಿವಾರಿ ಅವರು ಹೇಳಿದ್ದಾರೆ.