ಕೆಐಎಡಿಬಿ ಬುಹುಕೋಟಿ ಹಗರಣ :ಸಿಐಡಿಯಿಂದ ಏಜೆಂಟ್‌ ಬಂಧನ

ಹುಬ್ಬಳ್ಳಿ

      ಧಾರವಾಡದ ಕೆಐಎಡಿಬಿಯಲ್ಲಿ ನಡೆದಿದ್ದ ಬಹುಕೋಟಿ ಹಗರಣದ ತನಿಖೆ ಸಾಕಷ್ಟು ಚುರುಕು ಪಡೆದುಕೊಂಡಿದೆ. ರೈತರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಕೋಟಿಗಟ್ಟಲೇ ಹಣವನ್ನು ನುಂಗಿ ಹಾಕಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು ಕೆಐಎಡಿಬಿಯಲ್ಲಿ ಏಜೆಂಟ್ ಆಗಿದ್ದ ಅಷ್ಪಾಕ್ ಎಂಬುವವನನ್ನು ಬಂಧಿಸಿದ್ದಾರೆ.

      ಅಷ್ಫಾಕ್ ಸೇರಿದಂತೆ ಇಲ್ಲಿಯವರೆಗೂ ಎಂಟು ‌ಜನರನ್ನು ಬಂಧಿಸಿದ ಸಿಐಡಿ ಅಧಿಕಾರಿಗಳು, ರೈತರ ಹೆಸರಿನಲ್ಲಿ ಕೋಟಿಗಟ್ಟಲೇ ಹಣ ನುಂಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದ ಭೂಪರನ್ನು ಮಟ್ಟ ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ.

     ಇನ್ನು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸುಮಾರು 20ಕ್ಕೂ ಹೆಚ್ಚು ರೈತರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ಸುಮಾರು 22 ಕೋಟಿ ಲಪಟಾಯಿಸಿದ್ದರು. ನಕಲಿ ದಾಖಲೆ ಸೃಷ್ಟಿಸಿ ಒಂದೇ ಭೂಮಿಗೆ ಎರಡು ಬಾರಿ ಪರಿಹಾರ ಪಡೆದಿದ್ದರು. ಈ ಬಗ್ಗೆ ರೈತರು ಹೋರಾಟ ನಡೆಸಿದ್ದರು. ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು.

    ಹಲವು ದಿನಗಳಿಂದ ಧಾರವಾಡದಲ್ಲಿಯೇ ಬೀಡು ಬಿಟ್ಟಿರುವ ಸಿಐಡಿ ಅಧಿಕಾರಿಗಳ ತಂಡ 14 ಜನರನ್ನು ವಿಚಾರಣೆಗೆ ಒಳಪಡಿಸಿತ್ತು. ಈ ಘಟನೆ ನಡೆದ ಬಳಿಕ ಕೆಲವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲು ಸಹ ಏರಿದ್ದರು. ಅರ್ಜಿದಾರರಿಗೆ ಯಾವುದೇ ಕಾರಣಕ್ಕೂ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು.

    ಅಲ್ಲದೆ, ತಕರಾರು ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಇದನ್ನು ಮನ್ನಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿದ್ದಾರೆ. ಹೀಗಾಗಿ, ಇದೀಗ ಒಬ್ಬೊಬ್ಬರನ್ನೆ ಸಿಐಡಿ‌ ಅಧಿಕಾರಿಗಳು ಕಂಬಿ ಹಿಂದೆ ಕಳುಹಿಸುತ್ತಿದ್ದಾರೆ. ಒಟ್ಟಿನಲ್ಲಿ ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಿರುವ ಕೈಗಳಿವೆ ಕೋಳ ತೊಡಿಸುವ ಕಾರ್ಯಕ್ಕೆ ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಅದೆಷ್ಟು ಕಾಣದ ಕೈಗಳು ಆಟ ಆಡಿವೆ ಎನ್ನುವಂತಹ ಮಾಹಿತಿ ಸಿಐಡಿ ತನಿಖೆಯಿಂದಲೇ ಬಯಲಿಗೆ ಬರಬೇಕಿದೆ. ಅದು ಯಾರೇ ಇದ್ದರೂ ಅವರಿಗೆ ತಕ್ಕ ಶಿಕ್ಷೆ ಆಗಬೇಕು. ರೈತರಿಗೆ ನ್ಯಾಯ ಸಿಗಬೇಕು ಎಂಬುವುದು ಪ್ರಜ್ಞಾವಂತ ನಾಗರಿಕರ ಒತ್ತಾಸೆ ಆಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap