ಬೆಂಗಳೂರು:
ಚಿತ್ರಮಂದಿರಗಳಲ್ಲಿ ಶೇ. 100 ಆಸನ ಭರ್ತಿಗೆ ಅವಕಾಶ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ಪರಿಶೀಲನೆ ಸಭೆ ನಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಡಿಸೆಂಬರ್ ಕೊನೆ ವಾರದಲ್ಲಿ ಒಮಿಕ್ರಾನ್ ವೈರಾಣು ಹರಡುವಿಕೆ ಹೆಚ್ಚಾದ ಬಳಿಕ ಕೆಲ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಯಿತು. ಕೋವಿಡ್ ಸ್ಥಿತಿಗತಿ, ಆಸ್ಪತ್ರೆ ದಾಖಲಾತಿ ಅವಲೋಕಿಸಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿತ್ತು. ಜನವರಿ 15 ರಿಂದಲೆ ಈ ಮಾರ್ಗಸೂಚಿಯಲ್ಲಿ ಕೆಲ ರಿಯಾಯಿತಿಗಳನ್ನು ನೀಡಲು ಆರಂಭಿಸಲಾಗಿತ್ತು.
ಚಿತ್ರಮಂದಿರ, ಜಿಮ್, ಯೋಗ ಕೇಂದ್ರ, ಸ್ವಿಮ್ಮಿಂಗ್ ಪೂಲ್ ನಲ್ಲಿ ಶೇ. 50 ರಷ್ಟು ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ. ಈ ನಿಯಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.
ಜನವರಿಯಲ್ಲಿ ಆಸ್ಪತ್ರೆಗಳಲ್ಲಿ ಶೇ. 5-6 ಆಸ್ಪತ್ರೆ ದಾಖಲಾತಿ ಇತ್ತು. ಈಗ ಇದು ಶೇ. 2 ಕ್ಕೆ ಇಳಿಕೆಯಾಗಿದೆ, ಎಂಬ ಅಂಶ ಗಮನಿಸಲಾಗಿದೆ. ಈ ನಿಯಮ ಹೇರಿದ್ದರಿಂದ ಚಿತ್ರಮಂದಿರಗಳ ಮಾಲೀಕರು, ನಿರ್ಮಾಪಕರು ಹಾಗೂ ಈ ಉದ್ಯಮದಲ್ಲಿರುವವರಿಗೆ ನಷ್ಟವಾಗಿದೆ. ಚಿತ್ರರಂಗದ ಅಭಿಮಾನಿಗಳು, ಉದ್ಯಮದಲ್ಲಿ ತೊಡಗಿಸಿಕೊಂಡವರ ನಿರೀಕ್ಷೆಯನ್ನು ಗಮನದಲ್ಲಿರಿಸಿ ಈ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ ಎಂದು ಹೇಳಿದರು.
ಇದೇ ರೀತಿ ಜಿಮ್ ಮತ್ತು ಈಜುಕೊಳಗಳಲ್ಲೂ ಶೇ.100 ರಷ್ಟು ಬಳಕೆಗೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಚಿತ್ರ ವೀಕ್ಷಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವೀಕ್ಷಿಸುವಾಗ ಒಳಗೆ ಆಹಾರ ಸೇವಿಸಲು ಅವಕಾಶ ನೀಡಬಾರದು ಎಂದು ಸೂಚಿಸಲಾಗುವುದು.
ಈ ನಿಯಮಗಳ ಕಟ್ಟುನಿಟ್ಟಿನ ಪಾಲನೆಗಾಗಿ ಅಧಿಕಾರಿಗಳು ಯಾವುದೇ ವೇಳೆಯಲ್ಲಿ ಪರಿಶೀಲನೆ ಮಾಡುತ್ತಾರೆ. ಈ ನಿಯಮಗಳನ್ನು ಪಾಲಿಸದಿದ್ದರೆ ಚಿತ್ರಮಂದಿರಗಳ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಯಾವುದೇ ವ್ಯಕ್ತಿ ಈ ಸ್ಥಳಗಳಿಗೆ ಪ್ರವೇಶಿಸುವ ಮುನ್ನ ಕೋವಿಡ್‍ನ ಎರಡೂ ಡೋಸ್ ಲಸಿಕೆ ಪಡೆದಿರಬೇಕು. ಅಂತಹವರಿಗೆ ಮಾತ್ರ ಅವಕಾಶ ನೀಡಬೇಕೆಂದು ಸೂಚಿಸಲಾಗುತ್ತದೆ. ಈ ಕುರಿತ ಮಾರ್ಗಸೂಚಿಯನ್ನು ಪ್ರಕಟಿಸಲಾಗುವುದು. ಸರ್ಕಾರ ನಿಯಮಗಳನ್ನು ಹಿಂಪಡೆಯುತ್ತಿದೆ ಎಂದಾಕ್ಷಣ ಸಾರ್ವಜನಿಕರು ಮೈ ಮರೆಯಬಾರದು.
ಮುಂದೆಯೂ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೆ ಪಾಲಿಸಬೇಕು. ಕೋವಿಡ್ ಇರುವಾಗ ಹೇಗೆ ಸೂಕ್ತ ನಡವಳಿಕೆಗಳನ್ನು ಪಾಲಿಸಬೇಕೆಂದು ಜನರಿಗೆ ತಿಳಿದಿದೆ. ಯಾರಿಗೂ ಆರ್ಥಿಕ ನಷ್ಟವಾಗಬಾರದೆಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ