ದೇಶದ ಸ್ವಚ್ಛ ನಗರಗಳ ಪಟ್ಟಿ ಪ್ರಕಟ….!

ನವದೆಹಲಿ:

     ಮಧ್ಯಪ್ರದೇಶದ ಇಂದೋರ್ ನಗರವು  2024-25ನೇ ಸಾಲಿನ ಸ್ವಚ್ಛ ಸರ್ವೇಕ್ಷಣ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಸತತ 8ನೇ ಬಾರಿಗೆ ದೇಶದ ‘ಅತ್ಯಂತ ಸ್ವಚ್ಛ ನಗರ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ಸರ್ಕಾರವು ವಾರ್ಷಿಕವಾಗಿ ನಡೆಸುವ ಸ್ವಚ್ಛತಾ ಸಮೀಕ್ಷೆಯಲ್ಲಿ ಇಂದೋರ್‌ ಪ್ರಥಮ, ಗುಜರಾತ್​​ನ ಸೂರತ್ ಎರಡನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರದ ಮುಂಬೈ ಮೂರನೇ ಸ್ಥಾನ ಪಡೆದುಕೊಂಡಿದೆ. 3-10 ಲಕ್ಷ ಜನಸಂಖ್ಯೆಯ ವಿಭಾಗದಲ್ಲಿ, ನೋಯ್ಡಾ ಸ್ವಚ್ಛ ನಗರವಾಗಿ ಅಗ್ರಸ್ಥಾನ ಪಡೆದಿದ್ದು, ಚಂಡೀಗಢ ಎರಡನೇ ಸ್ಥಾನದಲ್ಲಿದೆ ಮತ್ತು ಮೈಸೂರು ಮೂರನೇ ಸ್ಥಾನದಲ್ಲಿದೆ.

    ದೆಹಲಿ ವಿಜ್ಞಾನ ಭವನದಲ್ಲಿ ಇಂದು  ನಡೆದ ಸಮಾರಂಭದಲ್ಲಿ ಅರ್ಹವಾದ ರಾಜ್ಯಗಳ ನಗರಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಆಯೋಜಿಸಿದ್ದ ಈ ಕಾರ್ಯಕ್ರಮವು, ಸ್ವಚ್ಛ ಭಾರತ ಮಿಷನ್-ನಗರ  ಅಡಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಲ್ಲಿ ಶ್ರಮಿಸಿದ ನಗರಗಳು ಮತ್ತು ನಗರ ಸಂಸ್ಥೆಗಳನ್ನು ಗೌರವಿಸಿತು.

   ಇಂದೋರ್‌ ನಗರವು ಕಟ್ಟುನಿಟ್ಟಾದ ತ್ಯಾಜ್ಯ ವಿಂಗಡಣೆಯನ್ನು ಜಾರಿಗೆ ತಂದಿದೆ. ನಿವಾಸಿಗಳಲ್ಲಿ ಜಾಗೃತಿ ಮೂಡಿಸಲು ಅಭಿಯಾನ ಪ್ರಾರಂಭಿಸಿತ್ತು. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸ್ವಚ್ಛ ಸರ್ವೇಕ್ಷಣ್ 2024–25 ಪ್ರಶಸ್ತಿಗಳಲ್ಲಿ ಇಂದೋರ್ ಅನ್ನು ಗೌರವಿಸಲಾಗುವುದು ಮತ್ತು ಅಗ್ರ ಸ್ಥಾನವನ್ನು ಪಡೆದುಕೊಂಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಕೆಲವು ದಿನಗಳ ನಂತರ ಈ ಘೋಷಣೆ ಹೊರಬಿದ್ದಿದೆ. 

   ಕರ್ನಾಟಕದ ಮೈಸೂರು ಪಟ್ಟಿಯ ಟಾಪ್​ 10 ರಲ್ಲಿ ಸ್ಥಾನ ಪಡೆದಿರುವ ಏಕೈಕ ನಗರವಾಗಿದೆ. 1 ಲಕ್ಷಕ್ಕೂ ಅಧಿಕ ಜನರು ವಾಸಿಸುವ ನಗರಗಳ ಪಟ್ಟಿಯಲ್ಲಿ ಅರಮನೆ ನಗರಿ 8ನೇ ಸ್ಥಾನ ಪಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, 19 ಸ್ಥಾನ ಪಡೆದುಕೊಂಡಿದೆ. 2016 ರಲ್ಲಿ ದೇಶದಲ್ಲಿಯೇ ನಂಬರ್​ 1 ಸ್ಥಾನ ಪಡೆದಿದ್ದ ಮೈಸೂರು ಬಳಿಕ ಕುಸಿತ ಕಂಡಿತ್ತು. ಅದರಲ್ಲೂ 2023 ನೇ ಸಾಲಿನಲ್ಲಿ 27 ನೇ ಸ್ಥಾನ ಪಡೆದುಕೊಂಡಿತ್ತು. ಇದು ನಗರದ ಅತ್ಯಂತ ಕಳಪೆ ಸಾಧನೆಯಾಗಿತ್ತು. ಈ ಬಾರಿ ನಗರದ ಅಂದವನ್ನು ಹೆಚ್ಚಿಸುವಲ್ಲಿ ಮಹಾನಗರಪಾಲಿಕೆಯು ಶ್ರಮ ವಹಿಸಿತ್ತು. ಉತ್ತಮ ಪ್ರದರ್ಶನ ನೀಡಿದ ರಾಜ್ಯಗಳ ವಿಭಾಗದಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಛತ್ತೀಸ್​ಗಢ ಮತ್ತು ಕರ್ನಾಟಕ ನಂತರದ ಸ್ಥಾನಗಳಲ್ಲಿವೆ.

Recent Articles

spot_img

Related Stories

Share via
Copy link