ಕ್ಲೀನ್‌ಮ್ಯಾಕ್ಸ್‌ , ಒಸಾಕಾ ಗ್ಯಾಸ್‌ ಗ್ರೂಪ್‌ ಜಂಟಿ ಉದ್ಯಮ: ಹಸಿರು ಇಂಧನ ಯೋಜನೆಗೆ ಮತ್ತಷ್ಟು ಬಲ

ಬೆಂಗಳೂರು :

   ಭಾರತದ ಅತಿದೊಡ್ಡ ನವೀಕರಿಸಬಹುದಾದ ಇಂಧನ ವಿತರಕ ಸಂಸ್ಥೆಯಾದ ಕ್ಲೀನ್‌ಮ್ಯಾಕ್ಸ್‌ ಸಂಸ್ಥೆ ಜಪಾನ್‌ ಮೂಲದ ಒಸಾಕಾ ಗ್ಯಾಸ್‌ ಕೋ.ಲಿಮಿಟೆಡ್‌ ಜತೆಗೆ ಕೈಜೋಡಿಸಿರುವುದಾಗಿ ತಿಳಿಸಿದೆ. ಇದು ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಕಾರ್ಬನ್‌ ಬಳಕೆ ತಗ್ಗಿಸುವ ಉದ್ದೇಶಕ್ಕೆ ವೇಗ ನೀಡಿದೆ.

   ಕಾರ್ಪೋರೇಟ್‌ ಸಂಸ್ಥೆಗಳು ಹಸಿರು ಇಂಧನ ಆರ್ಥಿಕತೆಗೆ ಪರಿವರ್ತನೆಗೊಳ್ಳಲು ಬ್ರೂಕ್‌ಫೀಲ್ಡ್‌ ಬೆಂಬಲಿತ ಕ್ಲೀನ್‌ಮ್ಯಾಕ್ಸ್‌ ಮತ್ತು ಜಪಾನ್‌ ಮೂಲಕ ಒಸಾಕಾ ಗ್ಯಾಸ್‌ ಗ್ರೂಪ್‌ ಜಂಟಿ ಉದ್ಯಮ ನೆರವಾಗಲಿದೆ. ಈ ಜಂಟಿ ಉದ್ಯಮವನ್ನು ‘ ಕ್ಲೀನ್‌ ಮ್ಯಾಕ್ಸ್‌ ಒಸಾಕಾ ಗ್ಯಾಸ್‌ ರಿನಿವೆಬಲ್‌ ಎನರ್ಜಿ ಪ್ರೈವೇಟ್‌ ಲಿಮಿಟೆಡ್‌’ ಎಂದು ಕರೆಯಲಾಗಿದೆ.

   ಈ ಪಾಲುದಾರಿಕೆ ಸುಸ್ಥಿರ ಇಂಧನ ಅಭಿವೃದ್ಧಿ ಮೂಲಕ ಭಾರತದ ಗ್ರೀನ್ ಎನರ್ಜಿ ಉದ್ದೇಶವನ್ನುಈಡೇರಿಸುವಲ್ಲಿ ಕೈಜೋಡಿಸಲಿದೆ. ಈ ಪಾಲುದಾರಿಕೆ ಮೂಲಕ ಒಸಾಕಾ ಗ್ಯಾಸ್‌ ಗ್ರೂಪ್‌ ಮೊದಲ ಬಾರಿಗೆ ಭಾರತದ ಹಸಿರು ಇಂಧನ ಮಾರುಕಟ್ಟೆ ಪ್ರವೇಶಿಸಿದೆ. ಈ ಪಾಲುದಾರಿಕೆಯಲ್ಲಿ ಒಸಾಕಾ ಗ್ಯಾಸ್‌ ಸಬ್ಸಿಡಿಯರಿ, ಒಸಾಕಾ ಗ್ಯಾಸ್‌ ಸಿಂಗಾಪೂರ್‌ ಪಿಟಿಇ.ಎಲ್‌ಟಿಡಿ (ಒಗಿಎಸ್) ಹಾಗೂ ಜಪಾನ್‌ ಸರಕಾರದ ಆಡಳಿತದಲ್ಲಿರುವ ಜಪಾನ್‌ ಬ್ಯಾಂಕ್‌ ಫಾರ್‌ ಇಂಟನ್ರ್ಯಾಶನಲ್‌ ಕೊಆಪರೇಶನ್‌(ಜೆಬಿಐಸಿ) ಮಧ್ಯೆ ಒಕ್ಕೂಟ ವ್ಯವಸ್ಥೆ ನಿರ್ಮಾಣವಾಗಿದ್ದು ಜಂಟಿ ಉದ್ಯಮದಲ್ಲಿ ಹೂಡಿಕೆ ಮಾಡಲಿದೆ.

ಈ ಜಂಟಿ ಉದ್ಯಮ ಮೊದಲ ಹಂತದಲ್ಲಿ 400 ಮೆಗಾವ್ಯಾಟ್‌ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಪ್ಲ್ಯಾಂಟ್‌ ನಿರ್ಮಾಣದ ಗುರಿ ಹೊಂದಲಾಗಿದೆ. ಈ ಜಂಟಿ ಉದ್ಯಮ ಕರ್ನಾಟಕದಿಂದಲೇ ಕಾರ್ಯಾರಂಭ ಮಾಡಲಿದೆ. ಈ ಯೋಜನೆ ದೀರ್ಘಕಾಲದ ಕಾರ್ಪೋರೇಟ್‌ ಇಂಧನ ಖರೀದಿ ಒಪ್ಪಂದದ ಮೂಲಕ ಭಾರತದಾದ್ಯಂತ ಸಂಸ್ಥೆಗಳು ಸ್ವಚ್ಛ ಇಂಧನ (ಗ್ರೀನ್‌ ಎನರ್ಜಿ) ಮೂಲಕ ತಮ್ಮ ಕಾರ್ಯಚಟುವಟಿಕೆಯನ್ನು ನಡೆಸುವಂತೆ ನೆರವಾಗಲಿದೆ.