10 ಜಿಲ್ಲೆಗಳಲ್ಲಿನ ಅಕ್ರಮ ರೆಸಾರ್ಟ್‌ ತರವಿಗೆ ಅರಣ್ಯ ಇಲಾಖೆ ಸೂಚನೆ …!

ಚಿಕ್ಕಮಗಳೂರು:

    ಉತ್ತರ ಕನ್ನಡದ ಶಿರೂರು ಮತ್ತು ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ 10 ಜಿಲ್ಲೆಗಳಲ್ಲಿ ಅತಿಕ್ರಮಣ ಅರಣ್ಯ ಭೂಮಿಯಲ್ಲಿ ತಲೆ ಎತ್ತಿರುವ ಹೋಂಸ್ಟೇ ಹಾಗೂ ರೆಸಾರ್ಟ್‌ಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

    2015ರಿಂದ ಅರಣ್ಯ ಪ್ರದೇಶದಲ್ಲಿ ತಲೆ ಎತ್ತಿರುವ ಅಕ್ರಮ ಹೋಂಸ್ಟೇ, ರೆಸಾರ್ಟ್, ತೋಟಗಳನ್ನು ತೆರವುಗೊಳಿಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಇತ್ತೀಚೆಗೆ ಇಲಾಖೆಗೆ ಸೂಚಿಸಿದ್ದರು.

    ಪ್ರವಾಸೋದ್ಯಮ ಇಲಾಖೆಯ ಮಾಹಿತಿಯ ಪ್ರಕಾರ, ಚಿಕ್ಕಮಗಳೂರು ಜಿಲ್ಲೆಯ ಚದ್ರದ್ರೋಣ ಬೆಟ್ಟದ ಶ್ರೇಣಿ ಮತ್ತು ಮಲೆನಾಡು ಪ್ರದೇಶದ ಇತರ ಭಾಗಗಳಲ್ಲಿ 2,000 ಕ್ಕೂ ಹೆಚ್ಚು ಹೋಂಸ್ಟೇಗಳು ಮತ್ತು ರೆಸಾರ್ಟ್‌ಗಳು ತಲೆ ಎತ್ತಿದ್ದು, ಕೆಲವರು ನೋಂದಣಿ ಮಾಡಿಕೊಂಡಿದ್ದರೆ, ಕೆಲವರು ಅಕ್ರಮವಾಗಿ ನಿರ್ಮಾಣ ಮಾಡಿರುವುದು ಕಂಡು ಬಂದಿದೆ. ಜಿಲ್ಲಾಡಳಿತ ಎಚ್ಚರಿಕೆ ನೀಡಿದರೂ ಈ ಹೋಂಸ್ಟೇಗಳು ಅಕ್ರಮವಾಗಿ ಮುನ್ನಡೆಯುತ್ತಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸೂಚನೆ ನೀಡಿದೆ.

    ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ ಎಸ್.ಗಿರಿಜಾಶಂಕರ್, ಗುಡ್ಡಗಾಡುಗಳಲ್ಲಿ ಕಟ್ಟಡಗಳನ್ನು ನಿರ್ಮಿಸಿ, ಅರಣ್ಯಗಳಲ್ಲಿನ ನೈಸರ್ಗಿಕ ಸಂಪನ್ಮೂಲಗಳ ನೀರನ್ನು ಬಳಸುತ್ತಿರುವ ಹೋಂಸ್ಟೇ ಮತ್ತು ರೆಸಾರ್ಟ್ ಮಾಲೀಕರು ಭೂಕುಸಿತ ಮತ್ತು ಕಾಡುಗಳಲ್ಲಿನ ಜಲಮೂಲಗಳ ಮಾಲಿನ್ಯಕ್ಕೆ ಕಾರಣರಾಗಿದ್ದಾರೆಂದು ಹೇಳಿದ್ದಾರೆ.

   ಇತ್ತೀಚೆಗೆ ಮಲೆನಾಡಿನಲ್ಲಿ ನಿರಂತರ ಮಳೆಯಿಂದಾಗಿ ಮುಳ್ಳಯ್ಯನಗಿರಿ. ಬಾಬಾಬುಡನ್‌ಗಿರಿ ರಸ್ತೆಗಳು, ಚಾರ್ಮಾಡಿ ಘಾಟ್ ರಸ್ತೆ ಮತ್ತು ಶೃಂಗೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭೂಕುಸಿತ ಸಂಭವಿಸಿದೆ. ಕಳಸ ದ್ವೀಪವಾಗಿ ಮಾರ್ಪಟ್ಟಿದೆ. ಕೊಪ್ಪ ತಾಲೂಕಿನ ತೋಟದ ಮನೆಯೊಂದರ ಬಳಿ ಭೂಕುಸಿತ ಸಂಭವಿಸಿದೆ. ಗುಡ್ಡಗಳ ಮೇಲೆ ಅಕ್ರಮ ಕಟ್ಟಡಗಳನ್ನು ನಿರ್ಮಿಸಲು ಅಗೆಯುವ ಯಂತ್ರಗಳನ್ನು ಬಳಸುವುದು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಅವೈಜ್ಞಾನಿಕವಾಗಿ ವಿಸ್ತರಿಸುವುದು ಮಲೆನಾಡು ಪ್ರದೇಶದಲ್ಲಿ ಭೂಕುಸಿತಕ್ಕೆ ಕಾರಣವೆಂದು ತಜ್ಞರು ಹೇಳಿದ್ದಾರೆ.

    ಏತನ್ಮಧ್ಯೆ, ಭೂಕುಸಿತದ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳ ಕಾಲ ಕೈಮರದಿಂದ ಅತ್ತಿಗುಂಡಿವರೆಗಿನ ರಾಜ್ಯ ಹೆದ್ದಾರಿಯಲ್ಲಿ ವಾಹನಗಳು ಮತ್ತು ಮಿನಿ ಬಸ್‌ಗಳನ್ನು ನಿಷೇಧಿಸಿರುವುದಾಗಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap