ಬೆಂಗಳೂರು:
ಭಾನುವಾರ ತಡರಾತ್ರಿ ನಡೆದ ಅತ್ಯಂತ ರೋಚಕ ಏಷ್ಯಾಕಪ್ ಟಿ20 ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 5 ವಿಕೆಟ್ ಅಂತರದಿಂದ ಬಗ್ಗುಬಡಿಯುವ ಮೂಲಕ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಮೂಲಕ ಭಾರತವು 9ನೇ ಬಾರಿ ಏಷ್ಯಾ ಕಪ್ ಮುಡಿಗೇರಿಸಿಕೊಂಡಿತು. ವಿಜೇತ ಭಾರತೀಯ ಕ್ರಿಕೆಟ್ ತಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ. ನಮ್ಮವರ ಆಟ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು ಎಂದು ಶ್ಲಾಘಿಸಿದ್ದಾರೆ.
ಟ್ವಿಟರ್ ಎಕ್ಸ್‌ನಲ್ಲಿ ಚಾಂಪಿಯನ್ ಟೀಮ್ ಇಂಡಿಯಾದ ಫೋಟೊವನ್ನು ಹಂಚಿಕೊಂಡಿರುವ ಸಿದ್ದರಾಮಯ್ಯ,’ ಏಷ್ಯಾಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಅಜೇಯರಾಗುಳಿದು, ಮತ್ತೊಮ್ಮೆ ಪಾಕಿಸ್ತಾನವನ್ನು ಬಗ್ಗುಬಡಿದು ಪ್ರಶಸ್ತಿ ಮುಡಿಗೇರಿಸಿಕೊಂಡ ನಮ್ಮವರ ಆಟ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು.
ಒತ್ತಡದ ಸಮಯದಲ್ಲಿ ಸಂಯಮದ ಆಟ ಆಡಿದ ತಿಲಕ್ ವರ್ಮಾ, ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಕಡಿಮೆ ಮೊತ್ತಕ್ಕೆ ಎದುರಾಳಿಗಳನ್ನು ಕಟ್ಟಿಹಾಕಿದ ಕುಲ್‌ದೀಪ್ ಯಾದವ್ ಮತ್ತು ನಿರ್ಣಾಯಕ ಪಂದ್ಯದಲ್ಲಿ ತಂಡ ತೋರಿದ ಸಂಘಟಿತ ಹೋರಾಟದಿಂದ ಭಾರತ ಗೆದ್ದಿದೆ. ಯುವ ಆಟಗಾರರೇ ತುಂಬಿದ್ದ ಭಾರತೀಯ ತಂಡ ದೊಡ್ಡ ಸಾಧನೆ ಮಾಡಿ, ಇತಿಹಾಸ ಸೃಷ್ಟಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್‌ಗೆ ಇಳಿದ ಪಾಕ್ ಆರಂಭಿಕ ಹಂತದಲ್ಲಿ ಉತ್ತಮ ಆಟವಾಡಿದರೂ ಕೂಡ ಆ ಬಳಿಕ ಕುಲ್‌ದೀಪ್ ಮತ್ತು ವರುಣ್ ಚಕ್ರವರ್ತಿ ಸ್ಪಿನ್ ಮೋಡಿಗೆ ತರಗೆಲೆಯಂತೆ ಉದುರಿ 19.1 ಓವರ್‌ನಲ್ಲಿ 146ಕ್ಕೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಭಾರತ ತಂಡ ತಿಲಕ್ ವರ್ಮಾ ಅವರ ಅಜೇಯ ಅರ್ಧಶತಕದ ನೆರವಿನಿಂದ ಇನ್ನೂ ಎರಡು ಎಸೆತ ಬಾಕಿ ಇರುವಂತೆಯೇ 150 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.








