ಕಲಬುರ್ಗಿ:
ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿಗಳಾಗಿದ್ದ ಡಾ.ಎಸ್.ಎ.ಪಾಟೀಲ್ ಬಿರಾಳ (8೦) ಅವರು ಇಂದು ನಿಧನರಾದರು. ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಎರಡು ಅವಧಿಗೆ ಕುಲಪತಿಗಳಾಗಿ ಹಾಗೂ ಕರ್ನಾಟಕ ಕೃಷಿ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.ಐಸಿಎಂಆರ್ ನಿರ್ದೇಶಕ ಹೀಗೆ ಹಲವು ಹುದ್ದೆಗಳನ್ನು ಅಲಂಕರಿಸಿ ಕರ್ತವ್ಯ ನಿರ್ವಹಣೆ ಮಾಡಿರುವ ಹೆಗ್ಗಳಿಕೆ ಪಾಟೀಲ್ ಅವರದ್ದು.
ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸಹೋದರರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಡಾ. ಎಸ್.ಎ.ಪಾಟೀಲ್ ಅವರ ನಿಧನದ ಸುದ್ದಿಗೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ನಾಡಿನ ಹೆಮ್ಮೆಯ ಕೃಷಿ ವಿಜ್ಞಾನಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಡಾ. ಎಸ್.ಎ. ಪಾಟೀಲ್ ಅವರ ನಿಧನದ ಸುದ್ದಿ ತಿಳಿದು ಬೇಸರವಾಯಿತು ಎಂದರು.
ಕುಲಪತಿಗಳಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯವನ್ನು ದೇಶದಲ್ಲೇ ಅತ್ಯುನ್ನತ ಶಿಕ್ಷಣ ಕೇಂದ್ರವಾಗಿ ಕಟ್ಟಿಬೆಳೆಸಿದ ಪಾಟೀಲರು ಹೈಬ್ರಿಡ್ ಹತ್ತಿ ತಳಿ ಸಂಶೋಧನೆ, ಗುಣಮಟ್ಟದ ಬೀಜ ವಿತರಣೆಗಾಗಿ ‘ಬೀಜ ಗ್ರಾಮ ಯೋಜನೆ’ ಆರಂಭಿಸಿ ದೇಶದ ರೈತರ ಪಾಲಿಗೆ ಅತ್ಯಂತ ಪ್ರೀತಿಪಾತ್ರ ವಿಜ್ಞಾನಿಯಾಗಿದ್ದರು. ಪಾಟೀಲರ ಅಗಲಿಕೆಯಿಂದ ನಾಡಿನ ಕೃಷಿ ಮತ್ತು ಸಂಶೋಧನಾ ವಲಯ ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ