ವಿಜಯಪುರ:
2ಎ ವರ್ಗದಡಿ ಮೀಸಲಾತಿ ಪಡೆಯಲು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೊರೆ ಹೋಗುವಂತೆ ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಸಲಹೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿ, 2ಎ ಮೀಸಲಾತಿ ಸಂಬಂಧ ಪಂಚಮಸಾಲಿ ಸಮಾಜದವರು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಬಳಿ ಹೋಗಬೇಕು. ಆಯೋಗವು ಪಂಚಮಸಾಲಿ ಸಮಾಜ ಹಿಂದುಳಿದ ವರ್ಗಗಳಿಗೆ ಸೇರ್ಪಡೆಯಾಗಲು ಅರ್ಹವಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಮೀಕ್ಷೆ ಕೈಗೊಂಡು ಬಳಿಕ ಸರ್ಕಾರಕ್ಕೆ ಏನು ಶಿಫಾರಸು ಮಾಡಲಿದೆ ಎಂಬುದನ್ನು ನೋಡಬೇಕು ಎಂದು ಹೇಳಿದರು.
ಪಂಚಮಸಾಲಿ ಸಮುದಾಯಕ್ಕೆ ತನ್ನ ಬೇಡಿಕೆಗಳನ್ನು ಬೆಂಬಲಿಸಿ ಪ್ರತಿಭಟನೆ ಮಾಡುವ ಹಕ್ಕಿದೆ, ಆದರೆ ಅದು ಶಾಂತಿಯುತ ವಾಗಿರಬೇಕು. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಸಮಾಜದ ಬಾಂಧವರು ಸಂಯಮದಿಂದ ವರ್ತಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಪ್ರತಿಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯಿಸಿ, ಕಾನೂನಿನ ಮುಂದೆ ಎಲ್ಲರೂ ಒಂದೇ. ಅದು ಸಿಎಂ ಆಗಿರಲಿ ಅಥವಾ ನೋಡುಗನಾಗಿರಲಿ. 14ನೇ ವಿಧಿ ಸಮಾನತೆಯ ಹಕ್ಕನ್ನು ಖಾತರಿಪಡಿಸುತ್ತದೆ ಎಂದು ಹೇಳಿದರು. ಬಳಿಕ ಪ್ರತಿಭಟನಾ ನಿರತ ಪಂಚಮಸಾಲಿಗಳೊಂದಿಗೆ ಮಾತನಾಡಲು ಎಚ್‌ಸಿ ಮಹದೇವಪ್ಪ ಸೇರಿದಂತೆ ಮೂವರು ಸಚಿವರನ್ನು ಸರ್ಕಾರ ಕಳುಹಿಸಿದೆ ಎಂದು ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಉತ್ತರಿಸಿದರು.
ಪೊಲೀಸರು ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಕೆಲ ಪ್ರತಿಭಟನಾಕಾರರು ಕಲ್ಲು ತೂರಾಟ, ಬ್ಯಾರಿಕೇಡ್‌ಗಳನ್ನು ತಳ್ಳಿ, ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿರುವ ಫೋಟೋಗಳು ಹಾಗೂ ವಿಡಿಯೋಗಳು ಪೊಲೀಸರ ಬಳಿಯಿವೆ. ಸ್ವಾಮೀಜಿಗಳೇಕೆ ರಸ್ತೆಯಲ್ಲಿ ಕುಳಿತಿದ್ದರು? ಪ್ರತಿಭಟನಾಕಾರರು ಕಲ್ಲು ಎಸೆಯದಿದ್ದರೆ 20 ಕ್ಕೂ ಹೆಚ್ಚು ಪೊಲೀಸರು ಹೇಗೆ ಗಾಯಗೊಂಡರು? ಪ್ರತಿಭಟಾಕಾರರ ದುರ್ವರ್ತನೆಗೆ ಸರ್ಕಾರದ ಬಳಿ ಸಾಕ್ಷಿಗಳಿವೆ ಎಂದು ಹೇಳಿದರು.
‘ಬಿಜೆಪಿಯವರು ಈ ಹಿಂದೆ ಮುಸ್ಲಿಮರಿಗೆ ಇದ್ದ ಶೇ.4ರ ಮೀಸಲಾತಿಯನ್ನು ರದ್ದುಗೊಳಿಸಿ, ಒಕ್ಕಲಿಗರಿಗೆ ಶೇ 2 ಮತ್ತು ಲಿಂಗಾಯತರಿಗೆ ಶೇ 2ರಷ್ಟು ಮೀಸಲಾತಿ ನೀಡಿ ಟೋಪಿ ಹಾಕಿದ್ದರು. ಇದನ್ನು ಪ್ರಶ್ನಿಸಿ ರಸೂಲ್ ಎಂಬುವರು ಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ಹಿಂದಿನ ಬಿಜೆಪಿ ಸರ್ಕಾರವೇ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಕೋರ್ಟ್‌ನಲ್ಲಿ ಒಪ್ಪಿಕೊಂಡಿದೆ’ ಎಂದರು.
