ಧರ್ಮ-ರಾಜಕಾರಣ ಜನತೆಯನ್ನು ಒಡೆಯುತ್ತಿದೆ : ಬರಗೂರು ರಾಮಚಂದ್ರಪ್ಪ

ಬರಗೂರು

      ಈಹೊತ್ತು ಧರ್ಮ ಜನಗಳನ್ನು ಒಡೆಯುತ್ತಿದೆ. ಜಾತಿ ಮತ್ತು ರಾಜಕಾರಣ ಜನಗಳನ್ನು ಒಡೆದುಹಾಕುತ್ತಿದೆ. ಇವುಗಳನ್ನು ಹೊಡೆದೋಡಿಸಲು ಕಲೆಯಿಂದ ಮಾತ್ರ ಸಾಧ್ಯ. ಇಂತಹ ಸಮ್ಮೇಳನಗಳಿಗೆ ಮೆರುಗು ಬರುವುದಾದರೆ ಕಲಾವಿದರುಗಳನ್ನು ಮುಖ್ಯ ಅತಿಥಿಗಳ ಸ್ಥಾನದಲ್ಲಿರಿಸಿ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತಂದು ಸನ್ಮಾನಿಸಿದಾಗ ಸಮ್ಮೇಳನಕ್ಕೆ ಒಂದು ಅರ್ಥ ಸಿಗುತ್ತದೆ ಎಂದು ಬಂಡಾಯ ಸಾಹಿತಿ, ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದರು.

     ಅವರು ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯ ಬರಗೂರಿನ ಶ್ರಿ ಆಂಜನೇಯಸ್ವಾಮಿ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಗಡಿನಾಡ ಜಾನಪದ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಬ್ಬ ಹೆಳವನೂ ಸಹ ಏಳು ಸಮುದ್ರವನ್ನು ದಾಟಿ, ಕೀಳು ಸಮುದ್ರದತ್ತ ಸಾಗಿ ಮಂತ್ರವಾದಿಯನ್ನು ಕೊಂದು ದಾಟಿ ಬರಬಹುದು. ಏನೂ ಇಲ್ಲದ ಗ್ರಾಮೀಣ ಜನರಿಗೆ   ವಿಶ್ವ್ವಾಸ, ಆತ್ಮವಿಶ್ವಾಸ, ಪ್ರೇರಣೆ ಮತ್ತು ಕನಸನ್ನು ಕೊಟ್ಟಂತಹದ್ದು ಈ ನನ್ನ ಬರಗೂರು. ನನ್ನೂರಿನ ಈ ಸಭೆಯಲ್ಲಿ ಸರ್ವಾಧ್ಯಕ್ಷನನ್ನಾಗಿಸಿರುವುದು ನನ್ನ ಸೌಭಾಗ್ಯ. ಸಾಮಾನ್ಯರಿಗೆ ಗೌರವ ಕೊಡುವಂತಹದ್ದನ್ನು ಜನಪದ ಎಂದು ಹೇಳುತ್ತೇವೆ. ಕುವೆಂಪು ಹೇಳಿದ ಹಾಗೆ ಶ್ರೀಸಾಮಾನ್ಯ ದೇವರ ಮನ್ನಣೆಗೆ ಪಾತ್ರನಾಗುತ್ತಾನೆ. ಸಮಾನತೆಗೆ ಒಳಗಾದವನು ಸರ್ವರಲ್ಲೂ ಶ್ರೇಷ್ಠನಾಗುತ್ತಾನೆ ಎಂದರು.

     ಬೆಂಗಳೂರು ಜಾನಪದ ವಿಶ್ವ ವಿದ್ಯಾನಿಲಯದ ಕುಲಪತಿಗಳು, ಸಂಸದರು, ಮಂತ್ರಿಗಳು ಬಂದು ಹೋಗುವಂತಹ ಸ್ಥಿತಿಗೆ ಬರಗೂರು ಬೆಳೆದಿದ್ದು ಇಂತಹ ವೇದಿಕೆಗಳನ್ನು ನಾವುಗಳು ಸದ್ಬಳಕೆ ಮಾಡಿಕೊಳ್ಳಬೇಕಿದೆ. ಕಲೆ ಯಾವ ಜಾತಿ, ಧರ್ಮ, ರಾಜಕಾರನಕ್ಕೆ ಮಣಿಯುವುದಿಲ್ಲ. ಕಲೆ ಇದ್ದವನನ್ನು ಯಾರೂ ಏನು ಮಾಡಲೂ ಸಾಧ್ಯವಾಗಲಾರದು. ದೇವರು ಒಬ್ಬ ಸ್ನೇಹಿತ, ಸಹಚರ, ನಮ್ಮ ಮನೆಯ ಅಕ್ಕ, ತಂಗಿ ಎಂದು ಭಾವಿಸಿರುವವರು ಗ್ರಾಮೀಣ ಜನರು ಮಾತ್ರ. ಹಾಗಾಗಿ ದೇವರಲ್ಲಿ ಮಾತನಾಡುವ ಶಕ್ತಿ, ಗ್ರಾಮೀಣ ಜನರಿಗೆ ಮಾತ್ರ ಇದೆ. ಆದರೆ ದೇವರನ್ನು, ಧರ್ಮವನ್ನು ಬಂಡವಾಳ ಮಾಡಿಕೊಂಡು ತಮ್ಮಗಳ ಬೇಳೆ ಬೇಯಿಸಿಕೊಳುವವರು ಭಕ್ತಿವಂತರಲ್ಲ.

       ಉಪಕಥೆಗಳನ್ನು ಕಟ್ಟಿದಂತಹ ಜನ ಸಾಮಾನ್ಯರ ನಡುವೆ ಪ್ರಚಲಿತವಾದಂತಹ ಕಥೆಗಳನ್ನು ತೆಗೆದುಕೊಂಡು ಸಿನಿಮಾ ಮಾಡಿದರೆ ಜನರಿಗೆ ತಲುಪಿ ಇಷ್ಟವಾಗುತ್ತದೆ ಎಂದು ತಿಳಿದು ಅಮೇರಿಕಾದ ಹಾಲಿವುಡ್‍ನಲ್ಲೂ ಸಹ ಜನಪದ ಕತೆಗಳನ್ನೇ ಆಧರಿಸಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಕರ್ನಾಟಕದಲ್ಲೂ ಸಹ ಮೊದಲು ಸಿನಿಮಾ ಮಾಡಿದ್ದು ಜನಪದ ಕಲೆಗಳನ್ನೇ ಆಧರಿಸಿ. ಹಾಗಾಗಿ ಗ್ರಾಮೀಣ ಜನರ ಕಲೆಗಳ ಹಿನ್ನೆಲೆಯಿಂದ ಇಂದು ಜನ ಸಾಮಾನ್ಯರಲ್ಲಿ ಅನ್ಯೋನ್ಯತೆಯ ಭಾವನೆ ಇನ್ನೂ ಜೀವಂತವಾಗಿದ್ದು ಇಂದಿನ ಯುವಕರು ಕಲೆ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸ ಬೇಕಿದೆ ಎಂದರು.

       ಸಂಸದ ಚಂದ್ರಪ್ಪ ಮಾತನಾಡಿ, ಶಿರಾ ತಾಲ್ಲೂಕಿನ ಭಾಗದಲ್ಲಿ ರಾಮಚಂದ್ರಪ್ಪರ ಬಗ್ಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಬೇರೆ ತಾಲ್ಲೂಕು ಹಾಗೂ ಜಿಲ್ಲೆಗಳಿಗೆ ಗೊತ್ತು ಅವರ ಸಾಧನೆ. ಈ ಹಿಂದೆ ಡಾ.ರಾಜ್‍ಕುಮಾರ್ ನಟನೆ, ಗಾಂಭೀರ್ಯತೆಯಿಂದ ಕೂಡಿದಂತ ಚಿತ್ರಗಳನ್ನು ರೂಪಿಸಿ ಜನರ ಮನಸೆಳೆದಿದ್ದರು. ಅವರ ಕಾಲಾ ನಂತರ ಅಂತಹ ಕಲಾವಿದರನ್ನು ಕಾಣಲು ಸಾಧ್ಯವೇ ಎನಿಸಿತ್ತು. ಆದರೆ ಬರಗೂರು ರಾಮಚಂದ್ರಪ್ಪರವರು ರಾಜ್‍ಕುಮಾರಲ್ಲಿನ ಗುಣಾವಶೇಷಗಳನ್ನು ಹೊಂದಿದ್ದು ಕನ್ನಡ ನಾಡಿನ ಸಾಹಿತ್ಯ ಮತ್ತು ಕಲೆಯನ್ನು ಜೀವಂತವಾಗಿರಿಸುವ ಪ್ರಯತ್ನ ಶ್ಲಾಘನೀಯವಾದುದು ಎಂದರು.

       ಬೆಂಗಳೂರು ಜಾನಪದ ವಿಶ್ವವಿದ್ಯಾಲಯ ಕುಲಪತಿ ಡಿ.ಬಿ. ನಾಯಕ್ ಮಾತನಾಡಿ, ಗ್ರಾಮೀಣ ಭಾಗದ ಜನರಿಂದಲೇ ಇಂತಹ ಸಾಹಿತ್ಯ, ಕಲೆ ಉಳಿದುಕೊಂಡಿದ್ದು. ಇಂದಿನ ಜನ ಸುಸಂಸ್ಕøತರಾಗಿರಲು ಕಲೆ ಮತ್ತು ಸಾಹಿತ್ಯದಿಂದ ಸಾಧ್ಯವಾಗಿದೆ. ಯುವ ಪೀಳಿಗೆಗೂ ಕಲೆಗಳ ತರಬೇತಿ ನೀಡಿ ಜನಪದ ಸಾಹಿತ್ಯವನ್ನು ಜೀವಂತವಾಗಿರಿಸಲು ಪ್ರಯತ್ನಿಸಬೇಕು ಎಂದರು.

        ರಾಜ್ಯ ಗಡಿನಾಡ ಜಾನಪದ ಪರಿಷತ್ ಅಧ್ಯಕ್ಷ ಎಸ್.ಬಾಲಾಜಿ, ಬೆಂಗಳೂರು ಕನ್ನಡ ಜಾನಪದ ಪರಿಷತ್‍ನ ಶ್ರೀನಿವಾಸ್, ಶಿರಾ ಪ್ರೆಸಿಡೆನ್ಸಿ ಶಾಲಾ ಸಂಸ್ಥಾಪಕ ಚಿದಾನಂದ್, ರಾಜ್ಯ ಬಿಜೆಪಿ ಮುಖಂಡ ಬಿ.ಕೆ.ಮಂಜುನಾಥ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಹಂಸವೇಣಿ, ಗ್ರಾಮಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀನರಸಮ್ಮ, ಫ್ಲಾರೆನ್ಸ್ ಪಬ್ಲಿಕ್ ಶಾಲಾ ಸಂಸ್ಥಾಪಕ ಕೆ.ಬಸವರಾಜು, ತುಮಕೂರು ಹಾಲು ಒಕ್ಕೂಟ ನಿರ್ದೇಶಕ ಎಸ್.ಆರ್.ಗೌಡ, ನಾರಾಯಣ್, ಬೆಜ್ಜಿಹಳ್ಳಿ ರಾಮಚಂದ್ರಪ್ಪ, ಗ್ರಾ.ಪಂ.ಸದಸ್ಯೆ ನರಸಮ್ಮ, ಕರವೇ ಲತೀಫ್, ಹಾರೊಗೆರೆ ಮಹೇಶ್, ಬಿ.ಕೆ.ಲಕ್ಷ್ಮಣಗೌಡ ಮುಂತಾದವರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap