ಥೂಥುಕುಡಿ
ತಮ್ಮ ಮನೆ ಹಾಗೂ ಕಚೇರಿ ಮೇಲೆ ನಡೆಸಲಾದ ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ತಮಿಳುನಾಡು ಥೂಥುಕುಡಿ ಲೋಕಸಭಾ ಕ್ಷೇತ್ರದ ದ್ರಾವಿಡ್ ಮುನ್ನೇತ್ರ ಕಜಗಮ್ (ಡಿಎಮ್ ಕೆ) ಅಭ್ಯರ್ಥಿ ಎಮ್.ಕೆ.ಕನಿಮೋಝಿ ಹೇಳಿದ್ದಾರೆ.
ಮಂಗಳವಾರ ರಾತ್ರಿ ಐಟಿ ಅಧಿಕಾರಿಗಳು ತಮ್ಮ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರತಿಪಕ್ಷದಲ್ಲಿರುವುದರಿಂದ ಐಟಿ ದಾಳಿ ನಡೆಸಲಾಗಿದೆ. ಐಟಿ ಅಧಿಕಾರಿಗಳು ನಮ್ಮ ಮನೆಗೆ ಬಂದು ತಪಾಸಣೆ ನಡೆಸಲು ಅನುಮತಿ ಕೋರಿದರು. ಆಗ ನಾನು ನಿಮ್ಮ ಬಳಿ ತಪಾಸಣೆ ಆದೇಶವಿದೆಯೇ ಎಂದು ಪ್ರಶ್ನಿಸಿದಾಗ ಅದಕ್ಕೆ ಅವರು ಯಾವುದೇ ಉತ್ತರ ನೀಡಲಿಲ್ಲ. ನನ್ನ ಪ್ರಕಾರ ಇದು ಕಾನೂನು ಬಾಹಿರ ತಪಾಸಣೆಯಾಗಿದೆ ಎಂದು ಹೇಳಿದರು.
ಇಷ್ಟಾದರೂ ನಾನು ಅಧಿಕಾರಿಗಳ ಜೊತೆ ತಪಾಸಣೆಗಾಗಿ ಸಹಕರಿಸಿದೆ. ರಾತ್ರಿ 9.30ಕ್ಕೆ ಸಮನ್ಸ್ ಜಾರಿ ಮಾಡಿ ಹೇಳಿಕೆ ನೀಡುವಂತೆ ತಿಳಿಸಲಾಯಿತು. ಎರಡು ಗಂಟೆ ತಪಾಸಣೆ ಬಳಿಕವೂ ಅವರಿಗೆ ಏನು ಸಿಗಲಿಲ್ಲ. ಹೀಗಾಗಿ ಅವರು ಬರಿಗೈಯಲ್ಲಿ ವಾಪಸ್ ಹೋಗಿದ್ದಾರೆ.
ಇದು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಐಟಿ ದಾಳಿ ನಡೆಸಲಾಗುತ್ತಿದೆ. ಬಿಜೆಪಿಯ ಅಭ್ಯರ್ಥಿ ತಮಿಲಿಸಾಯಿ ಸೌಂದರಾಜನ್ ಮನೆಯಲ್ಲಿ ಕೋಟಿಗಟ್ಟಲೇ ಹಣ ಬಚ್ಚಿಡಲಾಗಿದೆ. ಐಟಿ ವಿಭಾಗ ಅವರ ಮನೆ ಮೇಲೆ ದಾಳಿ ನಡೆಸಲಿದೆಯೇ ಎಂದು ಅವರು ಪ್ರಶ್ನಿಸಿದರು.ಅವರು ವೆಲ್ಲೂರ್ ಲೋಕಸಭಾ ಕ್ಷೇತ್ರದ ಚುನಾವಣೆ ರದ್ದುಪಡಿಸಿದ ರೀತಿಯಲ್ಲೇ ಥೂಥುಕುಡಿ ಕ್ಷೇತ್ರದ ಚುನಾವಣೆಯನ್ನು ಕೂಡ ರದ್ದುಪಡಿಸು ಹುನ್ನಾರ ಹೊಂದಿದ್ದಾರೆ ಎಂದು ಕನಿಮೋಝಿ ದೂರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ