ಮೈಸೂರು
ಬಿಜೆಪಿಯವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುತ್ತಾರೆ. ಆದರೆ ಬುರ್ಖಾ, ಗಡ್ಡ, ಶಿಲುಬೆ ಹಾಕಿದವರು ಬರಬಾರದು ಎನ್ನುತ್ತಾರೆ. ಇದು ಯಾವ ರೀತಿಯ ಸಬ್ ಕಾ ಸಾಥ್..? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸುಳ್ಳು ಬಿಜೆಪಿಯ ಮನೆದೇವರು. 15 ಲಕ್ಷ ಪ್ರತಿ ಕುಟುಂಬದ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದಿದ್ದರು. ಅಚ್ಚೇ ದಿನ್ ಬರುತ್ತದೆ ಎಂದರು. ಬಂತೇ? ಗ್ಯಾಸ್, ಗೊಬ್ಬರದ ಬೆಲೆ ಏರಿಸಿದರು. ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ ಎಂದರು.
ನರೇಂದ್ರ ಮೋದಿ ಪ್ರಧಾನಿಯಾಗಿ ಜನಸಾಮಾನ್ಯರ ಬದುಕಿಗೆ ಅನುಕೂಲವಾಗುವಂತೆ ಏನೂ ಮಾಡಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ. ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಗೆ ಕೊಂಡೊಯ್ಯುತ್ತೇನೆ ಎಂದರು. ಆಗಿದೆಯೇ? ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದವರಿಗೆ ಇಂದಿನವರೆಗೆ ಮಾಡಲಾಗಿಲ್ಲ. ನರೇಂದ್ರ ಮೋದಿಯವರು ನುಡಿದಂತೆ ನಡೆದಿಲ್ಲ. ಇಷ್ಟೆಲ್ಲಾ ಅನ್ಯಾಯ ಮಾಡಿದ ಬಿಜೆಪಿಗೆ ಯಾಕೆ ಮತ ಹಾಕಬೇಕು? ಎಂದು ಪ್ರಶ್ನಿಸಿದ್ದಾರೆ.
ನಮ್ಮ ಕಾರ್ಯಕರ್ತರಿಗೆ ನಾವು ಮಾಡಿರುವ ಕೆಲಸವನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಮತ್ತು ಜನರಿಗೆ ಸುಳ್ಳು ಹೇಳಬೇಡಿ ಎಂದು ಹೇಳಿದ್ದೇನೆ. ಹಿಂದಿನ ಬಾರಿ ನಮ್ಮ ಸರ್ಕಾರ 168 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿತ್ತು. ಹಾಗಾಗಿ ನುಡಿದಂತೆ ನಡೆದಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತೇವೆ ಎಂದರು.
ನಾವು ಹಣ ಕೇಳುತ್ತಿರುವುದು ಗ್ಯಾರಂಟಿಗಳಿಗೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳುತ್ತಾರೆ. ಈ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡಲು ಬಿಜೆಪಿಯವರಿಗೆ ನಾವು ಆಹ್ವಾನ ನೀಡಿದ್ದೇವೆ. ಗ್ಯಾರಂಟಿಗಳಿಗೆ ಒಂದು ಪೈಸೆಯನ್ನೂ ಕೊಡಬೇಡಿ. ಮುಂದಿನ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗೆ 52,009 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ.
2023-24 ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಕೊಡುತ್ತೇವೆ ಎಂದಿದ್ದರು. ಈ ವರ್ಷ ಒಂದೇ ಒಂದು ಪೈಸೆ ಬಂದಿಲ್ಲ. ಬಜೆಟ್‌ನಲ್ಲಿ ಘೋಷಿಸಿದಂತೆ ಹಣ ಕೊಟ್ಟಿದ್ದೇವೆ ಎಂದು ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ. 18,171 ಕೋಟಿ ರೂ.ಗಳ ಬರಪರಿಹಾರವನ್ನು ಕೊಡಲು ಮನವಿ ಮಾಡಿ 5 ತಿಂಗಳಾಗಿದ್ದರೂ ಒಂದು ರೂಪಾಯಿ ನೀಡಿಲ್ಲ. ರೈತರು ಕಷ್ಟದಲ್ಲಿದ್ದರೂ ಈವರೆಗೆ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಇದು ಸತ್ಯ. ಕರ್ನಾಟಕದ ಜನರನ್ನು ಅತ್ಯಂತ ಅಲಕ್ಷ್ಯದಿಂದ ಕಾಣುತ್ತಿದ್ದು, ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿದರು.
15ನೇ ಹಣಕಾಸಿನ ಆಯೋಗವು ನಮಗೆ ₹5,495 ಕೋಟಿ ವಿಶೇಷ ಅನುದಾನ ಶಿಫಾರಸು ಮಾಡಿತ್ತು, ಇದೂ ಸೇರಿ ಕೆರೆಗಳ ಅಭಿವೃದ್ಧಿ ಹಾಗೂ ಪೆರಿಫೆರಲ್ ರಿಂಗ್ ರಸ್ತೆಗೆ ಬರಬೇಕಿದ್ದ ಒಟ್ಟು 11,495 ಕೋಟಿ ರೂ.ಗಳ ಪೈಕಿ ಒಂದು ರೂಪಾಯಿ ನೀಡದೆ ಸುಳ್ಳು ಹೇಳುತ್ತಿದ್ದಾರೆ. ಅವರ ತಾಳಕ್ಕೆ ಕುಣಿಯುವ ಬಿಜೆಪಿ ಅವರದ್ದು 7 ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ದ್ರೋಹವಾಗಿದೆ. ಅದಕ್ಕಾಗಿಯೇ ನಾವು ಸರ್ವೊಚ್ಛ ನ್ಯಾಯಾಲಯಕ್ಕೆ ಹೋಗಿದ್ದೇವೆ. ಬರ ಸಮೀಕ್ಷೆ ವರದಿ ನೀಡಿ ಒಂದು ತಿಂಗಳೊಳಗೆ ಪರಿಹಾರ ಕೊಡಬೇಕೆಂದು ಕಾನೂನಿನಲ್ಲಿದೆ, ಆದರೂ ನಮಗೆ ಪರಿಹಾರ ನೀಡಿಲ್ಲ ಎಂದರು.
ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವ ಬಿಜೆಪಿಗೆ ಮತ ಹಾಕಬೇಕೆ ಎಂದು ನಿಮ್ಮ ಆತ್ಮಸಾಕ್ಷಿಯನ್ನು ಕೇಳಿ. ತುಟಿ ಬಿಚ್ಚದ ಬಿಜೆಪಿ ಸಂಸದರದ್ದು ಬರೀ ಪ್ರಲಾಪ. ಮಕ್ಕಳ ಆಸ್ಪತ್ರೆ, ಮೈಸೂರು ಜಿಲ್ಲಾ ಆಸ್ಪತ್ರೆ, ಮೈಸೂರು- ಬೆಂಗಳೂರು ಕಾರಿಡಾರ್, ಕಾಲೇಜು, ಹಾಸ್ಟೆಲ್, ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಿಸಿದ್ದು ನಾವು. ಬಿಜೆಪಿಯವರು ಏನೂ ಮಾಡಿಲ್ಲ.
ಜಿಡಿಎಸ್ ಅಂದರೆ ಜಾತ್ಯಾತೀತ ಜನತಾದಳ. ಜನತಾದಳ ಇಂದು ಜಾತ್ಯಾತೀತವಾಗಿ ಉಳಿದಿದೆಯೇ? ನರೇಂದ್ರ ಮೋದಿ ಪ್ರಧಾನಿಯಾದರೆ ದೇಶವನ್ನೇ ಬಿಟ್ಟು ಹೋಗುತ್ತೇನೆ, ನಾನು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದಿದ್ದ ಮಾಜಿ ಪ್ರಧಾನಿ ದೇವೇಗೌಡರ ಅನುಕೂಲಸಿಂಧು ರಾಜಕಾರಣ ಎಲ್ಲಿಯವರೆಗೆ ನಡೆಯುತ್ತದೆ? ಮೇಕೆದಾಟು ಯೋಜನೆಯನ್ನು ಎನ್‍ಡಿಎ ಮೂಲಕ ಮಾಡಿಸುವುದಾಗಿ ಹೇಳುತ್ತಾರೆ. ಬಿಜೆಪಿ ಕಡೆಯಿಂದ ಯಾಕೆ ಮಾಡಿಸಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಮೈಸೂರು, ಚಾಮರಾಜನಗರ ಕ್ಷೇತ್ರಕ್ಕೆ ಬಿಜೆಪಿಯವರ ಕೊಡುಗೆಗಳೇನು? ಬಿಜೆಪಿ ಎಂದರೆ ಲೂಟಿಕೋರರು. ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿರುವವರನ್ನು ಜನರು ಬೆಂಬಲಿಸಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಜ್ಞಾನವಿರುವ ಈ ಎಲ್ಲರೂ ಜನರ ಧ್ವನಿಯಾಗಿ ದೇಶದ ಸಂಸತ್ತಿನಲ್ಲಿ ಕೆಲಸ ಮಾಡುವಂತಾಗಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಲೋಕಸಭೆಯಲ್ಲಿ ಜನರ ಪ್ರತಿನಿಧಿಯಾಗಬೇಕು ಎಂದು ಕಾರ್ಯಕರ್ತರದಲ್ಲಿ ಮನವಿ ಮಾಡಿದರು.