ಬೆಂಗಳೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಿಂದ 14 ಸೈಟ್‌ಗಳನ್ನು ಅಕ್ರಮವಾಗಿ ಪಡೆದ ಆರೋಪ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತಂದಿಟ್ಟಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ರದ್ದು ಕೋರಿ ಸಿಎಂ ಕಾನೂನು ಸಮರ ನಡೆಸಿದ್ದಾರೆ. ಹೈಕೋರ್ಟ್‌ನಲ್ಲಿ ಬಿರುಸಿನ ವಾದ ಪ್ರತಿವಾದಗಳು ನಡೆಯುತ್ತಿದ್ದು ಈಗಾಗಲೇ 3 ಬಾರಿ ವಿಚಾರಣೆ ಮುಂದೂಡಿಕೆಯಾಗಿದೆ. ಇಂದು ಮಧ್ಯಾಹ್ನ 2.30ಕ್ಕೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠದಲ್ಲಿ ಮತ್ತೆ ವಿಚಾರಣೆ ಮುದುವರಿಯಲಿದೆ. ಎಲ್ಲರ ಚಿತ್ತ ಹೈಕೋರ್ಟ್‌ನತ್ತ ನೆಟ್ಟಿದೆ.
ಸಿಎಂ ಸಿದ್ದರಾಮಯ್ಯ ಪರ ಅಭಿಷೇಕ್ ಮನು ಸಿಂಘ್ವಿ, ರಾಜ್ಯಪಾಲರ ಕಾರ್ಯದರ್ಶಿ ಪರ ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರವರು ವಾದ ಮಂಡಿಸಲಿದ್ದಾರೆ. ಇಂದು ಕೂಡ ವಾದ ಪ್ರತಿವಾದ ಹೈವೋಲ್ಟೇಜ್ ಸೃಷ್ಟಿಸುವ ಸಾಧ್ಯತೆಯಿದೆ. ಆಗಸ್ಟ್ 31ರಂದು ನಡೆದಿದ್ದ ವಿಚಾರಣೆಯಲ್ಲಿ ಎರಡು ಕಡೆಯ ವಕೀಲರು ಹಲವು ಅಂಶಗಳನ್ನು ಮುಂದಿಟ್ಟು ವಾದ ಪ್ರತಿವಾದ ನಡೆಸಿದ್ದರು.
ಇವತ್ತು ಬೆಳಗ್ಗೆ 11ಗಂಟೆಗೆ ಸಿಎಂ ಮೈಸೂರು ಪ್ರವಾಸ ನಿಗದಿಯಾಗಿತ್ತು. ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸುವ ಯೋಜನೆ ಇತ್ತು. ಆದರೆ ಹೈಕೋರ್ಟ್‌ನಲ್ಲಿಂದು ವಿಚಾರಣೆ ಕಾರಣ, ಪ್ರವಾಸ ರದ್ದು ಮಾಡಿದ್ದಾರೆ. ಮನೆಯಲ್ಲೇ ವಾದ, ಪ್ರತಿವಾದ ಗಮನಿಸಲಿದ್ದು, ಇಂದು ಸಂಜೆ ಮೈಸೂರು ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ನಾಳೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ.
ಒಟ್ಟಿನಲ್ಲಿ ರಾಜ್ಯಪಾಲರ ನೀಡಿರುವ ಪ್ರಾಸಿಕ್ಯೂಷನ್ ಅನುಮತಿಯನ್ನು ಹೈಕೋರ್ಟ್ ಎತ್ತಿಹಿಡಿಯುತ್ತದೆಯೇ ಅಥವಾ ರದ್ದು ಮಾಡುತ್ತದೆಯೇ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇವತ್ತೇ ವಿಚಾರಣೆ ಮುಕ್ತಾಯವಾದರೆ ಆದೇಶ ಪ್ರಕಟಿಸುವ ಆಥವಾ ಕಾಯ್ದಿರಿಸುವ ಸಾಧ್ಯತೆಯೂ ಇದೆ.