ಕೇಂದ್ರ ಜಲಶಕ್ತಿ ಸಚಿವರಿಗೆ ಸಿಎಂ ಪತ್ರ….!

ಬೆಂಗಳೂರು :

      ರಾಜ್ಯದ ಹಿತಾಸಕ್ತಿಯನ್ನು ಸಂಕಷ್ಟಕ್ಕೆ ದೂಡಿ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸ್ಸನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಸಮಿತಿಯ ತೀರ್ಮಾನದಂತೆ ಇನ್ನೂ 15 ದಿನ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯದಿಂದ ಪ್ರತಿದಿನ ಬಿಳಿಗುಂಡ್ಲುವಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸುವುದು ಸಾಧ್ಯವಿಲ್ಲ ಎಂದು ತಮ್ಮ ಪತ್ರದಲ್ಲಿ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.

      ಸಮಿತಿಯ ಹಿಂದಿನ ನಿರ್ದೇಶನವನ್ನು ರಾಜ್ಯ ಸರ್ಕಾರ ಪಾಲಿಸಿದೆ. ಈಗ ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದ ಬರಪರಿಸ್ಥಿತಿ ನಿರ್ಮಾಣವಾಗಿದ್ದು, ಕಾವೇರಿ ಜಲಾನಯನ ಪ್ರದೇಶದ ಬಹುತೇಕ ತಾಲ್ಲೂಕುಗಳು ಸಂಕಷ್ಟಕ್ಕೆ ಒಳಗಾಗಿವೆ. ಜೂನ್-ಸೆಪ್ಟೆಂಬರ್ ನಡುವೆ 92 ದಿನಗಳ ಕಾಲ ತಮಿಳುನಾಡು, 100 ಟಿಎಂಸಿ ಕಾವೇರಿ ನೀರನ್ನು ಬಳಸಿಕೊಂಡಿದ್ದು, ಇದು ಈ ಹಿಂದೆ 5 ಬಾರಿ, ಬರಪರಿಸ್ಥಿತಿ ಎದುರಾದಾಗಲೂ ತಮಿಳುನಾಡಿಗೆ ಕರ್ನಾಟಕ ಒದಗಿಸಿರುವ ಕಾವೇರಿ ನೀರಿನ ಪ್ರಮಾಣಕ್ಕಿಂತ ಹೆಚ್ಚು ಎನ್ನುವುದನ್ನು ಗಮನಿಸಬೇಕು. ಕರ್ನಾಟಕದ ಜಲಾಶಯಗಳಲ್ಲಿ ಸಂಕಷ್ಟದ ಪರಿಸ್ಥಿತಿ ಇದ್ದರೂ ತಮಿಳುನಾಡು, ಭತ್ತದ ಕೃಷಿಯನ್ನು ವ್ಯಾಪಕವಾಗಿ ಮುಂದುವರೆಸುತ್ತಿದೆ ಎಂದು ಮುಖ್ಯಮಂತ್ರಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

    ಮೆಟ್ಟೂರು ಜಲಾಶಯದಲ್ಲಿ ಎರಡು ದಿನಗಳ ಹಿಂದಿನ ಮಾಹಿತಿಯಂತೆ 24.233 ಟಿಎಂಸಿ ನೀರು ಸಂಗ್ರಹವಿದೆ. ನಮ್ಮ ರಾಜ್ಯದಿಂದ ಇದುವರೆಗೆ ಬಿಡುಗಡೆ ಮಾಡಿರುವ ನೀರನ್ನು ಪರಿಗಣಿಸಿದರೆ, ತಮಿಳುನಾಡಿನ ಅವಶ್ಯಕತೆಯನ್ನು ಪೂರೈಸಲು ಸಾಕಾಗುವಷ್ಟು ನೀರು ಅಲ್ಲಿ ಲಭ್ಯವಿದೆ. ಕರ್ನಾಟಕದಲ್ಲಿ ಪ್ರಸಕ್ತ ಬೆಳೆಗಳ ರಕ್ಷಣೆಗೆ 70 ಟಿಎಂಸಿ, ಕುಡಿಯುವ ನೀರಿಗೆ 33 ಹಾಗೂ ಕೈಗಾರಿಕೆಗಳಿಗೆ 3 ಟಿಎಂಸಿ ನೀರಿನ ಅಗತ್ಯವಿದೆ. ರಾಜ್ಯದಲ್ಲಿ ಸದ್ಯಕ್ಕೆ 53 ಟಿಎಂಸಿ ಕಾವೇರಿ ನೀರು ಮಾತ್ರ ಲಭ್ಯವಿದ್ದು, ನಮ್ಮ ಅವಶ್ಯಕತೆಗಳ ಪೂರೈಕೆಗೆ ಈ ಸಂಗ್ರಹ ಸಾಕಾಗುವುದಿಲ್ಲ ಎಂದೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap