ತುಮಕೂರು : ಸಿದ್ಧಗಂಗಾ ಮಠಕ್ಕೆ ಯಡಿಯೂರಪ್ಪ ಭೇಟಿ, ಹೆಚ್ಚಾದ ಕುತೂಹಲ!!!

 ತುಮಕೂರು ;

2018ರಲ್ಲಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ಮತ ಯಾಚನೆಗೂ ಮುಂಚೆ ಸಿದ್ಧಗಂಗಾ ಶ್ರೀಗಳ ಭೇಟಿಯಾಗಿ ಆಶೀರ್ವಾದ ಕೋರಿದ್ದರು.

      ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸುವ ಹುನ್ನಾರಗಳು ಸ್ವಪಕ್ಷೀಯರಿಂದ ನಡೆಯುತ್ತಿರುವ ಬೆನ್ನಲ್ಲೇ ತುಮಕೂರು ಜಿಲ್ಲೆಗೆ ಮುಖ್ಯಮಂತ್ರಿಗಳ ಪ್ರವಾಸ ಶುಕ್ರವಾರ ದಿಢೀರ್ ನಿಗದಿಯಾಗಿದೆ. ಕೋವಿಡ್ ಪ್ರಗತಿ ಪರಿಶೀಲನೆ ಸಭೆ ನಿಗದಿಮಾಡಿಕೊಂಡು ತುಮಕೂರಿಗೆ ಆಗಮಿಸುತ್ತಿರುವ ಯಡಿಯೂರಪ್ಪ ಅವರು ಜಿಪಂನಲ್ಲಿ ಸಭೆ ಬಳಿಕ ಸಿದ್ಧಗಂಗಾ ಮಠಕ್ಕೆ ಭೇಟಿಕೊಡುತ್ತಿರುವುದು ಪ್ರಸಕ್ತ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗೆಗೆ ಮತ್ತಷ್ಟು ಕುತೂಹಲ ಹೆಚ್ಚಿಸುವಂತೆ ಮಾಡಿದೆ.
ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನಕ್ಕೇರಿದಾಗಿನಿಂದಲೂ ತಮ್ಮ ಅಧಿಕಾರಸ್ಥಾನಕ್ಕೆ ಗಂಡಾಂತರ ತರುವ ಪ್ರಯತ್ನ ನಡೆದ ಸಂದರ್ಭದಲ್ಲೆಲ್ಲ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಹಿಂದಿನ ಡಾ.ಶ್ರೀ ಶಿವಕುಮಾg Àಸ್ವಾಮೀಜಿ ಅವರÀ ಆಶೀರ್ವಾದ ಪಡೆದು ಹೋಗುತ್ತಿದ್ದ ಬಿ.ಎಸ್.ಯಡಿಯೂರಪ್ಪ ಅವರು ಪ್ರಸ್ತುತ ನಡೆಯುತ್ತಿರುವ ನಾಯಕತ್ವ ಬದಲಾವಣೆಯ ರಾಜಕೀಯ ಹಂಗಾಮದ ಸಂದರ್ಭದಲ್ಲೂ ಸಹ ಶ್ರೀ ಮಠದಿಂದ ತೆರೆದಿರುವ ಕೋವಿಡ್ ಆರೈಕೆ ಕೇಂದ್ರದ ವೀಕ್ಷಣೆಗಾಗಿ ತಾತ್ಕಾಲಿಕ ಪ್ರವಾಸ ಪಟ್ಟಿ ಹಾಕಿಕೊಂಡು ಧಾವಿಸಿ ಬರುತ್ತಿರುವುದು ಹಲವು ರಾಜಕೀಯ ವಿಶ್ಲೇಷಣೆಗೆ ಎಡೆಮಾಡಿದೆ.

ಹಿಂದೆ ಸಿದ್ಧಗಂಗಾ ಮಠಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಡಾ.ಶ್ರೀ.ಶಿವಕುಮಾರಸ್ವಾಮೀಜಿ ಆಶೀರ್ವಾದ ಪಡೆದಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ

2008ರಲ್ಲಿ ತುಮಕೂರಿನಿಂದಲೇ ರಣಕಹಳೆ:

      ಜೆಡಿಎಸ್-ಬಿಜೆಪಿ 20:20 ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆರಿದ 7 ದಿನದಲ್ಲೇ ಬಹುಮತ ಸಾಬೀತುಪಡಿಸಲಾಗದೆ ಅಧಿಕಾರದಿಂದ ಕೆಳಕ್ಕಿಳಿದಾಗ ಯಡಿಯೂರಪ್ಪ ಅವರು ಮೊದಲಿಗೆ ಸಿದ್ಧಗಂಗಾ ಮಠಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದು ಅಲ್ಲಿಂದಲೇ ಬೃಹತ್‍ರಾಜಕೀಯ ರ್ಯಾಲಿಗೆ ಚಾಲನೆ ಕೊಟ್ಟು ಚುನಾವಣಾ ಅಖಾಡಕ್ಕೆ ಧುಮುಕಿದರು.

      ಪರಿಣಾಮ 2008ರಲ್ಲಿ ಪುನಃ ಮುಖ್ಯಮಂತ್ರಿಗಾದಿ ಬಿಎಸ್‍ವೈಗೆ ಪ್ರಾಪ್ತಿಯಾಯಿತು. ಶಾಸಕರ ರೆಸಾರ್ಟ್ ರಾಜಕಾರಣ, ಬ್ಲಾಕ್‍ಮೇಲ್‍ಗಳ ನಡುವೆಯೂ ಆಗೂ ಹೀಗೂ ಮೂರು ವರ್ಷಗಳ ಕಾಲ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದ ಯಡಿಯೂರಪ್ಪ ಕಡೆಗೆ ರಾಜಕೀಯ ಒತ್ತಡಗಳು ತೀವ್ರವಾದಾಗ 2011 ರಲ್ಲಿ ರಾಜೀನಾಮೆ ನೀಡಿ ಸದಾನಂದಗೌಡರನ್ನು ತಮ್ಮ ಉತ್ತರಾಧಿಕಾರಿಯಾಗಿ ಸಿಎಂ ಕುರ್ಚಿಯಲ್ಲಿ ಕೂರಿಸಿದರು. ಬಳಿಕ ಗೌಡರು-ಬಿಎಸ್‍ವೈ ನಡುವೆ ಸಂಬಂಧ ಹಳಸಿ ಜಗದೀಶ್‍ಶೆಟ್ಟರ್ ಮುಖ್ಯಮಂತ್ರಿಗಾದಿಗೇರಿದರು. ಆ ನಂತರ ಬಿಜೆಪಿಯಿಂದಲೇ ಹೊರಬಂದು ಪ್ರತ್ಯೇಕ ಕೆಜಿಪಿ ಪಕ್ಷ ಕಟ್ಟಲು ಮೊದಲಿಗೆ ಸಿದ್ಧಗಂಗಾ ಶ್ರೀಗಳ ಆಶೀರ್ವಾದವೇ ಬೇಡಿದರು. 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಕೆಜಿಪಿ ಅಭ್ಯರ್ಥಿಗಳು ಅನೇಕ ಕಡೆ ಕಣಕ್ಕಿಳಿದು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಇದರಿಂದ ಕಮಲ ಪಕ್ಷ ಅಧಿಕಾರದಿಂದ ದೂರ ಉಳಿಯುವಂತಾಯಿತು.

    ಉಪಚುನಾವಣೆ ಬಳಿಕ ಪದೇ ಪದೇ ನಾಯಕತ್ವದ ಬಗ್ಗೆ ಅಪಸ್ವರ:

      ನಂತರದಲ್ಲಿ ಮತ್ತೆ ತವರು ಪಕ್ಷಕ್ಕೆ ಮರಳಿದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಅವರ ನೇತೃತ್ವದಲ್ಲೇ 2018ರ ಚುನಾವಣೆ ಎದುರಿಸಿ ಸರಳ ಬಹುಮತದ ಹತ್ತಿರದ ಸ್ಥಾನಕ್ಕೆ ಬಂದು 6 ದಿನಗಳ ಮುಖ್ಯಮಂತ್ರಿಯೂ ಆದರು. ಆದರೆ ಸದನದಲ್ಲಿ ಬಹುಮತ ಸಾಬೀತು ಪಡಿಸಲಾಗದೆ ರಾಜೀನಾಮೆ ನೀಡಬೇಕಾಯಿತು. ಬಳಿಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಉರುಳಿಸಿದ ಬಳಿಕ 2019 ಜುಲೈ 26ರಿಂದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಸಿಎಂಗಾದಿಗೇರಿದ ಬಳಿಕ ಶ್ರೀ ಮಠಕ್ಕೆ ಆಗಮಿಸಿ ಲಿಂಗೈಕ್ಯ ಶ್ರೀಗಳ ಗದ್ದುಗೆಗೆ ನಮನ ಸಲ್ಲಿಸಿ ಸುಗಮ ಆಡಳಿತಕ್ಕೆ ಶ್ರೀ ಸಿದ್ಧಲಿಂಗಸ್ವಾಮೀಜಿ ಅವರ ಆಶೀರ್ವಾದ ಪಡೆದಿದ್ದರು. ಲೋಕಸಭೆ ಚುನಾವಣೆ, ಉಪ ಚುನಾವಣೆ ಬಳಿಕ ಸಿಎಂ ನಾಯಕತ್ವ ಬದಲಾವಣೆ ಹೇಳಿಕೆಗಳು ಸ್ವಪಕ್ಷಿಯರಿಂದಲೇ ಕೇಳಿಬರಲಾರಂಭಿಸಿದ್ದು, ಸ್ವಜಾತಿ ಮುಖಂಡರು ಸಹ ಬಿಎಸ್‍ವೈ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಧ್ವನಿಎತ್ತಲಾರಂಭಿಸಿದರು. ಬಿಎಸ್‍ವೈಗೆ ವಯಸ್ಸಾಗಿದೆ, ಸಿಎಂ ಸ್ಥಾನ ತೊರೆದು ರಾಜ್ಯಪಾಲರಾಗುತ್ತಾರೆಂಬುದಾಗೆಲ್ಲ ವದಂತಿಗಳು ಹರಿದಾಡಿದವು. ಸಂಪುಟ ವಿಸ್ತರಣೆ, ನಿಗಮ ಮಂಡಳಿ ಸ್ಥಾನ ಮಾನ ಅನುದಾನ ಹಂಚಿಕೆ ಮೂಲಕ ಶಾಸಕರನ್ನು ಸಮಾಧಾನದಲ್ಲಿಡುವ ಪ್ರಯತ್ನ ಮಾಡಿದ ಸಿಎಂಗೆ ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲಿ ಮತ್ತೆ ತಮ್ಮ ಪದಚ್ಯುತಿಗೊಳಿಸುವ ಪ್ರಯತ್ನಗಳು ಸಾಗಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸಿಪಿವೈ ಮುನ್ನೆಲೆ, ಹಿನ್ನೆಲೆಯಲ್ಲಿ ಹಲವರು:

      ಹಾಲಿ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಸದ್ಯ ನಾಯಕತ್ವ ಬದಲಾವಣೆಯ ಕೇಂದ್ರ ಬಿಂದುವಾಗಿ ಮುಂಚೂಣಿಯಲ್ಲಿ ಬಿಂಬಿತವಾಗುತ್ತಿದ್ದರೂ ಇದರ ಹಿಂದೆ ಮೂಲ ಬಿಜೆಪಿ, ಸಂಘ ಪರಿವಾರದ ಹಿನ್ನೆಲೆಯಿರುವ ಕೆಲವರ ಚಿತಾವಣೆ ಇದೆ ಎಂಬ ಮಾತುಗಳು ಬಹುಚರ್ಚಿತವಾಗುತ್ತಿವೆ. ಹಾಲಿ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಕೇಂದ್ರ ಸಚಿವ ಪ್ರಹ್ಲಾದ್‍ಜೋಷಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರ ಹೆಸರುಗಳು ನಾಯಕತ್ವ ಬದಲಾವಣೆಯ ಪರ್ಯಾಯ ಹೆಸರುಗಳಾಗಿ ಕೇಳಿಬರುತ್ತಿದ್ದು, ಕೋವಿಡ್ ಪರಿಸ್ಥಿತಿ ವಿವರಿಸುವ ನೆಪದಲ್ಲಿ ಡಿಸಿಎಂ ಅಶ್ವತ್ಥನಾರಾಯಣ್ ಅವರು ಗುರುವಾರವೇ ರಾಜ್ಯಪಾಲರನ್ನು ಭೇಟಿಯಾಗಿರುವುದು ಪ್ರಸಕ್ತ ನಾಯಕತ್ವ ಬದಲಾವಣೆ ವಿದ್ಯಮಾನಗಳಿಗೆ ಇಂಬು ನೀಡಿದೆ..

      ತಮ್ಮ ನಾಯಕತ್ವ, ಪುತ್ರನ ವಿರುದ್ಧ ಪಿತೂರಿಗೆ ಅಸಮಾಧಾನ: ಪಕ್ಷದೊಳಗೆ ತಮ್ಮ ಹಾಗೂ ತಮ್ಮ ಮಗನ ವಿರುದ್ಧ ನಡೆಯುತ್ತಿರುವ ವಿದ್ಯಮಾನಗಳಿಂದ ಅಸಮಾಧಾನಿತರಾಗಿರುವ ಬಿ.ಎಸ್.ವೈ ಅವರು ದೆಹಲಿಯಲ್ಲಿ ಬೀಡುಬಿಟ್ಟು ತಮ್ಮ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದವರಿಗೆ ನೇರವಾಗಿಯೇ ಗುರುವಾರ ಟಾಂಗ್ ನೀಡಿ, ತಮ್ಮನ್ನು ಬಹುವಾಗಿ ಬೆಂಬಲಿಸಿಕೊಂಡು ಬಂದಿರುವ ವೀರಶೈವ-ಲಿಂಗಾಯಿತ ಸಮಾಜದ ಮಠಗಳು, ಅದರಲ್ಲೂ ವಿಶೇಷ ಭಕ್ತಿಯನ್ನು ಹೊಂದಿರುವ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲು ಬಯಸಿ ತುಮಕೂರಿನಲ್ಲಿ ದಿಢೀರನೇ ಪ್ರಗತಿ ಪರಿಶೀಲನಾ ಸಭೆ ನಿಗದಿಗೊಳಿಸಿದ್ದು, ತೀವ್ರ ರಾಜಕೀಯ ಕುತೂಹಲಕ್ಕೆ ಎಡೆ ಮಾಡಿದೆ. ಮಠಗಳ ಭೇಟಿ ಮೂಲಕ ತಮ್ಮ ಹಿಂದಿನ ಶಕ್ತಿ, ಮುಂದಿನ ಕಾರ್ಯತಂತ್ರದ ಬಗ್ಗೆ ಹೈಕಮಾಂಡ್ ಹಾಗೂ ಭಿನ್ನರಿಗೆ ಎಚ್ಚರಿಕೆ ಸಂದೇಶ ರವಾನಿಸುತ್ತಿದ್ದಾರೆಯೇ ಎಂಬ ಚರ್ಚೆಗಳಿಗೂ ಗ್ರಾಸವೊದಗಿಸಿದೆ.

ಸಿಎಂ ಪ್ರವಾಸ ಕಾರ್ಯಕ್ರಮ

ಬೆಳಿಗ್ಗೆ 10.45: ತುಮಕೂರಿಗೆ ಆಗಮನ
11.00ಕ್ಕೆ: ಜಿಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ
12.15ಕ್ಕೆ: ಸಿದ್ಧಗಂಗಾ ಮಠದ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ.
12.45: ಬೆಂಗಳೂರಿಗೆ ನಿರ್ಗಮನ.

     ನನ್ನ ಮುಂದೆ ಇರುವುದು ಕೋವಿಡ್, ಕೋವಿಡ್ ನಿಯಂತ್ರಿಸುವುದು ನಮ್ಮ ಮೊದಲ ಆದ್ಯತೆ, ಯಾರೋ ಒಬ್ಬರು ಎಲ್ಲೋ ಹೋಗಿದ್ದಾರೆ ಎಂದು ಮಾತನಾಡಲ್ಲ. ಅವರಿಗೆ ಉತ್ತರ ಕೊಟ್ಟು ಕಳಿಸಿದ್ದಾರಲ್ವ. ಶಾಸಕಾಂಗ ಸಭೆ ಕರೆದಿರುವ ಬಗ್ಗೆ ಚರ್ಚೆ ಮಾಡೋಲ್ಲ.

-ಯಡಿಯೂರಪ್ಪ, ಮುಖ್ಯಮಂತ್ರಿ.

       ಕೋವಿಡ್ ನಿರ್ವಹಣೆಯಲ್ಲಿ ವಿಫಲರಾಗಿರುವ ಯಡಿಯೂರಪ್ಪ ಅವರಿಗೆ ಕುರ್ಚಿ ಕಳೆದುಕೊಳ್ಳುವ ಆತಂಕ ಶುರುವಾಗಿದೆ. ಇದಕ್ಕೆ ಪೂರಕವಾಗಿ ಬಿಜೆಪಿ ಆಂತರಿಕವಾಗಿ ನಡೆಯುತ್ತಿರುವ ನಾಯಕತ್ವ ಬದಲಾವಣೆ ವಿದ್ಯಮಾನಗಳು ಬಿಎಸ್‍ವೈ ಅವರಲ್ಲಿ ಭೀತಿ ಸೃಷ್ಟಿಸಿ ಮತ್ತೆ ಮಠ ಮಂದಿರಗಳತ್ತ ಹೊರಟಿದ್ದಾರೆ. ಸಿದ್ಧಗಂಗಾ ಮಠದ ಪರಮ ಭಕ್ತರಾಗಿರುವ ಅಧಿಕಾರಸಿಕ್ಕಾಗ, ಕಷ್ಟ ಬಂದಾಗಲೆಲ್ಲ ಮಠಕ್ಕೆ ಬಂದು ಹೋಗುವುದನ್ನು ಹಿಂದಿನಿಂದಲೂ ಮಾಡುತ್ತಿದ್ದು,ಈ ಬಾರಿ ಮತ್ತೆ ಸಿಎಂ ಕುರ್ಚಿಗೆ ಸಂಚಕಾರ ಬಂದಿರುವುದರಿಂದ ತುಮಕೂರು ಭೇಟಿ ಹಾಕಿಕೊಂಡು ಮಠಕ್ಕೂ ತೆರಳುತ್ತಿದ್ದಾರೆ. ಕೋವಿಡ್ ಇಲ್ಲದೇ ಇದ್ದಿದ್ದರೆ ಬಿಎಸ್‍ವೈ ಅವರನ್ನು ಯಾವಾಗಲೋ ಅಧಿಕಾರ ಕಳೆದುಕೊಳ್ಳುತ್ತಿದ್ದರು.

-ಟಿ.ಬಿ.ಜಯಚಂದ್ರ, ಮಾಜಿ ಸಚಿವರು.

 

ಎಸ್. ಹರೀಶ್ ಆಚಾರ್ಯ

Recent Articles

spot_img

Related Stories

Share via
Copy link
Powered by Social Snap