ಚಿಕ್ಕನಾಯಕನಹಳ್ಳಿ :
ಎಸ್‍ಎಸ್‍ಎಲ್‍ಸಿ ಪರೀಕ್ಷೆ ಉತ್ತಮ ಪಡಿಸುವ ಸಂಬಂಧ ಶಿಕ್ಷಣ ಇಲಾಖೆಯ ಆಯುಕ್ತರು ರಾಜ್ಯ ಮಟ್ಟದ ಅಧಿಕಾರಿಗಳ ಸಭೆಯನ್ನು ಪ್ರತಿ ವಾರ ನಡೆಸುತ್ತಿದ್ದು, ಎಲ್ಲಾ ಅಧಿಕಾರಿ ವರ್ಗ ಮಕ್ಕಳ ಫಲಿತಾಂಶವನ್ನು ಅಭಿವೃದ್ಧಿ ಪಡಿಸುವ ಕಡೆ ಹೆಚ್ಚು ಗಮನ ಕೇಂದ್ರೀಕರಿಸಬೇಕು ಎಂದು ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕಾರ್ಯದರ್ಶಿ ಎಚ್.ವಿ.ಕೆಂಪರಾಜು ತಿಳಿಸಿದರು.
ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಬಿ.ಆರ್.ಸಿ.ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕಿನ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕಳೆದ ಬಾರಿಯ ಪರಿಕ್ಷೆಯಲ್ಲಿ ಶೇ.28ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ, ತುಮಕೂರು ಜಿಲ್ಲೆಯು 5ನೇ ಸ್ಥಾನದಲ್ಲಿದೆ ಇದು ಮೇಲ್ದರ್ಜೆಗೆ ಹೋಗಬೇಕು. ಅನುದಾನಿತ ಸಂಸ್ಥೆಗಳಲ್ಲಿ ಫಲಿತಾಂಶ ಕಡಿಮೆ ಆಗುತ್ತಿದೆ ಅವರು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.
ತುಮಕೂರು ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಎ.ಟಿ.ರಂಗದಾಸಪ್ಪ ಮಾತನಾಡಿ, ಈ ಬಾರಿ ಅಪ್ಲಿಕೇಶನ್ ರೀತಿಯ ಪ್ರಶ್ನೆಗಳು ಕಡಿಮೆ ಆಗಬಹುದು, ಪರೀಕ್ಷೆಗೆ ಗೈರು ಹಾಜರಾಗುವ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮುಖ್ಯ ಶಿಕ್ಷಕರು ಶ್ರಮಿಸಬೇಕು ಎಂದರು. ಕಳೆದ ಬಾರಿಯ ಪರೀಕ್ಷೆ ಫಲಿತಾಂಶದ ವಿಶ್ಲೇಷಣೆ ಆಯುಕ್ತರ ಕಚೇರಿಯಿಂದ ಇ-ಲಿಂಕ್ ಮೂಲಕ ಪ್ರತಿ ಶಾಲೆಗೆ ತಲುಪುವಂತೆ ವ್ಯವಸ್ಥೆ ಮಾಡಿದ್ದು ಇದರಲ್ಲಿ ಪ್ರತಿ ಶಾಲೆಯ ಪ್ರತಿ ವಿಷಯದ ಶೇಕಡಾವಾರು ನೀಡಿದ್ದು, ಇದನ್ನು ವಿಷಯವಾರು ಶಿಕ್ಷಕರಿಗೆ ನೀಡಿ ಫಲಿತಾಂಶ ಹೆಚ್ಚಿಸಿಕೊಳ್ಳುವ ಬಗ್ಗೆ ಮನವರಿಕೆ ಮಾಡಿಕೊಡಿ ಎಂದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾತ್ಯಾಯಿನಿ ಎಚ್.ರವರು ಪ್ರಾಸ್ಥಾವಿಕವಾಗಿ ಮಾತನಾಡಿದರು, ಡಿ.ವೈ.ಪಿ.ಸಿ. ಬಂಡಿವೀರಪ್ಪ, ಶಿಕ್ಷಣಾಧಿಕಾರಿ ಆಶಾರಾಣಿ, ಹಿರಿಯ ಉಪನ್ಯಾಸಕರುಗಳಾದ ಮಂಗಳ ಗೌರಮ್ಮ, ಮಹೇಶ್, ಶಾಂತಲಾ,ಪದ್ಮಜ, ವಿಷಯ ಪರೀವಿಕ್ಷಕರಾದ ಗಿರೀಶ್, ರವೀಶ್, ಪ್ರತಿಭಾಅರಸಪ್ಪ,ಸೇರಿದಂತೆ ಹಲವರು ಮಾತನಾಡಿದರು. ಬಿ.ಆರ್.ಸಿ. ಸಂಗಮೇಶ್ ಬಿ.ಕೆ. ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ