ಕೊರಟಗೆರೆ
ಗರ್ಭಕೋಶ ಶಸ್ತ್ರಚಿಕಿತ್ಸೆ ಬಳಿಕ ಮಹಿಳೆಯೊಬ್ಬರು ಸಾವಿಗೀಡಾದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯೊಂದರ ಮುಂದೆ ಪೋಷಕರು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಕೊರಟಗೆರೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಕೊರಟಗೆರೆ ಪಟ್ಟಣದ ವೆಂಕಟೇಶ್ವರ ಎಂಬ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ಜರುಗಿದ್ದು, ಇದೇ ತಾಲ್ಲೂಕಿನ ಚಿಕ್ಕ ಸಾಗ್ಗೆರೆ ವಾಸಿ ಪ್ರಭಾಕರ್ ಎಂಬುವರ ಮಡದಿ ಲಕ್ಷಮ್ಮ(45ವರ್ಷ) ಎಂಬುವರೆ ಸಾವಿಗೀಡಾದ ದುರ್ದೈವಿಯಾಗಿದ್ದಾರೆ.
ಮೃತ ಲಕ್ಷ್ಮಮ್ಮ ಕಳೆದ ಮೂರು ದಿನಗಳ ಹಿಂದೆ ಈ ಆಸ್ಪತ್ರೆಯಲ್ಲಿ ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಜನರಲ್ ವಾರ್ಡ್‍ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಇಂದು ಅಧಿಕ ರಕ್ತದೊತ್ತಡದಿಂದ ಸಾವಿಗೀಡಾಗಿದ್ದರೆ ಎನ್ನಲಾಗಿದೆ. ಸಾವಿಗೀಡಾದ ಮಹಿಳೆಯ ಪೋಷಕರು ಶಸ್ತ್ರಚಿಕಿತ್ಸೆ ಸಮರ್ಪಕವಾಗಿ ನಡೆದಿಲ್ಲ. ಸಾವಿಗೆ ವೈದ್ಯರೇ ಕಾರಣ ಎಂದು ಆರೋಪಿಸಿ ನೂರಾರು ಜನ ಸಾರ್ವಜನಿಕರು, ಪೋಷಕರು ಒಗ್ಗೂಡಿ ಆಸ್ಪತ್ರೆಯ ಕಾರ್ಯವೈಖರಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ, ಪರಿಹಾರ ನೀಡುವಂತೆ ಒತ್ತ್ತಾಯಿಸಿ ಪ್ರತಿಭಟನೆ ನಡೆಸಿದರು.
ಈ ಘಟನೆಗೆ ವೈದ್ಯರು ಪ್ರತಿಕ್ರಿಯಿಸಿ, ನಮ್ಮದೇನು ತಪ್ಪಿಲ್ಲ. ಗರ್ಭಕೋಶ ಶಸ್ತ್ರಚಿಕಿತ್ಸೆ ಉತ್ತಮವಾಗಿ ಜರುಗಿದೆ. ಒಂದೆರಡು ದಿನ ಆರೋಗ್ಯವಾಗಿಯೇ ಇದ್ದರು. ಹಾಗೆ ಏನಾದರೂ ಅಚಾತುರ್ಯವಾಗಿದ್ದರೆ ಮೂರು ದಿನಗಳ ಕಾಲ ರೋಗಿ ಬದುಕಿರುತ್ತಿರಲಿಲ್ಲ.
ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಬಳಿಕ ರೋಗಿಗಳಲ್ಲಿ ಭಯದ ವಾತಾವರಣ ಇರುತ್ತದೆ. ಆ ಸಂದರ್ಭದಲ್ಲಿ ರಕ್ತದೊತ್ತಡ ಏರು ಪೇರಾಗುತ್ತದೆ. ಅದೇ ಮಾದರಿಯಲ್ಲಿ ಈ ರೋಗಿಯೂ ಮಧುಮೇಹ ಹಾಗೂ ರಕ್ತÀದೊತ್ತಡದಿಂದ ಸಾವಿಗೀಡಾಗಿದ್ದಾರೆ ವಿನಹ, ಶಸ್ತ್ರಚಿಕಿತ್ಸೆಯಿಂದಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.