ಚಿಕ್ಕನಾಯಕನಹಳ್ಳಿ :
ಸರ್ಕಾರಿ ಯೋಜನೆಗಳಿಗೆ ಪುರಸಭಾ ಸದಸ್ಯರು ಶಿಫಾರಸ್ಸು ಮಾಡಿದ ಫಲಾನುಭವಿಗಳ ಪಟ್ಟಿ ಮಾಡುವಾಗ ಸ್ಥಳ ಪರಿಶೀಲನೆ ಮಾಡದೆ ಆಯ್ಕೆ ಮಾಡಬೇಡಿ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ತಾ.ಪಂ.ಸಭಾಂಗಣದಲ್ಲಿ ತಾಲೂಕು ಎಸ್‍ಸಿ, ಎಸ್‍ಟಿ ಹಿತರಕ್ಷಣಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು, ಒಂದೇ ಮನೆಯಲ್ಲಿ ಮೂರು-ನಾಲ್ಕು ಬಿ.ಪಿ.ಎಲ್. ಕಾರ್ಡ್‍ಗಳಿವೆ, ಒಂದೇ ಕುಟುಂಬದವರು 2018-19ರಲ್ಲಿ ಮನೆ ಕಟ್ಟಲು ಅನುದಾನ ಪಡೆದಿದ್ದಾರೆ, 2019-20ರಲ್ಲಿ ಅದೇ ಮನೆ ರಿಪೇರಿಗೆಂದು ಅನುದಾನ ಪಡೆದಿದ್ದಾರೆ. ಇವೆಲ್ಲಾ ಅವಾಂತರಗಳು ಪುರಸಭಾ ವ್ಯಾಪ್ತಿಯಲ್ಲಿ ನಡೆದಿವೆ ಎಂದು ಡಿ.ಎಸ್.ಎಸ್. ಮುಖಂಡ ಲಿಂಗದೇವರು ಹೇಳಿದರು. ಈ ಬಗ್ಗೆ ಪುರಸಭಾ ಮುಖ್ಯಾಧಿಕಾರಿಗಳು ಪರಿಶೀಲಿಸಿ ಒಬ್ಬನೇ ವ್ಯಕ್ತಿ ಬೇರೆ ಬೇರೆ ವಿಳಾಸ ನೀಡಿ ಮೂರಕ್ಕಿಂತ ಹೆಚ್ಚು ಸರ್ಕಾರದ ಯೋಜನೆಗಳಲ್ಲಿ ಫಲಾನುಭವಿಯಾಗಿದ್ದು ಕಂಡು ಬಂದರೆ ಅಂತವರಿಗೆ ವಿತರಿಸಿರುವ ಅನುದಾನವನ್ನು ವಾಪಸ್ ಸರ್ಕಾರಕ್ಕೆ ಕಟ್ಟಿಸಿ ಎಂದು ಸಚಿವರು ಸೂಚಿಸಿದರು.
ಸರ್ಕಾರ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಎಂಟು ನೂರು ಮನೆ ನಿರ್ಮಿಸಲು ಅನುಮೋದನೆ ನೀಡಿದೆ, ಆದರೆ ಪುರಸಭೆಯವರು ಆರು ನೂರು ಮನೆಗಳು ಮಾತ್ರ ಸಾಕು ಎಂದು ಮಾಹಿತಿ ನೀಡಿದ್ದಾರೆ ಎಂದೆಂತಹ ದುರ್ದೈವ ಎಂದು ಸಚಿವರು ಪುರಸಭೆಯ ಮುಖ್ಯಾಧಿಕಾರಿಗಳನ್ನು ಕೇಳಿದರು.
ಉಪ ನೊಂದಾಣಿಧಿಕಾರಿಗಳ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲಾಗಿಲ್ಲ, ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರಗಳನ್ನು ತರಿಸಲಾಗಿಲ್ಲ ಎಂದು ಲಿಂಗದೇವರು ಸಭೆಯಲ್ಲಿ ದೂರಿದರು. ಡಿ.ಎಸ್.ಎಸ್.ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿ, ಎಸ್.ಸಿ.ಎಸ್.ಟಿ.ಗಳಿಗೆ ಬರುವ ಸರ್ಕಾರಿ ಅನುದಾನದ ವಿವರವನ್ನು ಪ್ರತಿ ಕಚೇರಿಯ ನೋಟಿಸ್ ಬೋರ್ಡ್ ನಲ್ಲಿ ಪ್ರಕಟಿಸಬೇಕು, ವಿದ್ಯಾವಂತ ನಿರುದ್ಯೋಗಿಗಳಿಗೆ ವೃತ್ತಿ ಪರ ತರಬೇತಿ ನೀಡಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿದ್ದ ತಿಪಟೂರು ಡಿ.ವೈ.ಎಸ್.ಪಿ.ಚಂದನಕುಮಾರ್ ಮಾತನಾಡಿ ಸೆಲ್ಯುಷನ್ ಎಂಬ ಮಾದಕ ದ್ರಾವಣವನ್ನು ಮೂಸುವ ಯುವಕರನ್ನು ಜೈಲಿಗೆ ಕಳುಹಿಸಿದ್ದೇವೆ, ದಕ್ಕಲಿಗರ ಕಾಲೋನಿಗೆ ರಾತ್ರಿ ಗಸ್ತು ನೇಮಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಡಿ.ಎಸ್.ಎಸ್.ಮುಖಂಡರಾದ ಮಲ್ಲಿಕಾರ್ಜುನ್, ರಾಜು ಸೇರಿದಂತೆ ತಹಶೀಲ್ದಾರ್ ತೇಜಸ್ವಿನಿ, ತಾ.ಪಂ.ಇ.ಓ.ಅತಿಕ್ ಪಾಷಾ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
