ಬೆಂಗಳೂರು
ಕರ್ನಾಟಕ ಸಿಎಂ ಆಯ್ಕೆ ಕಗ್ಗಂಟು ಪರಿಹಾರವಾಗುತ್ತಿದ್ದಂತೆ, ಡಿಸಿಎಂ ಸ್ಥಾನಕ್ಕೆ ಪೈಪೋಟಿ ಎದುರಾಗಿದೆ. ಡಿಕೆ ಶಿವಕುಮಾರ್ ಜೊತೆಗೆ ಡಿಸಿಎಂ ಆಗಲು ಹಲವು ಹಿರಿಯ ನಾಯಕರು ಲಾಬಿ ಮಾಡುತ್ತಿದ್ದಾರೆ. ಮಾಜಿ ಸಚಿವ, ಶಿರಾ ಶಾಸಕ ಟಿಬಿ ಜಯಚಂದ್ರ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಸದ್ಯಕ್ಕೆ ಡಿಕೆ ಶಿವಕುಮಾರ್ ಒಬ್ಬರೇ ಉಪಮುಖ್ಯಮಂತ್ರಿ ಎಂದು ಹೇಳುವ ಮೂಲಕ ಡಿಸಿಎಂ ಹುದ್ದೆ ಆಕಾಂಕ್ಷಿಗಳಿಗೆ ಶಾಕ್ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಸದ್ಯಕ್ಕೆ ಡಿಕೆ ಶಿವಕುಮಾರ್ ಒಬ್ಬರೇ ಡಿಸಿಎಂ ಎಂದ ಹೈಕಮಾಂಡ್ ನಿರ್ಧಾರ ಮಾಡಿದೆ. ಮೂರು ನಾಲ್ಕು ಡಿಸಿಎಂ ಹುದ್ದೆ ಸೃಷ್ಠಿಸುವ ಉದ್ದೇಶ ಸದ್ಯಕ್ಕೆ ಇಲ್ಲ” ಎಂದು ಹೇಳಿದ್ದಾರೆ.
ಈ ಬೆನ್ನಲ್ಲೇ ಹಿರಿಯ ನಾಯಕರಾದ ಡಾ. ಜಿ. ಪರಮೇಶ್ವರ, ಎಂ ಬಿ ಪಾಟೀಲ್, ಜಮೀರ್ ಅಹ್ಮದ್ ಸೇರಿದಂತೆ ಹಲವು ನಾಯಕರು ಡಿಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಜಿ ಪರಮೇಶ್ವರ್ ಅವರಂತೂ ತನಗೆ ಡಿಸಿಎಂ ಸ್ಥಾನ ನೀಡದಿದ್ದರೆ, ಪಕ್ಷಕ್ಕೆ ಸಂಕಷ್ಟ ಎದುರಾಗಲಿದೆ ಎಂದು ಹೇಳಿದ್ದಾರೆ.
ಹಿರಿಯ ನಾಯಕ ಎಂಬಿ ಪಾಟೀಲ್ ತನಗೆ ಡಿಸಿಎಂ ಸ್ಥಾನ ಬೇಕು ಎಂದು ನೇರವಾಗಿ ಕೇಳದೇ ಇದ್ದರೂ, ಉತ್ತರ ಕರ್ನಾಟಕದಲ್ಲಿ 50 ಜನರನ್ನು ಗೆಲ್ಲಿಸುವಲ್ಲಿ ನನ್ನ ಪಾತ್ರ ಇದೆ. ಹೈ ಕಮಾಂಡ್ ನನಗೆ ಒಳ್ಳೆಯ ಹುದ್ದೆ ಕೊಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಸಿದ್ದರಾಮಯ್ಯ ಆಪ್ತ ಶಾಸಕ ಜಮೀರ್ ಅಹ್ಮದ್ ಅವರಿಗೆ ಕೂಡ ಡಿಸಿಎಂ ಸ್ಥಾನ ನೀಡಬೇಕು ಎಂದು ಮುಸ್ಲಿಂ ಸಮುದಾಯ ಬೇಡಿಕೆ ಇಟ್ಟಿದೆ. ಜಮೀರ್ ಕೂಡ ಡಿಸಿಎಂ ಸ್ಥಾನ ಕೇಳಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಈ ಬಾರಿ 9 ಮುಸ್ಲಿಂ ಶಾಸಕರು ಇದ್ದು, ಡಿಸಿಎಂ ಮತ್ತು ಸಚಿವ ಸ್ಥಾನ ನೀಡಬೇಕು ಎಂದು ವಕ್ಫ್ ಬೋರ್ಡ್ ಅಧ್ಯಕ್ಷರು ಒತ್ತಾಯಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ