ನವದೆಹಲಿ:
ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿ ಕೆಲ ದಿನಗಳ ಹಿಂದೆ ‘ಬಿಜೆಪಿ ಸರ್ಕಾರದ ಭ್ರಷ್ಟಾಚಾರ ರೇಟ್ ಕಾರ್ಡು’ ಎಂದು ಕಾಂಗ್ರೆಸ್ ಜಾಹೀರಾತು ನೀಡಿದ್ದು.
ಇದಕ್ಕೆ ಸಂಬಂಧಪಟ್ಟಂತೆ ಚುನಾವಣಾ ಆಯೋಗ ನೀಡಿರುವ ನೊಟೀಸ್ ಗೆ ಕೆಂಡಾಮಂಡಲವಾಗಿರುವ ಕೈ ಪಕ್ಷ ಆಯೋಗ ಪಕ್ಷಪಾತವಾಗಿ ನಡೆದುಕೊಳ್ಳುತ್ತಿದೆ ಎಂದು ಆಪಾದಿಸಿದೆ. ಚುನಾವಣಾ ಆಯೋಗದ ಮಾನದಂಡಗಳು ಕೇವಲ ವಿರೋಧ ಪಕ್ಷಕ್ಕೆ ಮಾತ್ರ ಅನ್ವಯವಾಗುತ್ತದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರು ಚುನಾವಣಾ ಮಾರ್ಗಸೂಚಿಗಳನ್ನು ಹಲವು ಬಾರಿ ಉಲ್ಲಂಘನೆ ಮಾಡಿದ್ದು ಈ ಬಗ್ಗೆ ಕಾಂಗ್ರೆಸ್ ಚುನಾವಣಾ ಆಯೋಗದ ಗಮನಕ್ಕೆ ಹಲವು ಬಾರಿ ತಂದಿದ್ದರೂ, ಚುನಾವಣಾ ಆಯೋಗ ಒಂದು ನೊಟೀಸ್ ಜಾರಿ ಮಾಡುವುದಾಗಲಿ, ಖಂಡಿಸುವುದಾಗಲಿ ಮಾಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಚುನಾವಣಾ ಆಯೋಗ ಉತ್ತರ ನೀಡಲು ಒದಗಿಸಿರುವ 24 ಗಂಟೆಗಳ ಗಡುವು ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರವು ಇಂದಿಗೆ ಮುಕ್ತಾಯಗೊಳ್ಳುತ್ತಿರುವುದರಿಂದ ಪ್ರತಿಕ್ರಿಯಿಸಲು ಸಾಕಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಮತ್ತು ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳುತ್ತಾರೆ.
ಬಿಜೆಪಿ ನೀಡಿದ್ದ ದೂರಿನ ಆಧಾರದ ಮೇಲೆ ಚುನಾವಣಾ ಆಯೋಗ ಕಾಂಗ್ರೆಸ್ ಪಕ್ಷಕ್ಕೆ ನೊಟೀಸ್ ಜಾರಿ ಮಾಡಿತ್ತು. 2019 ಮತ್ತು 2023 ರ ನಡುವೆ ರಾಜ್ಯದಲ್ಲಿ “ಭ್ರಷ್ಟಾಚಾರ ದರಗಳು” ಪಟ್ಟಿ ಮಾಡುವ ಪೋಸ್ಟರ್ ಮತ್ತು ಜಾಹೀರಾತುಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿ ಬಿಜೆಪಿ ಸರ್ಕಾರವನ್ನು “ಟ್ರಬಲ್ ಇಂಜಿನ್” ಎಂದು ಬಣ್ಣಿಸಿದೆ.
“ಚುನಾವಣಾ ಆಯೋಗದ ಕ್ರಮಗಳು ಸಂವಿಧಾನದ 14 ಮತ್ತು 21 ನೇ ವಿಧಿಗಳ ಪ್ರಾಥಮಿಕ ಉಲ್ಲಂಘನೆಯಾಗಿದೆ, ಇದು ಆಡಳಿತಾತ್ಮಕ ಕ್ರಮದಲ್ಲಿ ಅನಿಯಂತ್ರಿತತೆಯ ವಿರುದ್ಧ ಮತ್ತು ಪಕ್ಷಪಾತ, ಅಧಿಕೃತ ದುರುದ್ದೇಶಪೂರಿತ ಕೃತ್ಯಗಳು, ಸಹಜ ನ್ಯಾಯದ ಉಲ್ಲಂಘನೆಗಳ ವಿರುದ್ಧ ಮೂಲಭೂತ ಖಾತರಿಯನ್ನು ಒದಗಿಸುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ