ಬೆಂಗಳೂರು : ವಾಹನ ಸವಾರರೇ ಈ ರಸ್ತೆಯಲ್ಲಿ ಓಡಾಡುವಾಗ ಇರಲಿ ಎಚ್ಚರ

ಬೆಂಗಳೂರು

    ಬೆಂಗಳೂರು ಟು ಮೈಸೂರು ರೋಡ್  ತುಂಬಾ ನೂರಾರು ಗುಂಡಿಗಳಾಗಿವೆ. ಈ ಗುಂಡಿಗಳಿಂದಲೇ ಮೈಸೂರು ರೋಡ್ ನಲ್ಲಿ ವಿಪರೀತವಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಗುಂಡಿಗಳನ್ನು ತಪ್ಪಿಸಲು ಹೋಗಿ ವಾಹನ ಸವಾರರು ಗುಂಡಿಯಲ್ಲಿ ಪಲ್ಟಿ ಹೊಡೆಯುವಂತಹ ಘಟನೆಗಳು ಕೂಡ ನಡೆದಿವೆ. ಮೈಸೂರು ರೋಡ್ ‌ನಲ್ಲೇ ಸುಮಾರು ನೂರಕ್ಕೂ ಹೆಚ್ಚು ಗುಂಡಿಗಳಿವೆ. ಇದರಿಂದ ವಾಹನ ಸವಾರರು ಗುಂಡಿಗಳನ್ನು ತಪ್ಪಿಸಲು ಅಕ್ಕಪಕ್ಕದ ಏರಿಯಾಗಳ ಮೂಲಕ ತಮ್ಮ ‌ಮನೆ ಮತ್ತು ಕಚೇರಿ ಸೇರುತ್ತಿದ್ದಾರೆ. 

   ನಗರದಲ್ಲಿನ ಗುಂಡಿ ಮುಚ್ಚಲು ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇವೆ ಅಂತ ಪಾಲಿಕೆ ಹೇಳ್ತಾ ಇದೆ. ಆದರೆ ನಗರದ ಪ್ರಮುಖ ರಸ್ತೆಗಳಲ್ಲಿಯೇ ಗುಂಡಿಗಳು ಬಾಯ್ತೆರೆದು ನಿಂತಿವೆ. ಬೆಂಗಳೂರು ಟು ಮೈಸೂರು ಸಂಪರ್ಕ ಕಲ್ಪಿಸುವ ಬಾಪೂಜಿ ನಗರದ ಸ್ಯಾಟಲೈಟ್ ಬಸ್ ಸ್ಟ್ಯಾಂಡ್ ಬಳಿ ಇರುವ ಗುಂಡಿಯಿಂದ ದಿನನಿತ್ಯ ನಾಲ್ಕೈದು ಮಂದಿ ಬೀಳುವುದು ಸರ್ವೇ ಸಾಮಾನ್ಯ ಆಗಿದೆ. ಇನ್ನು ರಸ್ತೆಯಲ್ಲೇ ನೀರು ನಿಂತ ಪರಿಣಾಮ ಎಲ್ಲಿ ಗುಂಡಿಗಳು ಇವೆ ಅನ್ನೋದೇ ಜನರಿಗೆ ತಿಳಿಯುತ್ತಿಲ್ಲ. ಇಲ್ಲಿ ಪ್ರತಿದಿನ ನಾಲ್ಕೈದು ಜನರು ಬೀಳುತ್ತಾರೆ, ನಿನ್ನೆ ರಾತ್ರಿ ಮಳೆ ಬಂದಾಗ ಒಂದು ಆಟೋ ಪಲ್ಟಿ ಆಗಿತ್ತು ಎಂದು ಸ್ಥಳೀಯ ನಿವಾಸಿ ಶಂಕರ್ ಅವರು ತಿಳಿಸಿದರು.

   ಇನ್ನು ಈ ಪ್ರಮುಖ ರಸ್ತೆಯಲ್ಲಿ ಮುಕ್ಕಾಲು ಭಾಗ ಕಾಂಕ್ರಿಟ್ ಹಾಕಲಾಗಿದ್ದು, ಉಳಿದ ಕಾಲು ಭಾಗಕ್ಕೆ ಡಾಂಬರು ಹಾಕಲಾಗಿದೆ, ಅದನ್ನು ಸಹ ಜಲಮಂಡಳಿ ಅಗೆದು ಪೈಪ್ ಲೈನ್ ಕಾಮಗಾರಿ ಮಾಡಿದೆ. ಆದ್ರೆ ಸರಿಯಾಗಿ ಮುಚ್ಚಿ ಹೋಗಿಲ್ಲ, ಇತ್ತ ರೋಡ್ ನ ಸೈಡ್ ಗೆ ಬಂದರೆ ಜಾರಿ ಬೀಳುವ ಸಂಭವವೇ ಹೆಚ್ಚು. ಅಲ್ಲದೆ ಈ ರಸ್ತೆಯಲ್ಲಿ ಓಡಾಟ ಮಾಡುವುದೇ ಇತ್ತೀಚೆಗೆ ಸಾಹಸವಾಗಿ ಪರಿಣಮಿಸಿದೆ ಎಂದು ವಾಹನ ಸವಾರ ಸಿದ್ಧರಾಜು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

   ಒಟ್ನಲ್ಲಿ ಜನರ ಈ ಪಾಡು ನೋಡಲಾಗದೆ ಪಾಪ ಟ್ರಾಫಿಕ್ ಪೊಲೀಸರೇ ಕಾಂಕ್ರಿಟ್ ತಂದು ಗುಂಡಿ ಮುಚ್ಚಿದ್ದಾರೆ. ಇಲ್ಲವಾದರೆ ಮತ್ತೆ ಟ್ರಾಫಿಕ್ ಜಾಮ್ ಆಗಿ ಅವರಿಗೆ ತಲೆನೋವು ಆಗಲಿದೆ. ಟ್ರಾಫಿಕ್ ಪೊಲೀಸರು ಈ ಬಗ್ಗೆ ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ತ್ವರಿತವಾಗಿ ಮೈಸೂರು ರಸ್ತೆ ಸರಿ ಮಾಡುವತ್ತ ಅಧಿಕಾರಿಗಳು ಗಮನ ಹರಿಸಲಿ.

Recent Articles

spot_img

Related Stories

Share via
Copy link