ಕಾರವಾರ:
ಶಿರೂರು ಗುಡ್ಡಕುಸಿತದ ನಂತರ ಸಂಚಾರ ಸ್ಥಗಿತಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ-66 ಅನ್ನು ಎರಡು ವಾರಗಳ ಬಳಿಕ ಮತ್ತೆ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತಿದೆ.
ಈ ಸಂಬಂಧ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಅವರು, ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಅವರಿಗೆ ಪತ್ರ ಬರೆದಿದ್ದು, ಗುರುವಾರದೊಳಗೆ ರಾಷ್ಟ್ರಿಯ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಶಿರೂರಿನಲ್ಲಿ ಗುಡ್ಡ ಕುಸಿತದ ನಂತರ NH-66 ಸಂಪೂರ್ಣ ಬಂದ್ ಆಗಿತ್ತು. ವಾಹನಗಳನ್ನು ಪರ್ಯಾಯ ಮಾರ್ಗದಲ್ಲಿ ತಿರುಗಿಸಲಾಗಿದೆ. ಅಂಕೋಲಾದಿಂದ ಶಿರೂರುವರೆಗೆ ವಾಹನಗಳ ಉದ್ದನೆಯ ಸಾಲು ಕಂಡುಬರುತ್ತಿದೆ. ಇದೀಗ ಹೆದ್ದಾರಿಯಲ್ಲಿ ಬಿದ್ದಿದ್ದ ಮಣ್ಣನ್ನು ಸಂಪೂರ್ಣ ತೆರವುಗೊಳಿಸಲಾಗಿದ್ದು, ಈ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
“ಕೆಲವು ಷರತ್ತುಗಳ ಆಧಾರದ ಮೇಲೆ ಹೆದ್ದಾರಿಯ ಒಂದು ಬದಿಯಲ್ಲಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲು ನಾನು ಎಸ್ಪಿಗೆ ಪತ್ರ ಬರೆದಿದ್ದೇನೆ” ಎಂದು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಅವರು ಹೇಳಿದ್ದಾರೆ.
ಈ ಪ್ರದೇಶದಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳು ಕೆಲವು ಸಲಹೆಗಳನ್ನು ನೀಡಿದ್ದಾರೆ. ಅದರ ಪ್ರಕಾರ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೆಲವು ಸಲಹೆಗಳನ್ನು ನೀಡಿದೆ. ಅದರಲ್ಲಿ ಜಿಎಸ್ಐನಿಂದ ತರಬೇತಿ ಪಡೆದ ಸ್ಪಾಟರ್‌ಗಳ ನೇಮಕಾತಿಯೂ ಸೇರಿದೆ” ಎಂದು ಅವರು ವಿವರಿಸಿದರು.
ಮುಂದಿನ ಕೆಲವು ದಿನಗಳವರೆಗೆ ಜಿಲ್ಲೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಭೂಕುಸಿತದ ಸಂದರ್ಭದಲ್ಲಿ , ಈ ಪ್ರದೇಶವನ್ನು ತಕ್ಷಣವೇ ಬ್ಯಾರಿಕೇಡ್ ಮೂಲಕ ಬಂದ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಡಿಸಿಯ ಪತ್ರವನ್ನು ಸ್ವೀಕರಿಸಿದ್ದು, ಆದೇಶ ಹೊರಡಿಸಿದ ನಂತರ ರಾಷ್ಟ್ರೀಯ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಕೇವಲ ಒಂದು ಲೇನ್ ತೆರೆಯಲಾಗುವುದು ಮತ್ತು ಇಂತಹ ಪರಿಸ್ಥಿತಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕಾಗಿರುವುದರಿಂದ ವೇಗದ ಮಿತಿಯನ್ನು ಗಂಟೆಗೆ 20 ಕಿಮೀಗೆ ನಿರ್ಬಂಧಿಸುವಂತಹ ಕೆಲವು ಷರತ್ತುಗಳಿವೆ ಎಂದು ಎಸ್ಪಿ ನಾರಾಯಣ್ ಅವರು ತಿಳಿಸಿದ್ದಾರೆ.